ಸೆಂಗಾರ್ ಶಿಕ್ಷೆಯ ಪ್ರಮಾಣ: ವಿಚಾರಣೆ ಡಿ.20ಕ್ಕೆ ಮುಂದೂಡಿಕೆ

Update: 2019-12-17 18:38 GMT
Photo: PTI

ಹೊಸದಿಲ್ಲಿ, ಡಿ.17: ಉನ್ನಾವೊ ಅತ್ಯಾಚಾರ ಪ್ರಕರಣದಲ್ಲಿ ದೋಷಿಯೆಂದು ಸಾಬೀತಾಗಿರುವ ಉಚ್ಛಾಟಿತ ಬಿಜೆಪಿ ಶಾಸಕ ಕುಲ್‌ದೀಪ್ ಸಿಂಗ್ ಸೆಂಗಾರ್‌ಗೆ ವಿಧಿಸುವ ಶಿಕ್ಷೆಯ ಪ್ರಮಾಣದ ಬಗ್ಗೆ ದಿಲ್ಲಿಯ ನ್ಯಾಯಾಲಯ ಡಿಸೆಂಬರ್ 20ರಂದು ವಿಚಾರಣೆ ನಡೆಸಲಿದೆ.

ಅಲ್ಲದೆ, 2017ರಲ್ಲಿ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣಪತ್ರದ ಪ್ರತಿಯನ್ನು ಸಲ್ಲಿಸುವಂತೆ ಸೆಂಗಾರ್‌ಗೆ ನ್ಯಾಯಾಲಯ ಸೂಚಿಸಿದೆ. ಮಂಗಳವಾರ ನಡೆದ ವಿಚಾರಣೆ ಸಂದರ್ಭ ಹಾಜರಿದ್ದ ಸಿಬಿಐ ಪರ ವಕೀಲರು, ಸೆಂಗಾರ್‌ಗೆ ಗರಿಷ್ಟ ಪ್ರಮಾಣದ ಶಿಕ್ಷೆ ವಿಧಿಸುವಂತೆ ಹಾಗೂ ಅತ್ಯಾಚಾರ ಸಂತ್ರಸ್ತೆಗೆ ಸೂಕ್ತ ಪರಿಹಾರ ಒದಗಿಸುವಂತೆ ಮನವಿ ಮಾಡಿಕೊಂಡರು.

ಇದಕ್ಕೆ ಆಕ್ಷೇಪ ಸೂಚಿಸಿದ ಸೆಂಗಾರ್‌ನ ವಕೀಲರು ಸೆಂಗಾರ್ ದಶಕಗಳಿಂದ ಸಮಾಜ ಸೇವೆ ನಡೆಸಿದ್ದು ಜನರ ಶ್ರೇಯೋಭಿವೃದ್ಧಿಗೆ ಸಾಕಷ್ಟು ಕೆಲಸ ಮಾಡಿದ್ದಾರೆ. ಕಸ್ಟಡಿಯಲ್ಲಿದ್ದಾಗ ಅವರ ನಡತೆ ಉತ್ತಮವಾಗಿತ್ತು. ಅವರಿಗೆ ಇಬ್ಬರು ಸಣ್ಣ ಮಕ್ಕಳಿದ್ದು ಈ ಹಿಂದೆ ಅಪರಾಧ ಎಸಗಿದ ದಾಖಲೆಯಿಲ್ಲ. ಇದನ್ನು ಪರಿಗಣಿಸಿ ಕನಿಷ್ಟ ಶಿಕ್ಷೆ ವಿಧಿಸಬೇಕೆಂದು ಕೋರಿದರು.

ಭಾರತೀಯ ದಂಡಸಂಹಿತೆ ಹಾಗೂ ಪೋಕ್ಸೊ ಕಾಯ್ದೆಯಡಿ ಸೆಂಗಾರ್‌ನನ್ನು ದೋಷಿಯೆಂದು ನ್ಯಾಯಾಲಯ ಪರಿಗಣಿಸಿದೆ. ಅಪ್ರಾಪ್ತ ವಯಸ್ಕಳ ಅತ್ಯಾಚಾರ ಪ್ರಕರಣದಲ್ಲಿ ಪೋಸ್ಕೊ ಕಾಯ್ದೆಯಡಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆಯವರೆಗೆ ಗರಿಷ್ಟ ಶಿಕ್ಷೆ ವಿಧಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News