ಆಕಾಶ್ ಸ್ಪಿನ್ ಮೋಡಿ, ಹಿಮಾಚಲಕ್ಕೆ ಜಯ

Update: 2019-12-19 18:58 GMT

ದಿಂಡಿಗಲ್, ಡಿ.19: ಎಡಗೈ ಸ್ಪಿನ್ನರ್ ಆಕಾಶ್ ವಶಿಷ್ಟ ಅವರ ಅಮೋಘ ಬೌಲಿಂಗ್ ನೆರವಿನಿಂದ ಹಿಮಾಚಲಪ್ರದೇಶ ತಂಡ ಆತಿಥೇಯ ತಮಿಳುನಾಡು ವಿರುದ್ಧದ ರಣಜಿ ಟ್ರೋಫಿಯ ‘ಬಿ ’ ಗುಂಪಿನ ಪಂದ್ಯದಲ್ಲಿ 71 ರನ್‌ಗಳ ಅಂತರದಿಂದ ಗೆಲುವು ಸಾಧಿಸಿದೆ.

ಗುರುವಾರ ಗೆಲ್ಲಲು 217 ರನ್ ಗುರಿ ಪಡೆದಿದ್ದ ತಮಿಳುನಾಡು ತಂಡ 67.5 ಓವರ್‌ಗಳಲ್ಲಿ 145 ರನ್‌ಗೆ ಆಲೌಟಾಯಿತು. 33 ರನ್‌ಗೆ 7 ವಿಕೆಟ್‌ಗಳನ್ನು ಉರುಳಿಸಿದ ಆಕಾಶ್ ಹಿಮಾಚಲಕ್ಕೆ ಭರ್ಜರಿ ಜಯ ತಂದರು. ಅಂಕಿತ್ ಕಾಲ್ಸಿ ನೇತೃತ್ವದ ಹಿಮಾಚಲ್ ತಂಡ ಆರು ಅಂಕ ಬಾಚಿಕೊಂಡಿತು. ರಣಜಿಯ ಮೊದಲ ಪಂದ್ಯವನ್ನು ಸೌರಾಷ್ಟ್ರ ವಿರುದ್ಧ ಸೋತಿದ್ದ ಹಿಮಾಚಲ ಗೆಲುವಿನ ಹಳಿಗೆ ಮರಳಿದೆ.

7 ವಿಕೆಟ್‌ಗಳ ನಷ್ಟಕ್ಕೆ 133 ರನ್‌ನಿಂದ ಎರಡನೇ ಇನಿಂಗ್ಸ್ ಮುಂದುವರಿಸಿದ ಹಿಮಾಚಲ ನಿನ್ನೆಯ ಸ್ಕೋರ್‌ಗೆ 21 ರನ್ ಸೇರಿಸುವಷ್ಟರಲ್ಲಿ 154 ರನ್‌ಗೆ ಆಲೌಟಾಯಿತು. ಟೆಸ್ಟ್ ಸ್ಪಿನ್ನರ್ ಆರ್.ಅಶ್ವಿನ್(4-55)ನಾಲ್ಕು ವಿಕೆಟ್ ಪಡೆದರೆ, ಕೆ.ವ್ನಿೇಶ್(2-19)ಹಾಗೂ ಆರ್.ಸಾಯಿ ಕಿಶೋರ್(2-23)ತಲಾ ಎರಡು ವಿಕೆಟ್‌ಗಳನ್ನು ಉರುಳಿಸಿದರು. ಚೆನ್ನೈನ ಹಿರಿಯ ಸ್ಪಿನ್ನರ್ ಅಶ್ವಿನ್ ಪಂದ್ಯದಲ್ಲಿ 120 ರನ್‌ಗೆ ಒಟ್ಟು 9 ವಿಕೆಟ್‌ಗಳನ್ನು ಪಡೆದಿದ್ದಾರೆ.

 ಗೆಲ್ಲಲು 217 ರನ್ ಬೆನ್ನಟ್ಟಿದ ತಮಿಳುನಾಡು ತಂಡ ಅನುಭವಿ ಆಟಗಾರ ಅಭಿನವ್ ಮುಕುಂದ್ ವಿಕೆಟನ್ನು ಶೂನ್ಯಕ್ಕೆ ಕಳೆದುಕೊಂಡಿತು. ಚೊಚ್ಚಲ ಪಂದ್ಯವನ್ನಾಡುತ್ತಿರುವ ಕೆ.ಮುಕುಂದ್(48,146 ಎಸೆತ) ಹಾಗೂ ವಿ.ಗಂಗಶ್ರೀಧರ್ ರಾಜು(21)ಒಂದಷ್ಟು ಪ್ರತಿರೋಧ ಒಡ್ಡಿದರು. ಈ ಜೋಡಿ 19 ಓವರ್‌ಗಳಲ್ಲಿ 40 ರನ್ ಸೇರಿಸಿತು. ನಾಯಕ ಬಿ.ಅಪರಾಜಿತ್(ಔಟಾಗದೆ 43)ತಂಡದ ಗೆಲುವಿಗಾಗಿ ಪ್ರಯತ್ನ ನಡೆಸಿತು. ಆದರೆ,ಉಳಿದ ಆಟಗಾರರು ವಶಿಷ್ಟ ಅವರ ಸ್ಪಿನ್ ಮೋಡಿಗೆ ತತ್ತರಿಸಿದರು. 121 ರನ್‌ಗೆ 5 ವಿಕೆಟ್‌ಗಳನ್ನು ಕಳೆದುಕೊಂಡಿದ್ದ ತಮಿಳುನಾಡು 145 ರನ್‌ಗೆ ಆಲೌಟಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News