×
Ad

ಎಸ್ಸಿಎಸ್ಪಿ-ಟಿಎಸ್ಪಿ ಅಡಿಯಲ್ಲಿ 11,861 ಕೋಟಿ ರೂ.ವೆಚ್ಚ: ಡಿಸಿಎಂ ಗೋವಿಂದ ಕಾರಜೋಳ

Update: 2019-12-16 21:15 IST

ಬೆಂಗಳೂರು, ಡಿ.16: 2019-20ನೇ ಸಾಲಿನಲ್ಲಿ ಎಸ್ಸಿಎಸ್ಪಿ-ಟಿಎಸ್ಪಿ ಅಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಅಭಿವೃದ್ಧಿಗಾಗಿ 30,445 ಕೋಟಿ ರೂ.ಗಳನ್ನು ಒದಗಿಸಲಾಗಿದ್ದು, ಈವರೆಗೆ 11,861.19 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದೆ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದರು.

ಸೋಮವಾರ ವಿಕಾಸಸೌಧದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಎಸ್ಸಿಎಸ್ಪಿ-ಟಿಎಸ್ಪಿ ರಾಜ್ಯ ಅಭಿವೃದ್ಧಿ ಪರಿಷತ್ತಿನ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಮಾಜ ಕಲ್ಯಾಣ ಇಲಾಖೆ ಅಡಿ ಪರಿಶಿಷ್ಟ ಜಾತಿ ಕಲ್ಯಾಣಕ್ಕಾಗಿ ವಿವಿಧ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ 4649.82 ಕೋಟಿ ರೂ.ಒದಗಿಸಿದ್ದು, 1150.76 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದೆ ಎಂದರು.

ಪರಿಶಿಷ್ಟ ಪಂಗಡಗಳ ಕಲ್ಯಾಣಕ್ಕಾಗಿ 1389.18 ಕೋಟಿ ರೂ.ಒದಗಿಸಿದ್ದು, 515.76 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದೆ. ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳಲ್ಲಿ 1,69,374 ಎಸ್ಸಿ ಮತ್ತು 33,098 ಪರಿಶಿಷ್ಟ ಪಂಗಡಗಳ ಹೊಸ ಮತ್ತು ನವೀಕರಣ ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸಲಾಗಿದೆ ಎಂದು ಅವರು ಹೇಳಿದರು.

ಈ ವಿದ್ಯಾರ್ಥಿಗಳಿಗೆ ಊಟ, ಸಮವಸ್ತ್ರ, ಲೇಖನ ಸಾಮಗ್ರಿ, ಶುಚಿ ಸಂಭ್ರಮ ಕಿಟ್ ಮತ್ತು ಇತರೆ ವೆಚ್ಚಕ್ಕಾಗಿ 279.43 ಕೋಟಿ ರೂ.ವೆಚ್ಚ ಮಾಡಲಾಗಿದೆ. ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳ ದುರಸ್ತಿಗಾಗಿ 200 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದೆ. ಹೊಸ ಕಟ್ಟಡಗಳ ನಿರ್ಮಾಣಕ್ಕಾಗಿ 188 ಕೋಟಿ ರೂ.ಅನುದಾನ ಒದಗಿಸಲಾಗಿದೆ ಎಂದು ಅವರು ತಿಳಿಸಿದರು.

ರಾಜ್ಯ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವತಿಯಿಂದ ನಡೆಸುತ್ತಿರುವ 824 ವಸತಿ ಶಾಲೆ, ಕಾಲೇಜುಗಳಲ್ಲಿ 1.70 ಲಕ್ಷ ಎಸ್ಸಿ-ಎಸ್ಟಿ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಪ್ರವೇಶ ಅವಕಾಶ ನೀಡಲಾಗಿದೆ. 726 ಕೋಟಿ ರೂ.ಗಳನ್ನು ನಿರ್ವಹಣೆಗಾಗಿ ಮತ್ತು 670 ಕೋಟಿ ರೂ.ಗಳನ್ನು ಶಾಲಾ ಸಂಕೀರ್ಣಗಳ ನಿರ್ಮಾಣಕ್ಕಾಗಿ ಒದಗಿಸಲಾಗಿದೆ ಎಂದು ಗೋವಿಂದ ಕಾರಜೋಳ ತಿಳಿಸಿದರು.

ಸ್ಪರ್ಧಾತ್ಮಕ ಪರೀಕ್ಷಾ ಪೂರ್ವ ತರಬೇತಿಗಾಗಿ ಪರಿಶಿಷ್ಟ ಜಾತಿ ಮತ್ತು ಪಂಗಡದ 2334 ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆ ಪೂರ್ಣಗೊಳಿಸಿ ತರಬೇತಿಗೆ ನಿಯೋಜಿಸಲಾಗಿದೆ. ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗಕ್ಕಾಗಿ ಪ್ರಬುದ್ಧ ಯೋಜನೆ ಅಡಿ ಪರಿಶಿಷ್ಟ ಜಾತಿಯ 45 ವಿದ್ಯಾರ್ಥಿಗಳನ್ನು ಮತ್ತು ಪರಿಶಿಷ್ಟ ಪಂಗಡದ 10 ವಿದ್ಯಾರ್ಥಿಗಳನ್ನು ನಿಯೋಜಿಸಿದ್ದು, ಇದಕ್ಕಾಗಿ 7.24 ಕೋಟಿ ರೂ.ವೆಚ್ಚ ಮಾಡಲಾಗಿದೆ ಎಂದು ಅವರು ಹೇಳಿದರು.

ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ಪದವಿ ಹಾಗೂ ಸ್ನಾತಕೋತ್ತರ ಪದವಿಗಳಲ್ಲಿ ಪ್ರಥಮ ಬಾರಿಗೆ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ 76,716 ಎಸ್ಸಿ ವಿದ್ಯಾರ್ಥಿಗಳಿಗೆ ಮತ್ತು 41,190 ಎಸ್ಟಿ ವಿದ್ಯಾರ್ಥಿಗಳಿಗೆ 191 ಕೋಟಿ ರೂ.ಪ್ರೋತ್ಸಾಹ ಧನ ನೀಡಲಾಗಿದೆ ಎಂದು ಗೋವಿಂದ ಕಾರಜೋಳ ತಿಳಿಸಿದರು.

ಅಂತರ್‌ಜಾತಿ ವಿವಾಹದ 2184 ದಂಪತಿಗಳಿಗೆ 43.27 ಕೋಟಿ ರೂ.ಪ್ರೋತ್ಸಾಹ ಧನ ನೀಡಲಾಗಿದೆ. ಪರಿಶಿಷ್ಟ ಜಾತಿ ಜನರ ಕಾಲನಿಗಳ ಅಭಿವೃದ್ಧಿಗಾಗಿ 160 ಕೋಟಿ ರೂ.ಗಳಿಗೆ ಅನುಮೋದನೆ ನೀಡಲಾಗಿದೆ. ಪರಿಶಿಷ್ಟ ಪಂಗಡದ ಮೂಲ ನಿವಾಸಿ, ಆದಿವಾಸಿ ಸಮುದಾಯಗಳಿಗೆ ಪೌಷ್ಟಿಕ ಆಹಾರ ಒದಗಿಸಲು 43,474 ಕುಟುಂಬಗಳಿಗೆ 37.30 ಕೋಟಿ ರೂ.ಗಳ ವೆಚ್ಚ ಮಾಡಲಾಗಿದೆ ಎಂದು ಅವರು ಹೇಳಿದರು.

ಗಂಗಾ ಕಲ್ಯಾಣ ಯೋಜನೆಗೆ 300 ಕೋಟಿ ರೂ.ಅನುದಾನವನ್ನು ಒದಗಿಸಿದ್ದು, 1626 ಎಸ್ಸಿ ಮತ್ತು 677 ಎಸ್ಟಿ ಫಲಾನುಭವಿಗಳಿಗೆ 122.35 ಕೋಟಿ ರೂ. ವೆಚ್ಚದಲ್ಲಿ ಕೊಳವೆ ಬಾವಿಗಳನ್ನು ಕೊರೆಸಲಾಗಿದೆ. ಭೂ ಒಡೆತನ ಯೋಜನೆ ಅಡಿ 725 ಎಸ್ಸಿ ಫಲಾನುಭವಿಗಳಿಗೆ 88.82 ಕೋಟಿ ರೂ.ಮತ್ತು 349 ಎಸ್ಟಿ ಫಲಾನುಭವಿಗಳಿಗೆ 35.83 ಕೋಟಿ ರೂ.ವೆಚ್ಚದಲ್ಲಿ ಕೃಷಿ ಭೂಮಿಯನ್ನು ಖರೀದಿಸಿ ನೀಡಲಾಗಿದೆ ಎಂದು ಗೋವಿಂದ ಕಾರಜೋಳ ತಿಳಿಸಿದರು.

ಸ್ವಯಂ ಉದ್ಯೋಗ ಮತ್ತು ಕಿರು ಸಾಲ ಯೋಜನೆಯಡಿ 4483 ಎಸ್ಸಿ ಫಲಾನುಭವಿಗಳಿಗೆ 56.27 ಕೋಟಿ ರೂ. ಮತ್ತು 2906 ಎಸ್ಟಿ ಫಲಾನುಭವಿಗಳಿಗೆ 31.16 ಕೋಟಿ ರೂ. ಸಹಾಯಧನ ನೀಡಲಾಗಿದೆ. ಐರಾವತ ಯೋಜನೆಯಡಿ ಎಸ್ಸಿ-ಎಸ್ಟಿ 776 ನಿರುದ್ಯೋಗಿಗಳಿಗೆ ಟ್ಯಾಕ್ಸಿಗಳನ್ನು ನೀಡಲಾಗಿದ್ದು, 38.80 ಕೋಟಿ ರೂ.ಸಹಾಯಧನ ನೀಡಲಾಗಿದೆ. ಇನ್ನೂ ಸುಮಾರು ಮೂರು ಸಾವಿರ ಫಲಾನುಭವಿಗಳಿಗೆ ಈ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು. ರಾಜ್ಯ ಭೋವಿ ಅಭಿವೃದ್ಧಿ ನಿಗಮದ ವತಿಯಿಂದ 1579 ಫಲಾನುಭವಿಗಳಿಗೆ 24.89 ಕೋಟಿ ರೂ.ವೆಚ್ಚದಲ್ಲಿ ಸಹಾಯಧನ, ರಾಜ್ಯ ತಾಂಡ ಅಭಿವೃದ್ಧಿ ನಿಗಮಕ್ಕೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ 95 ಕೋಟಿ ರೂ.ಅನುದಾನ ಒದಗಿಸಿದ್ದು, ತಾಂಡಾಗಳ ಅಭಿವೃದ್ಧಿ, ಸೇವಾಲಾಲ್ ಸಮುದಾಯ ಭವನಗಳು, ತಾಂಡಾಗಳಲ್ಲಿ ಶುದ್ಧ ನೀರು ಘಟಕಗಳ ಅಳವಡಿಕೆ ಮತ್ತು ಕಸೂತಿ ಕಲೆ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಇದಕ್ಕಾಗಿ 31.50 ಕೋಟಿ ರೂ.ವೆಚ್ಚ ಮಾಡಲಾಗಿದೆ ಎಂದು ಅವರು ಹೇಳಿದರು.

ಡಾ.ಬಾಬು ಜಗಜೀವನ ರಾಂ ಚರ್ಮ ಕೈಗಾರಿಕೆ ಅಭಿವೃದ್ಧಿ ನಿಗಮಕ್ಕೆ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ 50 ಕೋಟಿ ರೂ.ಒದಗಿಸಿದ್ದು, 1517 ಕುಶಲಕರ್ಮಿಗಳಿಗೆ 22.98 ಕೋಟಿ ರೂ.ಗಳ ವೆಚ್ಚದಲ್ಲಿ ವಸತಿ, ತರಬೇತಿ ಮತ್ತು ಸ್ವಾವಲಂಬಿ ಮಾರಾಟ ಮಳಿಗೆಗಳನ್ನು ಸ್ಥಾಪಿಸಲು ಸಹಾಯಧನ ನೀಡಲಾಗಿದೆ ಎಂದು ಗೋವಿಂದ ಕಾರಜೋಳ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News