ಪೌರತ್ವ ತಿದ್ದುಪಡಿ ಕಾಯ್ದೆ ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಪಿಐಎಲ್ ದಾಖಲು: ಹಿರಿಯ ನ್ಯಾಯವಾದಿ ರಹ್ಮತುಲ್ಲಾ ಕೊತ್ವಾಲ್

Update: 2019-12-19 08:31 GMT

ಬೆಂಗಳೂರು, ಡಿ.16: ಕೇಂದ್ರ ಸರಕಾರ ಜಾರಿಗೆ ತರಲು ಮುಂದಾಗಿರುವ ಪೌರತ್ವ ತಿದ್ದುಪಡಿ ಕಾಯ್ದೆ-2019 ಭಾರತೀಯ ಸಂವಿಧಾನದ ಕಲಂ 14, 21 ಹಾಗೂ 25 ಹಾಗೂ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಭಾರತ ಭಾಗಿಯಾಗಿರುವ ಹಲವಾರು ಒಪ್ಪಂದಗಳ ವಿರುದ್ಧವಾಗಿದೆ ಎಂದು ಹಿರಿಯ ನ್ಯಾಯವಾದಿ ರಹ್ಮತುಲ್ಲಾ ಕೊತ್ವಾಲ್ ತಿಳಿಸಿದರು.

ಸೋಮವಾರ ನಗರದ ಕಬ್ಬನ್‌ ಪೇಟೆ ಮುಖ್ಯರಸ್ತೆಯಲ್ಲಿರುವ ಹಝ್ರತ್ ಹಮೀದ್ ಶಾ ಕಾಂಪ್ಲೆಕ್ಸ್‌ನಲ್ಲಿರುವ ಅವರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಇಂದು ದಾಖಲು ಮಾಡಲಾಗಿದೆ ಎಂದರು.

ಯಾವುದೇ ದೇಶ ಪೌರತ್ವ ನೀಡಲು ಧರ್ಮದ ಆಧಾರದಲ್ಲಿ ತಾರತಮ್ಯ ಮಾಡುವಂತಿಲ್ಲ ಎಂದು ಘೋಷಿಸಲ್ಪಟ್ಟಿರುವ ಅಂತರ್‌ರಾಷ್ಟ್ರೀಯ ಮಾನವ ಹಕ್ಕುಗಳ ಘೋಷಣೆಯ ಸೆಕ್ಷನ್ 15 ಹಾಗೂ ಅಂತರ್‌ರಾಷ್ಟ್ರೀಯ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಒಡಂಬಡಿಕೆಯ ಸೆಕ್ಷನ್ 26ರ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಅವರು ಹೇಳಿದರು.

ಪೌರತ್ವ ತಿದ್ದುಪಡಿ ಕಾಯ್ದೆ ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಸಾಮಾಜಿಕ ಕಾರ್ಯಕರ್ತ ಮುಹಮ್ಮದ್ ಆರಿಫ್ ಜಮೀಲ್ ಎಂಬುವವರ ಮೂಲಕ ಪಿಐಎಲ್ ದಾಖಲು ಮಾಡಲಾಗಿದೆ. ನಮ್ಮ ಮನವಿಯನ್ನು ನ್ಯಾಯಾಲಯ ಮಾನ್ಯ ಮಾಡಿದ್ದು, ನಾಳೆ ಅಥವಾ ನಾಡಿದ್ದು ವಿಚಾರಣೆ ಕೈಗೆತ್ತಿಕೊಳ್ಳಲಿದೆ ಎಂದು ರಹ್ಮತುಲ್ಲಾ ಕೊತ್ವಾಲ್ ತಿಳಿಸಿದರು.

ಹೈಕೋರ್ಟ್‌ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಪ್ರಶ್ನಿಸಿ ಸಲ್ಲಿಕೆಯಾಗಿರುವ ಮೊದಲ ಪಿಐಎಲ್ ನಮ್ಮದಾಗಿದ್ದು, ತುರ್ತು ವಿಚಾರಣೆಗೆ ಕೈಗೆತ್ತಿಕೊಳ್ಳುವಂತೆ ಮನವಿ ಮಾಡಲಾಗಿದೆ. ಸುಪ್ರೀಂಕೋರ್ಟ್‌ನಲ್ಲಿಯೂ ಹಲವಾರು ಅರ್ಜಿಗಳು ದಾಖಲಾಗಿವೆ. ಅವುಗಳಿಗೆ ಪೂರಕವಾಗಿಯೇ ಈ ಅರ್ಜಿಯ ವಿಚಾರಣೆಯನ್ನು ನಡೆಸುವುದಾಗಿ ಹೈಕೋರ್ಟ್ ತಿಳಿಸಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News