ಗೌರಿ ಮೆಮೋರಿಯಲ್ ಟ್ರಸ್ಟ್ ವಿರುದ್ಧ ಸುಳ್ಳು ಆರೋಪ: ವರದಿಗಾರನ ವಿರುದ್ಧ ಕ್ರಿಮಿನಲ್ ಮೊಕದ್ದಮೆ- ಕೆ.ಎಲ್.ಅಶೋಕ್

Update: 2019-12-16 15:13 GMT
ಕೆ.ಎಲ್.ಅಶೋಕ್

ಬೆಂಗಳೂರು, ಡಿ.16: ಹಿರಿಯ ಪತ್ರಕರ್ತೆ ಗೌರಿ ಮೆಮೋರಿಯಲ್ ಟ್ರಸ್ಟಿನ ಹಣಕಾಸಿನ ವ್ಯವಹಾರ ಕುರಿತು ಸುಳ್ಳು ಆರೋಪಗಳಿರುವ ವರದಿ ಪ್ರಕಟಿಸಿರುವ ವರದಿಗಾರನ ವಿರುದ್ಧ ಸಿವಿಲ್ ಮತ್ತು ಕ್ರಿಮಿನಲ್ ಸ್ವರೂಪದ ಮಾನನಷ್ಟ ಮೊಕದ್ದಮೆ ಹೂಡಲಾಗುವುದು ಎಂದು ಟ್ರಸ್ಟ್ ಕಾರ್ಯದರ್ಶಿ ಕೆ.ಎಲ್.ಅಶೋಕ್ ತಿಳಿಸಿದ್ದಾರೆ.

ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟ್ರಸ್ಟಿನ ಹಣಕಾಸಿನ ವ್ಯವಹಾರ ಕುರಿತು ಬಲಪಂಥೀಯರ ಮುಖವಾಣಿ ಎಂದೇ ಬಿಂಬಿತವಾಗಿರುವ ಕನ್ನಡ ದಿನಪತ್ರಿಕೆಯೊಂದರಲ್ಲಿ ಸುಳ್ಳು ವರದಿ ಪ್ರಕಟಿಸಲಾಗಿದೆ. ಜೊತೆಗೆ, ಟ್ರಸ್ಟಿಗಳ ಮೇಲೆ ಅಪಪ್ರಚಾರದ ವದಂತಿಗಳನ್ನು ಹರಡಲಾಗಿದೆ ಎಂದು ಆರೋಪಿಸಿದರು.

ಟ್ರಸ್ಟಿನ ಸದಸ್ಯರ ಪೈಕಿ ವಿವಿಧ ಸಂಘಟನೆ ಮತ್ತು ಸಮುದಾಯಕ್ಕೆ ಸೇರಿದ ಜನರಿದ್ದಾರೆ. ಟ್ರಸ್ಟಿನ ಆರಂಭದಿಂದ ಇಲ್ಲಿಯವರೆಗೆ ನಡೆಸಿರುವ ನಾಲ್ಕು ಕಾರ್ಯಕ್ರಮಗಳಿಗೆ ತಗಲಿದ ಖರ್ಚು-ವೆಚ್ಚಗಳನ್ನು ಸಾರ್ವಜನಿಕವಾಗಿ ಪ್ರಕಟಿಸುವ ಮೂಲಕ ಪಾರದರ್ಶಕತೆ ತೋರಲಾಗಿದೆ. ಆಯಾ ಕಾರ್ಯಕ್ರಮಗಳಿಗೆ ಬೇಕಾದ ಹಣವನ್ನು ಹಿತೈಷಿಗಳಿಂದ ಸಂಗ್ರಹಿಸಿಕೊಂಡು ಮತ್ತು ಬ್ಯಾಂಕಿನ ಮೂಲಕ ವ್ಯವಹಾರವನ್ನು ನಡೆಸಿಕೊಂಡು ಬರಲಾಗಿದೆ ಎಂದು ಮಾಹಿತಿ ನೀಡಿದರು.

ಕೋಟಿಗಟ್ಟಲೆ ಹಣ ಸಂಗ್ರಹಿಸುವ ಇರಾದೆಯಾಗಲೀ, ಪ್ರಯತ್ನವನ್ನಾಗಲೀ ನಮ್ಮ ಟ್ರಸ್ಟಿನ ಆಶಯದಲ್ಲೇ ಇಲ್ಲ ಎಂದ ಅವರು, ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರ ನೆನಪಿನಲ್ಲಿ ಪತ್ರಿಕೆಯೊಂದನ್ನು ಹೊರ ತರುವ ಗೌರಿ ಮೀಡಿಯಾ ಟ್ರಸ್ಟ್‌ಗೆ ಹಣದ ನೆರವು ನೀಡುವುದು ನಮ್ಮ ಟ್ರಸ್ಟಿನ ಗುರಿಯಾಗಿದೆ. ಆದರೆ, ಸಂಪೂರ್ಣ ಸುಳ್ಳುಗಳನ್ನೆ ವರದಿ ಮಾಡಿ ಪ್ರಕಟಿಸಲಾಗಿದ್ದು, ಈ ಸಂಬಂಧ ಮಾನನಷ್ಟ ಮೊಕದ್ದಮೆ ಹೂಡಲಿದ್ದೇವೆ ಎಂದು ಅಶೋಕ್ ಹೇಳಿದರು.

‘ಬಲಪಂಥೀಯರಿಗೆ ಪುಕ್ಕಟ್ಟೆ ಭದ್ರತೆ’

ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರತೀಕಾರಕ್ಕೆ ಸಜ್ಜು ಎಂದೆಲ್ಲಾ ಸುಳ್ಳು ಸುದ್ದಿಗಳನ್ನು ಹಬ್ಬಿಸಿ, ಬಲಪಂಥೀಯ ಮತ್ತು ಕೋಮುವಾದಿಗಳಿಗೆ ಸರಕಾರದಿಂದ ಪುಕ್ಕಟ್ಟೆ ಪೊಲೀಸ್ ಭದ್ರತೆ ಪಡೆದುಕೊಳ್ಳುವ ಸಂಚು ಸಹ ಇರಬಹುದು?

-ಕೆ.ಎಲ್.ಅಶೋಕ್, ಟ್ರಸ್ಟ್ ಕಾರ್ಯದರ್ಶಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News