ದೇಶ ಬಿಟ್ಟು ಹೋದ ಮುಸ್ಲಿಮರಿಗೆ ಮತ್ತೇಕೆ ಪೌರತ್ವ ನೀಡಬೇಕು: ತೇಜಸ್ವಿ ಸೂರ್ಯ

Update: 2019-12-20 18:22 GMT

ಬೆಂಗಳೂರು, ಡಿ.20: ಧರ್ಮದ ಆಧಾರದ ಮೇಲೆ ಅಖಂಡ ಭಾರತದಿಂದ ಹೊರ ಹೋದ ಮುಸ್ಲಿಮರಿಗೆ ಮತ್ತೇಕೆ ಪೌರತ್ವ ನೀಡಬೇಕು ಎಂದು ಸಂಸದ ತೇಜಸ್ವಿ ಸೂರ್ಯ ಪ್ರಶ್ನಿಸಿದರು.

ಶುಕ್ರವಾರ ನಗರದ ನೃಪತುಂಗ ರಸ್ತೆಯ ಯವನಿಕಾ ಸಭಾಂಗಣದಲ್ಲಿ ಅಡ್ವಕೇಟ್ಸ್ ಫಾರ್ ನೇಶನ್ ಪ್ರೆಸೆಂಟ್ಸ್ ಆಯೋಜಿಸಿದ್ದ, ಪೌರತ್ವ ತಿದ್ದುಪಡಿ ಕಾಯ್ದೆ-2019 ಕುರಿತ ಸತ್ಯಾಂಶ ಚರ್ಚಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 1947ನೆ ಸಾಲಿನಲ್ಲಿ ಪಾಕಿಸ್ತಾನ, ಬಳಿಕ ಬಾಂಗ್ಲಾದೇಶ ಧರ್ಮದ ಆಧಾರದ ಮೇಲೆಯೇ ಅಖಂಡ ಭಾರತ ಬಿಟ್ಟು ಹೋದರು. ಆದರೆ, ಮತ್ತೆ ಧರ್ಮದ ಅಡಿಯಲ್ಲಿಯೇ ಪೌರತ್ವಕ್ಕೆ ಅವಕಾಶ ನೀಡಿ ಎನ್ನುವುದು ಎಷ್ಟರ ಮಟ್ಟಿಗೆ ಸರಿ ಎಂದು ಹೇಳಿದರು.

ಪೌರತ್ವ ತಿದ್ದುಪಡಿ ಕಾಯ್ದೆಯಲ್ಲಿ ಧರ್ಮದ ಅಂಶವೇ ಇಲ್ಲ. ಬದಲಾಗಿ, ದೌರ್ಜನ್ಯಕ್ಕೆ ಒಳಪಟ್ಟವರಿಗೆ ಶಾಶ್ವತ ನೆಲೆ ನೀಡಬೇಕೆಂಬ ಉದ್ದೇಶ ಹೊಂದಲಾಗಿದೆ. ಇದು, ಸಂವಿಧಾನದ ಮೂಲಕವೇ ನೀಡಲಾಗುತ್ತಿದೆ ಎಂದ ಅವರು, ಕೆಲವರು ಪಾಕಿಸ್ತಾನದ ಶಿಯಾ ಮತ್ತು ಅಹ್ಮದಿ ಸಮುದಾಯದ ಬಗ್ಗೆ ಮಾತನಾಡುತ್ತಾರೆ. ಆದರೆ, ಈ ಸಮುದಾಯಗಳು ಇಸ್ಲಾಂ ಧರ್ಮ ಒಪ್ಪಿಕೊಂಡಿರುವುದರಿಂದ, ಗಂಭೀರ ಪರಿಸ್ಥಿತಿ ಎದುರಿಸಿಲ್ಲ ಎಂದು ಅವರು ತಿಳಿಸಿದರು.

ತಮ್ಮ ಧರ್ಮದ ಕಾರಣಕ್ಕೆ ಕಿರುಕುಳ ಅನುಭವಿಸಿ 2014ರ ಡಿಸೆಂಬರ್ ಮೊದಲು ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ ಭಾರತಕ್ಕೆ ವಲಸೆ ಬಂದ ಹಿಂದೂ, ಸಿಖ್, ಜೈನ್, ಬೌದ್ಧ, ಪಾರ್ಸಿ ಮತ್ತು ಕ್ರಿಶ್ಚಿಯನ್ ವಿದೇಶಿಯರಿಗೆ ಮಾತ್ರ ಸಿಎಎ ಅನ್ವಯವಾಗುತ್ತದೆ ಎಂದು ಮಾಹಿತಿ ನೀಡಿದರು.

ಸಿಎಎ ಯಾವುದೇ ಭಾರತೀಯ ಪ್ರಜೆಗೆ ಅನ್ವಯಿಸುವುದಿಲ್ಲ. ಎಲ್ಲ ಭಾರತೀಯ ನಾಗರಿಕರು ಭಾರತದ ಸಂವಿಧಾನದಿಂದ ಖಾತರಿಪಡಿಸಿದ ಮೂಲಭೂತ ಹಕ್ಕುಗಳನ್ನು ಅನುಭವಿಸಲು ಅರ್ಹರಾಗಿರುತ್ತಾರೆ. ಯಾವುದೇ ಭಾರತೀಯ ನಾಗರಿಕನ ಪೌರತ್ವವನ್ನು ಕಸಿದುಕೊಳ್ಳುವ ಉದ್ದೇಶವನ್ನು ಹೊಂದಿಲ್ಲ ಎಂದು ತೇಜಸ್ವಿ ಸೂರ್ಯ ನುಡಿದರು.

ಈ ಸಂದರ್ಭದಲ್ಲಿ ಹೈಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಸುಭಾಷ್ ಬಿ.ಅಡಿ, ಕರ್ನಾಟಕ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಝೀಮ್, ಹಿರಿಯ ವಕೀಲ ಬಿ.ವಿ.ಆಚಾರ್ಯ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News