ಸಚಿವಾಲಯದ ಸೇವೆಗಳು ಇನ್ನು ‘ಸಕಾಲ’ ವ್ಯಾಪ್ತಿಗೆ: ಸಚಿವ ಸುರೇಶ್‌ ಕುಮಾರ್

Update: 2019-12-16 16:18 GMT

ಬೆಂಗಳೂರು, ಡಿ. 16: ವಿಧಾನಸೌಧ ಸಚಿವಾಲಯದ ಸೇವೆಗಳನ್ನು ‘ಸಕಾಲ’ ವ್ಯಾಪ್ತಿಗೆ ತರಲು ಚಿಂತನೆ ನಡೆಸಿದ್ದು, ಈ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪನವರೂ ಒಪ್ಪಿಗೆ ಸೂಚಿಸಿದ್ದಾರೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವ ಸುರೇಶ್‌ ಕುಮಾರ್ ತಿಳಿಸಿದ್ದಾರೆ.

ಸೋಮವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಕಾಲ ಮಾಸಿಕ ವರದಿ ಬಿಡುಗಡೆ, ಉತ್ತಮ ಸೇವೆ ಸಲ್ಲಿಸಿದ ಅಧಿಕಾರಿಗಳಿಗೆ ಪ್ರಶಂಸಾ ಪತ್ರ ವಿತರಣೆ ಮಾಡಿ ಮಾತನಾಡಿದ ಅವರು, ಜನರ ಮನೆ ಬಾಗಿಲಿಗೆ ಜನಸೇವಕ ಸೇವೆಯನ್ನು ದಾಸರಹಳ್ಳಿಯಲ್ಲಿ ಆರಂಭಿಸಿದ್ದು, ಇದೇ ತಿಂಗಳಿಂದ ಮಹದೇವಪುರ, ಬೊಮ್ಮನಹಳ್ಳಿ, ರಾಜಾಜಿನಗರ ಕ್ಷೇತ್ರಗಳಿಗೆ ವಿಸ್ತರಿಸಲಾಗುವುದು ಎಂದರು.

20.51 ಕೋಟಿ ಅರ್ಜಿ: ಸಕಾಲ ಸೇವೆ ಪ್ರಾರಂಭವಾದಾಗಿನಿಂದ ಈವರೆಗೆ 20.51ಕೋಟಿ ಅರ್ಜಿ ಸ್ವೀಕರಿಸಿದ್ದು, 20.45ಕೋಟಿ ಅರ್ಜಿ ವಿಲೇ ಮಾಡಲಾಗಿದೆ. ಸಕಾಲ ಸೇವೆ ಪ್ರಾರಂಭಗೊಂಡಾಗ 11 ಇಲಾಖೆಯಡಿ 151 ಸೇವೆಗಳು ಲಭ್ಯವಿದ್ದು, ಈಗ 91 ಇಲಾಖೆಯಡಿ 1,033 ಸೇವೆಗಳು ಲಭ್ಯವಿದೆ ಎಂದರು. ನಾಗರಿಕ ಸೇವೆಗಳನ್ನು ಸಂಪೂರ್ಣವಾಗಿ ಆನ್‌ಲೈನ್ ಮೂಲಕ ವಿಲೇವಾರಿ ಮಾಡಲು ಪ್ರಾರಂಭಿಸಿರುವ ಸೇವಾ ಸಿಂಧು ಯೋಜನೆಗೆ ಕೇಂದ್ರ ಸರಕಾರದಿಂದ ಪ್ರತಿಷ್ಠಿತ ಡಿಜಿಟಲ್ ಟ್ರಾನ್ಸ್‌ಫಾರ್ಮೇಶನ್ ಪ್ರಶಸ್ತಿ ದೊರೆತಿದೆ ಎಂದು ಅವರು ಇದೇ ವೇಳೆ ತಿಳಿಸಿದರು.

ಶ್ರೇಯಾಂಕ: ಸಕಾಲ ಸೇವೆಯಲ್ಲಿ ಉತ್ತಮ ಕಾರ್ಯ ನಿರ್ವಹಿಸಿ ಅಕ್ಟೋಬರ್ ತಿಂಗಳಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ ಮತ್ತು ನವೆಂಬರ್ ತಿಂಗಳಲ್ಲಿ ಯಾದಗಿರಿ ಜಿಲ್ಲೆಯು ಪ್ರಥಮ ಶ್ರೇಯಾಂಕ ಪಡೆದಿದೆ. ಚಾಮರಾಜನಗರ ದ್ವಿತೀಯ ಹಾಗೂ ಉಡುಪಿ ಜಿಲ್ಲೆಯು ತೃತೀಯ ಶ್ರೇಯಾಂಕ ಪಡೆದಿದೆ.

ನವೆಂಬರ್ ಮಾಹೆಯಲ್ಲಿ ಚಿಕ್ಕಬಳ್ಳಾಪುರ ದ್ವಿತೀಯ ಹಾಗೂ ಉಡುಪಿ ಜಿಲ್ಲೆಯ ತೃತೀಯ ಶ್ರೇಯಾಂಕವನ್ನು ಪಡೆದಿದೆ ಎಂದ ಅವರು. ಅಕ್ಟೋಬರ್ ಮಾಹೆಯಲ್ಲಿ ಬೆಂಗಳೂರು ನಗರ, ಬೀದರ್, ರಾಯಚೂರು ಜಿಲ್ಲೆಗಳು ಹಾಗೂ ನವೆಂಬರ್ ಮಾಹೆಯಲ್ಲಿ ವಿಜಯಪುರ, ಬೆಂಗಳೂರು ನಗರ ಹಾಗೂ ಕೊಪ್ಪಳ ಜಿಲ್ಲೆಗಳು ಕೊನೆಯ ಮೂರು ಸ್ಥಾನದಲ್ಲಿದೆ ಎಂದು ತಿಳಿಸಿದರು.

ಇದೇ ವೇಳೆ ಪ್ರಥಮ ಶ್ರೇಯಾಂಕ ಪಡೆದ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆರ್.ಲತಾ, ಯಾದಗಿರಿ ಜಿಲ್ಲಾಧಿಕಾರಿ ಕುರ್ಮಾರಾವ್, ಸಕಾಲ ತಂಡದ ನಾಯಕರಾಗಿ ಉತ್ತಮ ಕಾರ್ಯನಿರ್ವಹಿಸಿದ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ತಹಸಿಲ್ದಾರ್ ಹನುಮಂತರಾಯಪ್ಪ, ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ತಹಸಿಲ್ದಾರ್ ಅಶೋಕ್ ಶಿಗ್ಗಾ ಹಾಗೂ ಅತ್ಯುತ್ತಮ ಸೇವೆ ಸಲ್ಲಿಸಿದ ಇಬ್ಬರು ಅಧಿಕಾರಿಗಳಾದ ಲಕ್ಷ್ಮೀಪತಿ, ದೊಡ್ಡಮುನಿ ಅವರಿಗೆ ಪ್ರಶಂಸಾ ಪತ್ರ ವಿತರಿಸಿದರು.

ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ಇ-ಆಡಳಿತ ಸಲಹೆಗಾರ ಬೇಳೂರು ಸುದರ್ಶನ್, ಇ-ಆಡಳಿತ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೀವ್ ಚಾವ್ಲಾ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News