ರೈಲ್ವೆ ನಿಲ್ದಾಣದಿಂದ 54 ಭಾಗಗಳಿಗೆ ಬಿಎಂಟಿಸಿ ಸೇವೆ ಆರಂಭ: ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ

Update: 2019-12-16 17:42 GMT

ಬೆಂಗಳೂರು, ಡಿ.16: ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ(ಮೆಜೆಸ್ಟಿಕ್)ದಿಂದ ಮೊದಲ ಕಂತಿನಲ್ಲಿ ನಗರದ 54 ಭಾಗಗಳಿಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ)ಯ ಬಸ್ಸುಗಳ ಸೇವೆಯನ್ನು ಒದಗಿಸಲಾಗುತ್ತಿದೆ ಎಂದು ಬಿಎಂಟಿಸಿ ಅಧ್ಯಕ್ಷ ಎನ್.ಎಸ್.ನಂದೀಶ್ ರೆಡ್ಡಿ ತಿಳಿಸಿದರು.

ಸೋಮವಾರ ನಗರದ ಮೆಜೆಸ್ಟಿಕ್ ಬಳಿಯ ರೈಲ್ವೆ ನಿಲ್ದಾಣದ ಪ್ರವೇಶ ದ್ವಾರ 3ರಿಂದ ವಿವಿಧ ಭಾಗಗಳಿಗೆ ಒದಗಿಸಲಾಗುತ್ತಿರುವ ನೂತನ ಬಸ್ ಸೇವೆ ಕುರಿತು ಪರಿಶೀಲನೆ ನಡೆಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಕೆ.ಆರ್.ಪುರ, ಹೊಸಕೋಟೆ, ಕಾಡುಗೋಡಿ, ಅತ್ತಿಬೆಲೆ, ಸರ್ಜಾಪುರ ರಸ್ತೆ, ಯಲಹಂಕ ಸೇರಿದಂತೆ ನಗರದ 54 ಭಾಗಗಳಿಗೆ ಬಸ್ ಸೇವೆ ಒದಗಿಸಿದ್ದೇವೆ. ಈ ಎಲ್ಲ ಭಾಗಗಳಲ್ಲಿ ಪ್ರತಿದಿನ 9 ಬಸ್ಸುಗಳನ್ನು ಪ್ರಾರಂಭ ಮಾಡಿದ್ದೇವೆ. ಇದರಿಂದ ಜನಸಾಮಾನ್ಯರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಅವರು ಹೇಳಿದರು.

ಹೊಸ ಯೋಜನೆಯಿಂದಾಗಿ ಪ್ರಯಾಣಿಕರು ತಮ್ಮ ಲಗೇಜುಗಳನ್ನು ಹೊತ್ತಿಕೊಂಡು ಬಸ್ ನಿಲ್ದಾಣದಿಂದ ರೈಲ್ವೆ ನಿಲ್ದಾಣ, ರೈಲ್ವೆ ನಿಲ್ದಾಣದಿಂದ ಬಸ್ ನಿಲ್ದಾಣಗಳಿಗೆ ಅಲೆಯುವುದು ತಪ್ಪುತ್ತದೆ. ಮುಂದಿನ ದಿನಗಳಲ್ಲಿ ಇನ್ನೂ ಹಲವಾರು ರೈಲ್ವೆ ನಿಲ್ದಾಣಗಳಿಂದ ಬಸ್ ಸೇವೆಯನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ನಂದೀಶ್ ರೆಡ್ಡಿ ಹೇಳಿದರು.

ರಾಜ್ಯದಲ್ಲಿ ಹೊಸ ಸರಕಾರ ಬಂದಾಗಿನಿಂದ ಬಿಎಂಟಿಸಿ ವತಿಯಿಂದ ಹೊಸ ಯೋಜನೆಗಳನ್ನು ಪರಿಚಯಿಸಲಾಗಿದೆ. ಸಂಸದ ಪಿ.ಸಿ.ಮೋಹನ್ ತಮ್ಮದೇ ಶೈಲಿಯಲ್ಲಿ ಉಪ ನಗರ ರೈಲು ಯೋಜನೆ ಯಶಸ್ಸಿಗೆ ಮುಂದಾಗಿದ್ದಾರೆ. ಅವರ ಸಲಹೆ, ಸೂಚನೆಯಂತೆ ಬಿಎಂಟಿಸಿಯನ್ನು ರೈಲ್ವೆ ನಿಲ್ದಾಣಗಳಿಗೆ ಸಂಪರ್ಕ ಮಾಡಿದ್ದೇವೆ ಎಂದು ಅವರು ಹೇಳಿದರು.

ಚಾಲಕರ ಒತ್ತಡ ನಿವಾರಣೆಗೆ ಆರೋಗ್ಯ ಸೇವೆ: ವಾಯು ಮಾಲಿನ್ಯ, ಜನಸಂದಣಿ, ವಾಹನ ದಟ್ಟಣೆ ನಡುವೆ ಬಸ್ಸುಗಳ ಚಾಲನೆ ಮಾಡುವುದು ಕಷ್ಟದ ಕೆಲಸ. ಇದರಿಂದ, ಚಾಲಕರು ಸದಾ ಮಾನಸಿಕ ಒತ್ತಡದಲ್ಲಿ ಕೆಲಸ ನಿರ್ವಹಿಸುವುದು ಅನಿವಾರ್ಯವಾಗಿದೆ ಎಂದು ನಂದೀಶ್ ರೆಡ್ಡಿ ತಿಳಿಸಿದರು.

ಈ ಸಂಬಂಧ ನಿಮ್ಹಾನ್ಸ್ ನಿರ್ದೇಶಕರಿಗೆ ಪತ್ರ ಬರೆದಿದ್ದು, ಚಾಲಕರು, ನಿರ್ವಾಹಕರು ಮತ್ತು ತಾಂತ್ರಿಕ ಸಿಬ್ಬಂದಿ ಮಾನಸಿಕ ಹಾಗೂ ದೈಹಿಕವಾಗಿ ಸದೃಢರಾಗಬೇಕಾಗುತ್ತದೆ. ಆದುದರಿಂದ, ಈ ಸಿಬ್ಬಂದಿಗಳು ಮಾನಸಿಕ ಒತ್ತಡದಿಂದ ಹೊರಗೆ ಬರಲು ಅಗತ್ಯ ತರಬೇತಿ ಹಮ್ಮಿಕೊಳ್ಳುವಂತೆ ಮನವಿ ಮಾಡಿರುವುದಾಗಿ ಹೇಳಿದರು.

ಬಿಎಂಟಿಸಿ ಜನರಿಗೆ ಅತ್ಯಾವಶ್ಯಕ ಸೇವಾ ಸಂಸ್ಥೆಯಾಗಿದ್ದು, ಚಾಲಕರು, ನಿರ್ವಾಹಕರು ಪ್ರಯಾಣಿಕರ ನಡುವೆ ಕರ್ತವ್ಯ ನಿರ್ವಹಿಸುತ್ತಾರೆ. ಮಾನಸಿಕ ಒತ್ತಡದಿಂದಾಗಿ ಇವರ ಆರೋಗ್ಯದಲ್ಲಿ ಏರುಪೇರು ಉಂಟಾಗಿ, ಸಾಕಷ್ಟು ನೌಕರರು ಪಾರ್ಶ್ವವಾಯು ಮತ್ತು ಮೂರ್ಛೆ ರೋಗದಿಂದ ಬಳಲುತ್ತಿದ್ದಾರೆ ಎಂದು ಅವರು ತಿಳಿಸಿದರು.

ಬಿಎಂಟಿಸಿ ನೌಕರರ ಹಿತದೃಷ್ಟಿಯಿಂದ ಮಾನಸಿಕ ಒತ್ತಡ ನಿರ್ವಹಣೆ ಮತ್ತು ಪಾರ್ಶ್ವವಾಯು ಮತ್ತು ಮೂರ್ಛೆರೋಗ ಸಂಬಂಧ ನಿಮ್ಹಾನ್ಸ್‌ನ ನುರಿತ ವೈದ್ಯರಿಂದ ಬಿಎಂಟಿಸಿ ತರಬೇತಿ ಕೇಂದ್ರದಲ್ಲಿ ಉಚಿತ ತರಬೇತಿ ಹಮ್ಮಿಕೊಳ್ಳುವಂತೆ ನಂದೀಶ್ ರೆಡ್ಡಿ ಕೋರಿದರು.

ಈ ಸಂದರ್ಭದಲ್ಲಿ ಸಂಸದ ಪಿ.ಸಿ.ಮೋಹನ್, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಶಿಖಾ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News