ದೇಶದಲ್ಲಿ ಅತಿರೇಕದ ರಾಷ್ಟ್ರಪ್ರೇಮ ಅಬ್ಬರಿಸುತ್ತಿದೆ: ಇತಿಹಾಸ ತಜ್ಞ ರಾಮಚಂದ್ರ ಗುಹಾ

Update: 2019-12-19 07:11 GMT

ಬೆಂಗಳೂರು, ಡಿ.18: ದೇಶದಲ್ಲಿ ರಾಷ್ಟ್ರೀಯವಾದದ ಬದಲಿಗೆ ಜಿಂಗೋಯಿಸಂ(ಅತಿರೇಕದ ರಾಷ್ಟ್ರ ಪ್ರೇಮ) ಅಬ್ಬರಿಸುತ್ತಿದೆ ಎಂದು ಹಿರಿಯ ಇತಿಹಾಸ ತಜ್ಞ ರಾಮಚಂದ್ರ ಗುಹಾ ಹೇಳಿದ್ದಾರೆ.

ಬುಧವಾರ ನಗರದ ಇಸಿಎ ಸಭಾಂಗಣದಲ್ಲಿ ಆಯೋಜಿಸಿದ್ದ ಭಾರತೀಯ ಬಹುತ್ವ: ಭೂತ, ವರ್ತಮಾನ ಮತ್ತು ಭವಿಷ್ಯ ಕುರಿತ ಚರ್ಚಾಗೋಷ್ಠಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಮಹಾತ್ಮಗಾಂಧೀ ತಪ್ಪುಗಳನ್ನು ಮಾಡಿದರೆ ಹೇಳುತ್ತಿದ್ದರು. ಆದರೆ, ಈಗ ಅಧಿಕಾರದಲ್ಲಿರುವವರು ತಪ್ಪನ್ನೇ ಸರಿ ಎಂದು ಸಮರ್ಥಿಸಿಕೊಳ್ಳಲು ಮುಂದಾಗುತ್ತಿದ್ದಾರೆ. ಕೇಂದ್ರ ಸರಕಾರದ ವಿರುದ್ಧ ಅಥವಾ ಬಿಜೆಪಿಯ ವಿರುದ್ಧ ಮಾತನಾಡುವ ಎಲ್ಲರನ್ನೂ ದೇಶದ್ರೋಹಿ, ನಕ್ಸಲ್ ಎಂಬ ಹಣೆಪಟ್ಟಿಯನ್ನು ಕಟ್ಟುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು. ಕಾಂಗ್ರೆಸ್ಸಿನ ಭ್ರಷ್ಟಾಚಾರ ಮತ್ತು ಎಡಪಂಥೀಯರ ಸೈದ್ಧಾಂತಿಕ ಸೋಲು ಹಿಂದುತ್ವ ಹಾಗೂ ಉಗ್ರ ರಾಷ್ಟ್ರೀಯವಾದ ಬೆಳೆಯಲು ಕಾರಣ. ಕಾಂಗ್ರೆಸ್ ಪಕ್ಷ ಒಂದು ಕುಟುಂಬಕ್ಕೆ ಸೀಮಿತವಾಗುತ್ತಾ ಬಂದಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕಾಂಗ್ರೆಸ್ ಕುಟುಂಬ ರಾಜಕಾರಣಕ್ಕೆ ಸೀಮಿತವಾಗಿದ್ದು ದುರಂತ ಎಂದರು.

19ನೇ ಶತಮಾನದ ಯುರೋಪಿಯನ್ ರಾಷ್ಟ್ರೀಯತೆಯ ಮಾದರಿಯಲ್ಲಿ ಭಾರತದಲ್ಲಿ ರಾಷ್ಟ್ರೀಯತೆಯ ಪರಿಕಲ್ಪನೆ ಬೆಳೆದಿದೆ. ಆದರೆ, ಬಹುತ್ವದ ಭಾರತಕ್ಕೆ ಒಂದು ಭಾಷೆ, ಒಂದು ಧರ್ಮ, ಒಂದು ಸಂಸ್ಕೃತಿಯ ಆಧಾರದ ರಾಷ್ಟ್ರೀಯತೆ ಒಗ್ಗುವಂಥದ್ದಲ್ಲ. ಗಾಂಧೀಜಿ ಹೇಳಿದ ಸ್ವರಾಜ್ಯ ತತ್ವದ ಆಧಾರದ ರಾಷ್ಟ್ರೀಯತೆ ಭಾರತಕ್ಕೆ ಬೇಕಿತ್ತು. ಅಹಿಂಸೆ, ಕೋಮುಸೌಹಾರ್ದ, ಅಸ್ಪಶ್ಯತೆ ನಿವಾರಣೆ ಮತ್ತು ಆರ್ಥಿಕ ಸ್ವಾವಲಂಬನೆಯ ತತ್ವಗಳ ಆಧಾರದ ಮೇಲೆ ಇಲ್ಲಿ ರಾಷ್ಟ್ರೀಯತೆ ರೂಪುಗೊಳ್ಳಬೇಕಿತ್ತು ಎಂದರು.

ರಾಜಕೀಯಗೊಂಡ ಭಕ್ತಿ: ಧರ್ಮ, ಭಾಷೆ, ಸಂಸ್ಕೃತಿಯ ಆಧಾರದಲ್ಲಿ ದೇಶದಲ್ಲಿ ಯಾರೂ ಶ್ರೇಷ್ಠರಲ್ಲ. ಭಕ್ತಿ ರಾಜಕೀಯಗೊಂಡಾಗ ಅಲ್ಲಿ ಸರ್ವಾಧಿಕಾರ ಬೆಳೆಯುತ್ತದೆ ಎಂದು ಅಂಬೇಡ್ಕರ್ ಹೇಳಿದ್ದರು. ನರೇಂದ್ರ ಮೋದಿ ಅವರ ವಿಷಯದಲ್ಲಿ ಮಾತ್ರವಲ್ಲ ಇಂದಿರಾ ಗಾಂಧಿ ಅವರ ವಿಷಯದಲ್ಲೂ ನಡೆದಿದ್ದು ಇದೇ. ಯಾವುದೇ ನಾಯಕರೂ ಪರಿಪೂರ್ಣರಲ್ಲ ಎಂದು ಹೇಳಿದರು.

ಲಿಂಗ ಹಾಗೂ ಜಾತಿಯ ಕಾರಣಕ್ಕೆ ಬೆಳೆದಿರುವ ಅಸಮಾನತೆಯ ಬಗ್ಗೆ ನಮಗೆ ನಾಚಿಕೆಯಾಗಬೇಕು. ನಾವು ಎಲ್ಲೇ ಇದ್ದರೂ ನಮ್ಮ ಸುತ್ತಲಿನ ಭಾಷೆ, ಸುತ್ತಲಿನ ಸಂಸ್ಕೃತಿಯನ್ನು ಮುಕ್ತವಾಗಿ ಸ್ವೀಕರಿಸುವ ಗುಣ ಬೆಳೆಸಿಕೊಳ್ಳಬೇಕು. ನಮ್ಮ ಚಿಂತನೆಗಳು ಮಾತ್ರ ಶ್ರೇಷ್ಠ, ಬೇರೆ ದೇಶಗಳ ಜ್ಞಾನ ಕನಿಷ್ಠ ಎಂಬ ಮನೋಭಾವ ಬದಲಾಗಬೇಕು. ಜಗತ್ತಿನ ಜ್ಞಾನಗಳಿಗೆಲ್ಲಾ ನಾವು ತೆರೆದುಕೊಳ್ಳಬೇಕು ಎಂದರು.

ದೇಶಕ್ಕೆಲ್ಲಾ ಹಿಂದಿಯೊಂದೇ ಭಾಷೆಯಾಗಿರಬೇಕು, ಪಾಕಿಸ್ತಾನ ನಮ್ಮ ಶತ್ರು ಎಂಬಂಥ ಸ್ಥಾಪಿತ ಹಿತಾಸಕ್ತಿಗಳಿಂದ ಉಗ್ರರಾಷ್ಟ್ರೀಯವಾದ ಬೆಳೆದಿದೆ. ಉಗ್ರರಾಷ್ಟ್ರೀಯವಾದ ದ್ವೇಷ ಹಾಗೂ ಅಸಹಿಷ್ಣುತೆಯನ್ನು ಬೆಳೆಸುತ್ತಿದೆ. ಹಳೆಯ ಚಿಂತನೆಗಳನ್ನು ಪ್ರಶ್ನಿಸುವವರು, ವಿಮರ್ಶಿಸುವವರೆಲ್ಲ ರಾಷ್ಟ್ರದ್ರೋಹಿಗಳು ಎಂಬ ಆರ್‌ಎಸ್‌ಎಸ್‌ನ ಸಿದ್ಧಾಂತಗಳನ್ನು ಬಿತ್ತಲಾಗಿದೆ ಎಂದು ತಿಳಿಸಿದರು.

ಪೌರತ್ವ(ತಿದ್ದುಪಡಿ) ಕಾಯ್ದೆ ಹಾಗೂ ಎನ್‌ಆರ್‌ಸಿ ವಿರುದ್ಧ ನಾವು ಶಾಂತಿಯುತ ಹೋರಾಟ ನಡೆಸಬೇಕಿದೆ. ದೇಶದಲ್ಲಿ ಕಳೆದು ಹೋಗಿರುವ ನಮ್ಮ ಪರಂಪರೆಯನ್ನು ವಾಪಸ್ ತರಬೇಕಿದೆ. ಕೇಂದ್ರ ಸರಕಾರ ಸಂವಿಧಾನ ವಿರುದ್ಧವಾಗಿ ನಡೆಯುತ್ತಿದೆ. ಸಂವಿಧಾನದ ಆಶಯಗಳ ಉಳಿವಿಗಾಗಿ ನಾವು ಹೋರಾಡಬೇಕಿದೆ ಎಂದು ಹೇಳಿದರು.

ವಿಶ್ವದ ಎಲ್ಲೆಡೆ ಬಲಪಂಥೀಯವಾದ ಬೆಳೆಯುತ್ತಿದೆ. ಅಮೆರಿಕದಲ್ಲಿ ಟ್ರಂಪ್, ಭಾರತದಲ್ಲಿ ಮೋದಿ ಹೀಗೆ ಅನೇಕ ನಾಯಕರು ಹುಟ್ಟಿಕೊಳ್ಳುತ್ತಿರುವುದು ಅಪಾಯಕಾರಿ ಮುನ್ಸೂಚನೆ.

-ರಾಮಚಂದ್ರ ಗುಹಾ, ಇತಿಹಾಸ ತಜ್ಞ

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News