×
Ad

ಕೋಮುದ್ವೇಷ ಹಬ್ಬಿಸುವ ಕಾಯ್ದೆ ಹಿಂಪಡೆಯಲು ಆಗ್ರಹಿಸಿ ಎಐಎಂಐಎಂ ಪ್ರತಿಭಟನೆ

Update: 2019-12-16 21:43 IST

ಬೆಂಗಳೂರು, ಡಿ.16: ದೇಶದ ಎಲ್ಲೆಡೆ ಕೋಮುದ್ವೇಷ ಹಬ್ಬಿಸುವ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿಯನ್ನು ಕೈಬಿಡಬೇಕು ಎಂದು ಆಗ್ರಹಿಸಿ ಅಖಿಲ ಭಾರತ ಮಜ್ಲಿಸೆ ಇತ್ತೆಹದುಲ್ ಮುಸ್ಲಿಮಿನ್(ಎಐಎಂಐಎಂ) ಸದಸ್ಯರು ಬೃಹತ್ ಪ್ರತಿಭಟನೆ ನಡೆಸಿದರು.

ನಗರದ ಪುರಭವನ ಮುಂಭಾಗ ಜಮಾಯಿಸಿದ ಎಐಎಂಐಎಂ ಸದಸ್ಯರು, ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗಿ, ವಿವಾದಿತ ಕಾಯ್ದೆಗಳ ಮೂಲಕ ಸಾಮಾನ್ಯ ಜನರಿಗೆ ತೊಂದರೆ ಉಂಟು ಮಾಡುತ್ತಿರುವ ಗೃಹ ಸಚಿವ ಅಮಿತ್ ಶಾ ರಾಜೀನಾಮೆ ನೀಡಬೇಕೆಂದು ಪಟ್ಟು ಹಿಡಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಎಐಎಂಐಎಂ ಬೆಂಗಳೂರು ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಶರ್ಫುದ್ದೀನ್, ನಾವೆಲ್ಲರೂ ಒಂದೇ ಜಾತಿ, ಒಂದೇ ಮತ, ಒಂದೇ ಕುಲ, ನಾವು ಮನುಜರು. ಧರ್ಮಗಳ ನಡುವೆ ಗೋಡೆಗಳನ್ನು ಕುಟ್ಟಿ ಕೆಡಹುವೆವು ಎಂಬುದು ಶತಮಾನ ಕಾಲದ ಸ್ವಾತಂತ್ರ್ಯ ಚಳವಳಿಯ ಆಶಯ. ಈ ಪ್ರಮುಖ ಆಶಯ ನಮ್ಮ ದೇಶದ ಸಂವಿಧಾನದಲ್ಲಿಯೂ ಇದೆ. ಆದರೆ, ಸಂವಿಧಾನವನ್ನೂ ಧಿಕ್ಕರಿಸಿ ಇಂಥ ಮಸೂದೆಗಳನ್ನು ಜಾರಿ ಮಾಡಿದ್ದು ಖಂಡನಾರ್ಹ ಎಂದರು.

ಈಗಾಗಲೇ ಪೌರತ್ವ ನೋಂದಣಿ ಮಾಡಿರುವ ಅಸ್ಸಾಂನಲ್ಲಿ 19 ಲಕ್ಷ ಪ್ರಜೆ ಗಳನ್ನು ಅನಾಥ ಮಾಡಲಾಗಿದೆ. ನಿರ್ಬಂಧಿತ ಕ್ಯಾಂಪ್‌ಗಳಲ್ಲಿ ಕೂಡಿ ಹಾಕಲಾಗಿದೆ. ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿ ಮತ್ತು ದೇಶದ ಸಂಪತ್ತನ್ನು ಲೂಟಿ ಮಾಡಿ, ಜನಾಂಗೀಯ ದ್ವೇಷ ಹುಟ್ಟು ಹಾಕುವ ಅಜೆಂಡಾವನ್ನೇ ಕಾಯ್ದೆ ರೂಪದಲ್ಲಿ ಜಾರಿ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ನೂರುದ್ದೀನ್ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News