ದ್ವಿತೀಯ ಟೆಸ್ಟ್: ಶ್ರೀಲಂಕಾ ವಿರುದ್ಧ ಪಾಕಿಸ್ತಾನ 191 ರನ್‌ಗೆ ಆಲೌಟ್

Update: 2019-12-19 18:49 GMT

ಕರಾಚಿ, ಡಿ.19: ಶ್ರೀಲಂಕಾ-ಪಾಕಿಸ್ತಾನದ ಮಧ್ಯೆ ಗುರುವಾರ ಇಲ್ಲಿ ಆರಂಭವಾದ ದ್ವಿತೀಯ ಟೆಸ್ಟ್ ನ ಮೊದಲ ದಿನದಾಟದಲ್ಲಿ ಉಭಯ ತಂಡದ ಬೌಲರ್‌ಗಳು ಒಟ್ಟು 13 ವಿಕೆಟ್ ಪಡೆದು ಪಾರಮ್ಯ ಮೆರೆದಿದ್ದು, ಬ್ಯಾಟಿಂಗ್‌ನಲ್ಲಿ ಅಲ್ಪ ಮೊತ್ತಕ್ಕೆ ಔಟಾಗಿದ್ದ ಪಾಕ್ ಬಳಿಕ ತಿರುಗೇಟು ನೀಡಿದೆ.

ರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ತಲಾ ನಾಲ್ಕು ವಿಕೆಟ್‌ಗಳನ್ನು ಉರುಳಿಸಿದ ವೇಗದ ಬೌಲರ್ ಲಹಿರು ಕುಮಾರ(4-49) ಹಾಗೂ ಎಡಗೈ ಸ್ಪಿನ್ನರ್ ಲಸಿತ್ ಎಂಬುಲ್ಡೆನಿಯಾ(4-71) ಪಾಕಿಸ್ತಾನವನ್ನು ಮೊದಲ ಇನಿಂಗ್ಸ್‌ನಲ್ಲಿ ಕೇವಲ 191 ರನ್‌ಗೆ ನಿಯಂತ್ರಿಸಿದರು. ಮೊದಲ ಇನಿಂಗ್ಸ್ ಆರಂಭಿಸಿದ ಲಂಕಾ ದಿನದಾಟದಂತ್ಯಕ್ಕೆ 64 ರನ್‌ಗೆ 3 ವಿಕೆಟ್‌ಗಳನ್ನು ಕಳೆದುಕೊಂಡಿತು.ಒಶಾಡ ಫೆರ್ನಾಂಡೊ(4), ಡಿಮುತ್ ಕರುಣರತ್ನೆ(25) ಹಾಗೂ ಕುಸಾಲ್ ಮೆಂಡಿಸ್(13) ಔಟಾಗಿದ್ದು, ಲಂಕಾ ಮೊದಲ ಇನಿಂಗ್ಸ್‌ನಲ್ಲಿ 127 ರನ್ ಹಿನ್ನಡೆಯಲ್ಲಿದೆ. ನೀಳಕಾಯದ ವೇಗದ ಬೌಲರ್ ಶಾಹಿನ್ ಅಫ್ರಿದಿ ಅವರು ಫೆರ್ನಾಂಡೊ ವಿಕೆಟ್ ಪಡೆದರೆ, ಮುಹಮ್ಮದ್ ಅಬ್ಬಾಸ್ ಅವರು ಕರುಣರತ್ನೆ ಹಾಗೂ ಮೆಂಡಿಸ್ ವಿಕೆಟನ್ನು ಪಡೆದಿದ್ದಾರೆ. ಆ್ಯಂಜೆಲೊ ಮ್ಯಾಥ್ಯೂಸ್(8) ಹಾಗೂ ನೈಟ್‌ವಾಚ್‌ಮ್ಯಾನ್ ಎಂಬುಲ್ಡೆನಿಯಾ(3)ಕ್ರೀಸ್ ಕಾಯ್ದುಕೊಂಡಿದ್ದಾರೆ.

ಇದಕ್ಕೂ ಮೊದಲು ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡ ಪಾಕಿಸ್ತಾನ 127ರನ್‌ಗೆ 3 ವಿಕೆಟ್ ಕಳೆದುಕೊಂಡಿತ್ತು. ಆಗ ಬಾಬರ್ ಆಝಂ(60) ಹಾಗೂ ಅಸದ್ ಶಫೀಖ್(63)ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 62 ರನ್ ಸೇರಿಸಿ ತಂಡವನ್ನು ಆಧರಿಸಿದರು. ಆಝಂ ಔಟಾದ ಬೆನ್ನಿಗೇ ಪಾಕ್ ತಂಡ ಕೇವಲ 24 ರನ್ ಗಳಿಸುವಷ್ಟರಲ್ಲಿ ಕೊನೆಯ 6 ವಿಕೆಟ್‌ಗಳನ್ನು ಅಲ್ಪ ಮೊತ್ತಕ್ಕೆ ಕಳೆದುಕೊಂಡು ಆಲೌಟಾಯಿತು.

ಸ್ಪಿನ್ನರ್ ಲಸಿತ್ ಎಂಬುಲ್ಡೆನಿಯಾಗೆ ವಿಕೆಟ್ ಒಪ್ಪಿಸುವ ಮೊದಲು ಆಝಂ 13ನೇ ಅರ್ಧಶತಕವನ್ನು ಸಿಡಿಸಿದ್ದಾರೆ. ಶಫೀಕ್ ಅವರು ಕುಮಾರ್‌ಗೆ ವಿಕೆಟ್ ಒಪ್ಪಿಸಿದಾಗ ಪಾಕ್ ಹೋರಾಟ ಬಹುತೇಕ ಅಂತ್ಯಗೊಂಡಿತು. ಶ್ರೀಲಂಕಾದ ಎಡಗೈ ವೇಗಿ ವಿಶ್ವ ಫೆರ್ನಾಂಡೊ ಪಾಕ್ ಆರಂಭಿಕ ಶಾನ್ ಮಸೂದ್(5) ಹಾಗೂ ನಾಯಕ ಅಝರ್ ಅಲಿ(0)ವಿಕೆಟನ್ನು ಬೇಗನೆ ಉರುಳಿಸಿದರು. ಆಗ ಪಾಕ್‌ನ ಸ್ಕೋರ್ 2ಕ್ಕೆ 10. ಕುಮಾರ್ ಮೊದಲ ಟೆಸ್ಟ್‌ನ ಶತಕವೀರ ಅಬಿದ್ ಅಲಿ ಅವರನ್ನು 38ರನ್‌ಗೆ ಪೆವಿಲಿಯನ್‌ಗೆ ಕಳುಹಿಸಿದರು. ಈ ಮೂಲಕ ಆಝಂ ಹಾಗೂ ಅಲಿ ಅವರ ಮೂರನೇ ವಿಕೆಟ್‌ನ 55 ರನ್ ಜೊತೆಯಾಟಕ್ಕೆ ತೆರೆ ಎಳೆದರು.

ತಂಡದ ಪರ ಎರಡನೇ ಗರಿಷ್ಠ ಸ್ಕೋರ್ ಗಳಿಸಿದ ಆಝಂ ಕಳೆದ 5 ಇನಿಂಗ್ಸ್‌ಗಳಲ್ಲಿ ನಾಲ್ಕನೇ ಅರ್ಧಶತಕ ಗಳಿಸಿದರು. 96 ಎಸೆತಗಳ ಇನಿಂಗ್ಸ್‌ನಲ್ಲಿ ಆಝಂ 8 ಬೌಂಡರಿ ಹಾಗೂ ಒಂದು ಸಿಕ್ಸರ್ ಸಿಡಿಸಿದರು. 126 ಎಸೆತಗಳನ್ನು ಎದುರಿಸಿದ್ದ ಶಫೀಕ್ ಆರು ಬೌಂಡರಿ ಸಹಾಯದಿಂದ 63 ರನ್ ಗಳಿಸಿ ಅಗ್ರ ಸ್ಕೋರರ್ ಎನಿಸಿಕೊಂಡರು.ಪಾಕ್ ತಂಡ ವೇಗಿ ಉಸ್ಮಾನ್ ಶಿನ್ವಾರಿ ಬದಲಿಗೆ ಲೆಗ್ ಸ್ಪಿನ್ನರ್ ಯಾಸಿರ್ ಶಾಗೆ ಅವಕಾಶ ನೀಡಿದೆ. 2 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಪ್ರತಿಕೂಲ ಹವಾಗುಣದಿಂದಾಗಿ ಡ್ರಾನಲ್ಲಿ ಕೊನೆಗೊಂಡಿತ್ತು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News