ಗೌರಿ ಹತ್ಯೆ ಪ್ರಕರಣ: ಆರೋಪಿ ನವೀನ್‌ ಕುಮಾರ್ ಆದೇಶ ಕಾಯ್ದಿರಿಸಿದ ಹೈಕೋರ್ಟ್

Update: 2019-12-16 16:42 GMT

ಬೆಂಗಳೂರು, ಡಿ.16: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿ ಕೆ.ಟಿ.ನವೀನ್‌ ಕುಮಾರ್ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ಸಂಬಂಧ ಹೈಕೋರ್ಟ್ ವಿಚಾರಣೆ ಪೂರ್ಣಗೊಳಿಸಿ, ತೀರ್ಪು ಕಾಯ್ದಿರಿಸಿದೆ.

ಈ ಕುರಿತು ಕೆ.ಟಿ.ನವೀನ್‌ಕುಮಾರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಅವರಿದ್ದ ಏಕಸದಸ್ಯ ನ್ಯಾಯಪೀಠದಲ್ಲಿ ನಡೆಯಿತು. ಕೆಳ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ತಿರಸ್ಕರಿಸಿದ್ದರಿಂದ ನವೀನ್‌ ಕುಮಾರ್ ಹೈಕೋರ್ಟ್ ಮೆಟ್ಟಿಲೇರಿದ್ದ. ನ್ಯಾಯಪೀಠವು ಸೋಮವಾರ ಆದೇಶ ಕಾಯ್ದಿರಿಸಿದೆ.

2018ರ ಫೆ.16ರಂದು ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ನವೀನ್‌ನನ್ನು ವಶಕ್ಕೆ ಪಡೆದಿದ್ದ ಸಿಸಿಬಿ ಪೊಲೀಸರು, ನಾಡ ಪಿಸ್ತೂಲ್ ಹಾಗೂ ಪಾಯಿಂಟ್ 32 ರಿವಾಲ್ವರ್‌ನ ಐದು ಗುಂಡುಗಳನ್ನು ಜಪ್ತಿ ಮಾಡಿದ್ದರು. ಗೌರಿ ಹತ್ಯೆಯಲ್ಲೂ ಕೈವಾಡವಿರಬಹುದು ಎಂಬ ಅನುಮಾನದಡಿ ಎಸ್‌ಐಟಿ ಅಧಿಕಾರಿಗಳು ಆತನನ್ನು ಕಸ್ಟಡಿಗೆ ಪಡೆದು ವಿಚಾರಣೆಗೆ ನಡೆಸಿದ್ದರು.

2017ರ ಸೆಪ್ಟೆಂಬರ್ 5ರಂದು ಗೌರಿ ಲಂಕೇಶ್ ಕೊಲೆ ಸೆಪ್ಟೆಂಬರ್ 5ರ ಸಂಜೆ 7.30ರ ಸುಮಾರಿಗೆ ತಮ್ಮ ಲಂಕೇಶ್ ಪತ್ರಿಕೆ ಕಚೇರಿಯಿಂದ ರಾಜರಾಜೇಶ್ವರಿ ನಗರದಲ್ಲಿರುವ ನಿವಾಸಕ್ಕೆ ಗೌರಿ ಲಂಕೇಶ್ ಅವರು ಬಂದು, ಕಾರು ನಿಲ್ಲಿಸಿ ಗೇಟನ್ನು ತೆರೆಯುತ್ತಿದ್ದಾಗ ಬೈಕ್ ನಲ್ಲಿ ಬಂದಿದ್ದ ಹಂತಕರು ಗೌರಿ ಅವರ ಮೇಲೆ ಗುಂಡಿನ ಮಳೆ ಸುರಿದಿದ್ದರು. ನಾಲ್ಕು ಗುಂಡುಗಳು ಗೌರಿ ದೇಹವನ್ನು ಹೊಕ್ಕಿದ್ದವು. ಗೌರಿಯವರು ತಪ್ಪಿಸಿಕೊಳ್ಳಲು ಯತ್ನಿಸಿದರೂ, ಹಂತಕರು ಬಿಡದೆ ಗುಂಡಿನ ಸುರಿಮಳೆಗರೆದು ಸ್ಥಳದಲ್ಲಿಯೇ ಗೌರಿಯನ್ನು ಕೊಂದಿದ್ದರು. ಆ ಸಮಯದಲ್ಲಿ ಮನೆಯ ಮುಂದೆ ಬೀದಿ ದೀಪ ಇಲ್ಲದಿದ್ದುದು ಹಂತಕರಿಗೆ ಸಹಾಯಕವಾಗಿತ್ತು. ಅಲ್ಲದೆ ಹಂತಕ, ಹೆಲ್ಮೆಟ್ ಧರಿಸಿದ್ದರಿಂದ ವ್ಯಕ್ತಿಯ ಗುರುತು ಸಿಕ್ಕಿರಲಿಲ್ಲ. ಮನೆ ಮುಂದಿನ ಸಿಸಿಟಿವಿ ಕ್ಯಾಮೆರಾ ಕೂಡ ಸ್ಪಷ್ಟ ಸಾಕ್ಷ್ಯ ದೊರಕಿಸಿಕೊಟ್ಟಿರಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News