ಜಾಮಿಯಾ ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯ ಖಂಡಿಸಿ ಬೆಂಗಳೂರಿನಲ್ಲಿ ವಿದ್ಯಾರ್ಥಿ ಸಂಘಟನೆಗಳಿಂದ ಪ್ರತಿಭಟನೆ

Update: 2019-12-19 08:30 GMT

ಬೆಂಗಳೂರು, ಡಿ.16: ಕೇಂದ್ರ ಸರಕಾರ ಜಾರಿಗೆ ಮುಂದಾಗಿರುವ ಪೌರತ್ವ (ತಿದ್ದುಪಡಿ) ಕಾಯ್ದೆಯನ್ನು ವಿರೋಧಿಸಿ ಹಾಗೂ ದಿಲ್ಲಿ ಜಾಮಿಯಾ ಮಿಲ್ಲಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಮೇಲೆ ಪೊಲೀಸರು ಲಾಠಿಚಾರ್ಜ್ ನಡೆಸಿದ್ದನ್ನು ಖಂಡಿಸಿ ವಿವಿಧ ವಿದ್ಯಾರ್ಥಿ ಸಂಘಟನೆಗಳಿಂದು ನಗರದಲ್ಲಿ ಪ್ರತಿಭಟನೆ ನಡೆಸಿದರು.

ನಗರದ ಪುರಭವನದ ಮುಂಭಾಗ ಎಐಡಿಎಸ್‌ಓ ವಿದ್ಯಾರ್ಥಿ ಸಂಘಟನೆಯ ನೇತೃತ್ವದಲ್ಲಿ ವಿವಿಧ ವಿದ್ಯಾರ್ಥಿ, ಯುವಜನರ ಸಂಘಗಳು ಸೇರಿದಂತೆ ಪ್ರಗತಿಪರ ಸಂಘ-ಸಂಸ್ಥೆಗಳ ನೇತೃತ್ವದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ಪೊಲೀಸರ ದೌರ್ಜನ್ಯವನ್ನು ಖಂಡಿಸಿದರು.

ದಿಲ್ಲಿಯ ಜಾಮಿಯಾ ವಿವಿಯೊಳಗೆ ಅನುಮತಿ ಇಲ್ಲದೆ ಪ್ರವೇಶ ಮಾಡಿ, ಅಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳನ್ನು ಹಾಗೂ ಅಧ್ಯಾಪಕರನ್ನು ಥಳಿಸಿದ್ದಾರೆ. ಇದು ಅತ್ಯಂತ ಅಮಾನವೀಯ ಕೃತ್ಯ. ಪ್ರಜಾಪ್ರಭುತ್ವ ದೇಶದಲ್ಲಿ ಸಂವಿಧಾನ ನೀಡಿರುವ ಪ್ರತಿಭಟನೆಯ ಹಕ್ಕನ್ನು ಕಸಿಯಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪೊಲೀಸರು ಕ್ಯಾಂಪಸ್‌ನೊಳಗೆ ಪ್ರವೇಶ ಮಾಡಿ, ಆವರಣದಲ್ಲಿದ್ದ ಮಸೀದಿಯೊಳಗೆ ಪ್ರಾರ್ಥನೆ ಮಾಡುತ್ತಿದ್ದವರ ಮೇಲೂ ದಾಳಿ ನಡೆಸಿದ್ದಾರೆ. ವಿದ್ಯಾರ್ಥಿಗಳ ಮೇಲೆ ಅಶ್ರುವಾಯು ದಾಳಿ ನಡೆಸುವ ಮೂಲಕ ಪ್ರತಿಭಟನೆಯನ್ನು ದಮನಿಸಲು ಮುಂದಾಗಿರುವ ಕ್ರಮ ಖಂಡನೀಯ ಎಂದು ಪ್ರತಿಭಟನಾಕಾರರು ಆಕ್ಷೇಪ ವ್ಯಕ್ತಪಡಿಸಿದರು.

ಕೇಂದ್ರ ಸರಕಾರ ಜಾರಿಗೆ ಮುಂದಾಗಿರುವ ಪೌರತ್ವ ತಿದ್ದುಪಡಿ ಕಾಯ್ದೆಯು ನಮ್ಮ ಹಕ್ಕುಗಳನ್ನು ದಮನ ಮಾಡುವಂತಹುದಾಗಿದೆ. ಇದು ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ಆಶಯಗಳಿಗೆ ವಿರುದ್ಧವಾಗಿದೆ. ನಮ್ಮ ಸಂವಿಧಾನದಲ್ಲಿ ಎಲ್ಲರಿಗೂ ಸಮಾನ ಅವಕಾಶ ನೀಡಬೇಕು ಎಂದಿದೆ. ಆದರೆ, ಬಿಜೆಪಿಯು ಮನಸ್ಸಿಗೆ ಬಂದಂತೆ ಕಾಯ್ದೆಗಳು ಮಾಡಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.

ದೇಶದ ಗೃಹಮಂತ್ರಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕುಮ್ಮಕ್ಕಿನಿಂದಲೇ ಜಾಮಿಯಾ ವಿಶ್ವವಿದ್ಯಾಲಯದೊಳಗೆ ಪೊಲೀಸರು ಪ್ರವೇಶಿಸುವ ಮೂಲಕ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ನಡೆಸಿದ್ದಾರೆ. ಇದು ಪ್ರಜಾಪ್ರಭುತ್ವ ದೇಶದಲ್ಲಿ ಅಪ್ರಜಾಸತಾತ್ಮಕ ಕೆಲಸವಾಗಿದೆ.

-ಅಪ್ಸರ್ ಅಹಮದ್, ಜಾಮಿಯಾ ವಿವಿಯ ಮಾಜಿ ವಿದ್ಯಾರ್ಥಿ

ದಿಲ್ಲಿಯ ಜಾಮಿಯಾ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ಶಾಂತಿಯುತವಾಗಿಯೇ ಎನ್‌ಆರ್‌ಸಿ ಹಾಗೂ ಸಿಎಬಿ ವಿರುದ್ಧ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದರು. ಆದರೆ, ಏಕಾಏಕಿ ಪೊಲೀಸರು ಒಳನುಸುಳಿ ವಿದ್ಯಾರ್ಥಿಗಳ ಮೇಲೆ ದಾಳಿ ನಡೆಸಿದ್ದಾರೆ. ಹೊಡೆದಾಟ ಪ್ರಜಾಪ್ರಭುತ್ವ ವಿರೋಧಿಯಾಗಿದೆ.

-ಅಬ್ದುಲ್‌ ಖಾನ್, ವಿದ್ಯಾರ್ಥಿ ನಾಯಕ

ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಕೇಂದ್ರ ಸರಕಾರ ನಡೆದುಕೊಳ್ಳುತ್ತಿದೆ. ನಮಗೆ ಎಲ್ಲರಿಗೂ ಸಮಾನವಾದ ಅವಕಾಶಗಳನ್ನು ನೀಡಲಾಗಿದೆ. ಅದನ್ನು ಕಸಿಯಲು ಸಾಧ್ಯವಿಲ್ಲ. ಅಮಿತ್ ಶಾ ಕುಮ್ಮಕ್ಕಿನಿಂದ ದೇಶದಲ್ಲಿ ಹಿಂಸಾಚಾರ ನಡೆಯುತ್ತಿದೆ. ಹೀಗಾಗಿ, ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು.

-ವಿಶೇಷ್, ಸಂಶೋಧನಾ ವಿದ್ಯಾರ್ಥಿ

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News