ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ಹಿನ್ನೆಲೆ: ಬೆಂಗಳೂರಿನಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್
ಬೆಂಗಳೂರು, ಡಿ.20: ಪೌರತ್ವ ಕಾಯ್ದೆ ತಿದ್ದುಪಡಿ ವಿರೋಧಿಸಿ ದೇಶಾದ್ಯಂತ ಪ್ರತಿಭಟನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ನಗರವ್ಯಾಪ್ತಿಯಲ್ಲಿ ಇಂದು ನಿಷೇಧಾಜ್ಞೆ ಮುಂದುವರಿಸಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ನಿಷೇಧಾಜ್ಞೆಯ ನಡುವೆಯೇ ನಿನ್ನೆ(ಗುರುವಾರ) ನಗರದ ಹಲವೆಡೆ ಬೃಹತ್ ಪ್ರತಿಭಟನೆ ನಡೆಸಲಾಗಿತ್ತು. ಈ ಹಿನ್ನೆಲೆಯಲ್ಲಿ ಇಂದು ನಗರದ ವ್ಯಾಪ್ತಿಯಲ್ಲಿ ಕೆಎರ್ಸ್ಸಾಪಿ ಹಾಗೂ ಸಿಎಆರ್ ತುಕಡಿಗಳ ನಿಯೋಜನೆ ಮಾಡಲಾಗಿತ್ತು. ಸೂಕ್ಷ್ಮ, ಅತಿಸೂಕ್ಷ್ಮ ಪ್ರದೇಶಗಳಲ್ಲಿನ ಭದ್ರತೆಯನ್ನು ಹೆಚ್ಚಿಸಲಾಗಿತ್ತು. ಡಿಸಿಪಿಗಳು ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಭದ್ರತೆಯ ನೇತೃತ್ವ ವಹಿಸಿದ್ದರು. ಮುಖ್ಯವಾಗಿ ಪುರಭವನದ ಮುಂಭಾಗ ಹೆಚ್ಚಿನ ಪೊಲೀಸ್ ಭದ್ರತೆ ನಿಯೋಜಿಸಲಾಗಿತ್ತು. 4 ಕೆಎರ್ಸ್ಸಾಪಿ ತುಕಡಿ ಸ್ಥಳದಲ್ಲಿದ್ದು, ಅಗತ್ಯವಿದ್ದರೆ ಹೆಚ್ಚಿನ ಪೊಲೀಸರನ್ನು ಕರೆಸಿಕೊಳ್ಳಲಾಗುವುದು. ಪ್ರತಿಭಟನೆಯನ್ನು ನಿಯಂತ್ರಿಸಲು ನಮ್ಮ ಪೊಲೀಸರು ಸಜ್ಜುಗೊಂಡಿದ್ದಾರೆಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ನಿಯಮವನ್ನು ಉಲ್ಲಂಘಿಸಿ ಪ್ರತಿಭಟನಾಕಾರರನ್ನು ಬಂಧಿಸಲು ಬಿಎಂಟಿಸಿ ಬಸ್‌ಗಳನ್ನು ಸಜ್ಜುಗೊಳಿಸಲಾಗಿತ್ತು. ಮುಸ್ಲಿಮ್ ಸಮುದಾಯ ಹೆಚ್ಚಿರುವ ಗೋರಿಪಾಳ್ಯದ ಪ್ರಮುಖ ಸರ್ಕಲ್ ಆಗಿರುವ ಸಂಗಮ ಸರ್ಕಲ್‌ನಲ್ಲಿ ಕೆಎರ್ಸ್ಸಾಪಿ ಹಾಗೂ 30ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿತ್ತು.