×
Ad

ಪರಿಶಿಷ್ಟ ಪಂಗಡಕ್ಕೆ ‘ಗೋಂದಳಿ ಜನಾಂಗ’ ಸೇರ್ಪಡೆಗೆ ಕೇಂದ್ರಕ್ಕೆ ಪತ್ರ: ಸಿಎಂ ಯಡಿಯೂರಪ್ಪ ಭರವಸೆ

Update: 2019-12-20 20:57 IST

ಬೆಂಗಳೂರು, ಡಿ. 20: ರಾಜ್ಯದಲ್ಲಿರುವ ‘ಗೋಂದಳಿ ಸಮಾಜ’ವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳಿಸುವಂತೆ ಶಿಫಾರಸು ಮಾಡಿ, ಕೇಂದ್ರ ಸರಕಾರಕ್ಕೆ ಪತ್ರ ಬರೆಯಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಇಂದಿಲ್ಲಿ ಭರವಸೆ ನೀಡಿದ್ದಾರೆ.

ಶುಕ್ರವಾರ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಶಾಸಕ ಎಂ.ಎಲ್.ಲಮಾಣಿ ನೇತೃತ್ವದಲ್ಲಿ ಅಖಿಲ ಕರ್ನಾಟಕ ಗೋಂದಳಿ ಸಮಾಜದ ನಿಯೋಗ, ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿತು. ಗೋಂದಳಿ ಸಮುದಾಯದ ಜನರು ಅಲೆಮಾರಿಗಳಾಗಿದ್ದು, ಶಿಕ್ಷಣ ಮತ್ತು ಉದ್ಯೋಗದಿಂದ ವಂಚಿತರಾಗಿದ್ದಾರೆ.

ಈ ಹಿನ್ನೆಲೆಯಲ್ಲಿ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ನಿಯೋಗವು ಮಾಡಿದ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಮುಖ್ಯಮಂತ್ರಿ, ಕೇಂದ್ರಕ್ಕೆ ಪತ್ರ ಬರೆಯಲಾಗುವುದು. ಗೋಂದಳಿ ಸಮುದಾಯಕ್ಕೆ ಯಾವುದೇ ಶಾಸನ ಸಭೆಯಲ್ಲಿ, ಸ್ಥಳೀಯ ಆಡಳಿತ ಸಂಸ್ಥೆಗಳಲ್ಲಿ ರಾಜಕೀಯ ಪ್ರಾತಿನಿಧ್ಯ ಇಲ್ಲ. ಆದುದರಿಂದ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ಕಲ್ಪಿಸುವಂತೆಯೂ ನಿಯೋಗದ ಪ್ರತಿನಿಧಿಗಳು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಮಾಡಿದರು. ಈ ಬಗ್ಗೆ ಪರಿಶೀಲಿಸಿ, ಕ್ರಮ ಕೈಗೊಳ್ಳುವುದು ಎಂದು ಯಡಿಯೂರಪ್ಪ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News