ನಿರ್ಭಯಾ ಪ್ರಕರಣಕ್ಕೆ 7 ವರ್ಷ: ಬೆಂಗಳೂರಿನಲ್ಲಿ ಕರಾಳ ದಿನಾಚರಣೆ

Update: 2019-12-16 13:38 GMT

ಬೆಂಗಳೂರು, ಡಿ.16: ದಿಲ್ಲಿಯಲ್ಲಿ ಅತ್ಯಾಚಾರಕ್ಕೊಳಗಾದ ಯುವತಿ ನಿರ್ಭಯಾ ಪ್ರಕರಣಕ್ಕೆ ಏಳು ವರ್ಷಗಳು ಕಳೆಯುತ್ತಿರುವ ಹಿನ್ನೆಲೆಯಲ್ಲಿ ಆಲ್ ಇಂಡಿಯಾ ಮಹಿಳಾ ಸಾಂಸ್ಕೃತಿಕ ಸಂಘಟನೆ ವತಿಯಿಂದ ನಗರದಲ್ಲಿಂದು ಕರಾಳ ದಿನವನ್ನಾಗಿ ಆಚರಣೆ ಮಾಡಲಾಯಿತು.

ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಜಮಾಯಿಸಿದ್ದ ಸಂಘಟನೆಯ ಕಾರ್ಯಕರ್ತರು, ನಿರ್ಭಯಾ ಅತ್ಯಾಚಾರದ ಆರೋಪಿಗಳಿಗೆ ಇದುವರೆಗೂ ಶಿಕ್ಷೆಯಾಗದೆ ಇರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಸಾರ್ವಜನಿಕರಿಂದ ಸಹಿ ಸಂಗ್ರಹಿಸುವ ಮೂಲಕ ಶೀಘ್ರ ನ್ಯಾಯ ಒದಗಿಸುವಂತೆ ಆಗ್ರಹಿಸಿದರು.

ಸಂಘಟನೆ ಬೆಂಗಳೂರು ಜಿಲ್ಲಾ ಕಾರ್ಯದರ್ಶಿ ಎ.ಶಾಂತ ಮಾತನಾಡಿ, ದೇಶದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಗಳು ಮತ್ತೆ ಮತ್ತೆ ಮರುಕಳಿಸುತ್ತಲೇ ಇವೆ. ಅವುಗಳನ್ನು ನಿಯಂತ್ರಿಸುವಲ್ಲಿ ಅಧಿಕಾರದಲ್ಲಿರುವ ಸರಕಾರಗಳು ಸಂಪೂರ್ಣವಾಗಿ ವಿಫಲವಾಗಿವೆ ಎಂದು ದೂರಿದರು.

ಇತ್ತೀಚಿಗೆ ಆಂಧ್ರಪ್ರದೇಶದಲ್ಲಿ ನಡೆದ ವೈದ್ಯ ವಿದ್ಯಾರ್ಥಿನಿ ಅತ್ಯಾಚಾರ ಪ್ರಕರಣದಿಂದ ಹಿಡಿದು, ಉನ್ನಾವೊ ಅತ್ಯಾಚಾರ, ಉತ್ತರ ಪ್ರದೇಶ, ತ್ರಿಪುರ, ದಿಲ್ಲಿ, ಗುಜರಾತ್ ರಾಜ್ಯಗಳಲ್ಲಿ ಅಧಿಕವಾಗಿ ಮಹಿಳೆಯರು ಬಲಾತ್ಕಾರಗಳಿಗೆ ಬಲಿಯಾಗುತ್ತಿದ್ದಾರೆ. ಕರ್ನಾಟಕದಲ್ಲಿಯೂ ವಿದ್ಯಾರ್ಥಿನಿಯರು, ಯುವತಿಯರಿಗೆ ಸೂಕ್ತ ರಕ್ಷಣೆಯಿಲ್ಲದಂತಾಗಿದೆ ಎಂದು ಅವರು ದೂರಿದರು.

ದಿಲ್ಲಿಯಲ್ಲಿ ನಡೆದ ನಿರ್ಭಯಾ ಘಟನೆಯ ನಂತರ ದೇಶದಾದ್ಯಂತ ಹೋರಾಟ ನಡೆಯಿತು. ಆದರೆ, ತಪ್ಪು ಮಾಡಿದ ಆರೋಪಿಗಳಿಗೆ ಇದುವರೆಗೂ ಶಿಕ್ಷೆಯಾಗಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವರು ಮತ್ತಷ್ಟು ಕ್ರೂರವಾದ ಕೆಲಸಗಳನ್ನು ಮಾಡುತ್ತಿದ್ದಾರೆ. ಇತ್ತೀಚಿಗೆ ಉನ್ನಾವೋ ಅತ್ಯಾಚಾರ ಸಂತ್ರಸ್ಥೆಗೆ ಬೆಂಕಿ ಹಚ್ಚಿದ್ದು ಉದಾಹರಣೆಯಾಗಿದೆ ಎಂದರು.

ಅತ್ಯಾಚಾರ ಪ್ರಕರಣಗಳ ತ್ವರಿತಗತಿಯ ವಿಚಾರಣೆ ನಡೆಸಿ ಅಪರಾಧಿಗಳಿಗೆ ಕಠಿಣ ಶಿಕ್ಷೆಯನ್ನು ಖಾತ್ರಿ ಪಡಿಸಲು ಫಾಸ್ಟ್ ಟ್ರಾಕ್ ಕೋರ್ಟ್‌ಗಳನ್ನು ಸ್ಥಾಪಿಸಬೇಕು. ಅದೇ ರೀತಿ, ಮಾಧ್ಯಮಗಳಲ್ಲಿ ಪ್ರಸಾರವಾಗುವ ಅಶ್ಲೀಲ ಕಾರ್ಯಕ್ರಮಗಳಿಗೆ, ವೆಬ್ಸೈಟ್‌ಗಳಿಗೆ ನಿಷೇಧ ಹೇರಬೇಕು ಎಂದು ಅವರು ಮನವಿ ಮಾಡಿದರು.

ನಿರ್ಭಯಾ ನಿಧಿಯನ್ನು ದೌರ್ಜನ್ಯ ಸಂತ್ರಸ್ತರಿಗೆ, ಮಹಿಳಾ ರಕ್ಷಣೆಗಾಗಿ ಕೈಗೊಳ್ಳುವ ಕೆಲಸಗಳಿಗೆ ಸಂಪೂರ್ಣವಾಗಿ ಉಪಯೋಗಿಸಬೇಕು. ಮಹಿಳೆಯರಿಗೆ ಭದ್ರತೆ ಕಲ್ಪಿಸಲು ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು. ದೌರ್ಜನ್ಯಗಳ ನಿಯಂತ್ರಣಕ್ಕೆ ಮುಂದಾಗಬೇಕು ಎಂದು ಅವರು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯ ಸದಸ್ಯರಾದ ರುಕ್ಮಿಣಿ, ಸಿಂಧೂರ, ವೈಷ್ಣವಿ, ಕಾರ್ತಿಕ, ಅಲಕಾ ರಾವ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News