ದ.ಕ.ಜಿಲ್ಲೆ ಪ್ರವೇಶಿಸಲು ಕಾಂಗ್ರೆಸ್ ನಿಯೋಗಕ್ಕೆ ಅವಕಾಶ ಕೊಡಬಾರದು: ಡಿ.ವಿ.ಸದಾನಂದಗೌಡ

Update: 2019-12-20 18:26 GMT

ಬೆಂಗಳೂರು, ಡಿ.20: ಹಿಂಸಾಚಾರಕ್ಕೆ ತುತ್ತಾಗಿರುವ ದಕ್ಷಿಣ ಕನ್ನಡ ಜಿಲ್ಲೆಗೆ ಒಂದೆರೆಡು ದಿನ ಹೊರಗಿನ ನಾಯಕರು ಪ್ರವೇಶಿಸಲು ಅವಕಾಶ ನೀಡಬಾರದು ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದಗೌಡ ಆಗ್ರಹಿಸಿದರು.

ಶುಕ್ರವಾರ ನಗರದ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಅಸ್ಸಾಂ ಮತ್ತು ಇತರೆಡೆ ಪ್ರತಿಭಟನೆಗಳು ನಡೆದು ಎರಡು, ಮೂರು ದಿನಗಳ ನಂತರ ಮಂಗಳೂರಿನಲ್ಲಿ ಯೋಜಿತ ರೀತಿಯಲ್ಲಿ ಪ್ರತಿಭಟನೆ ನಡೆದಿದೆ ಎಂದರು.

ಪ್ರತಿಭಟನೆಗೆ ಕೇರಳದಿಂದ ಯುವಕರನ್ನು ಕರೆಸಿಕೊಳ್ಳಲಾಗಿದೆ. ಕಾಂಗ್ರೆಸ್ ಇದಕ್ಕೆ ಸಹಾಯ ಮಾಡಿದೆ. ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಶಾಸಕ ಯು.ಟಿ.ಖಾದರ್ ಬೆಂಕಿಗೆ ತುಪ್ಪ ಸುರಿದಂತೆ ಹಿಂಸಾಚಾರವನ್ನು ಪ್ರಚೋದಿಸಿದ್ದಾರೆ. ಇದನ್ನೆ ಸಮಾಜದ್ರೋಹಿಗಳು ಲಾಭ ಪಡೆದಿದ್ದಾರೆ. ಖಾದರ್ ತಮ್ಮ ರಾಜಕೀಯ ಅಸ್ತಿತ್ವಕ್ಕೋಸ್ಕರ ಇಂತಹ ಪ್ರಚೋದನೆಯನ್ನು ಮಾಡಿದ್ದಾರೆ ಎಂದು ಅವರು ದೂರಿದರು.

ಸದ್ಯ ಮಂಗಳೂರಿನಲ್ಲಿ ಯಾವುದೇ ಅಹಿತಕರ ಘಟನೆಗಳು ವರದಿಯಾಗಿರುವ ಬಗ್ಗೆ ವರದಿಯಾಗಿಲ್ಲ. ಇದೀಗ, ಸಿದ್ದರಾಮಯ್ಯ, ಝಮೀರ್ ಅಹ್ಮದ್ ಖಾನ್ ಸೇರಿದಂತೆ ಕಾಂಗ್ರೆಸ್ ಮುಖಂಡರು ಪರಿಸ್ಥಿತಿ ಅವಲೋಕನಕ್ಕೆ ಮಂಗಳೂರಿಗೆ ತೆರಳುವುದಾಗಿ ಗೊತ್ತಾಗಿದೆ. ಆದರೆ, ಈ ಮುಖಂಡರಿಗೆ ಯಾವುದೇ ಕಾರಣಕ್ಕೂ ದಕ್ಷಿಣ ಕನ್ನಡ ಜಿಲ್ಲೆ ಪ್ರವೇಶಿಸಲು ಅವಕಾಶ ನೀಡಬಾರದು ಎಂದು ಸದಾನಂದಗೌಡ ಒತ್ತಾಯಿಸಿದರು.

ಈ ನಾಯಕರ ಪ್ರವೇಶದಿಂದ ಯುವಕರು ಮತ್ತಷ್ಟು ಪ್ರಚೋದಿಸಲ್ಪಟ್ಟು, ಕಾನೂನು ಸುವ್ಯವಸ್ಥೆಗೆ ಭಂಗ ಉಂಟಾಗುವ ಅಪಾಯವಿದೆ. ಪೌರತ್ವ ತಿದ್ದುಪಡಿ ಕಾಯ್ದೆಯಿಂದ ದೇಶದಲ್ಲಿರುವ ಮುಸ್ಲಿಮರು ಸೇರಿದಂತೆ ಯಾವುದೇ ಜನರಿಗೆ ತೊಂದರೆಯಿಲ್ಲ. ಇಷ್ಟಕ್ಕೂ ಕಾಯ್ದೆ, ದೇಶದಲ್ಲಿನ ನಾಗರಿಕರಿಗೆ ಸಂಬಂಧಿಸಿದ್ದಲ್ಲ, ನೆರೆ ದೇಶಗಳಲ್ಲಿ ಕಿರುಕುಳ ದೌರ್ಜನ್ಯಕ್ಕೆ ಒಳಗಾದ ಅಲ್ಪಸಂಖ್ಯಾತರಿಗೆ ಪೌರತ್ವ ನೀಡಲು ತಂದಿರುವ ಕಾಯ್ದೆಯಾಗಿದೆ ಎಂದು ಅವರು ಹೇಳಿದರು.

ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಮಾತನಾಡಿ, ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ನಡೆಯುತ್ತಿರುವ ಪ್ರತಿಭಟನೆಗಳು ಹಿಂಸಾರೂಪ ತಳೆದಿದ್ದು, ಸಾರ್ವಜನಿಕರ ಆಸ್ತಿಪಾಸ್ತಿಗೆ ಅಪಾರ ನಷ್ಟವಾಗುತ್ತಿದ್ದು, ಶಾಂತಿಯುತ ಪ್ರತಿಭಟನೆ ಮೂಲಕ ಸಾರ್ವಜನಿಕ ಆಸ್ತಿ ಪಾಸ್ತಿಗೆ ಯಾವುದೇ ಹಾನಿ ಮಾಡದಂತೆ ಮನವಿ ಮಾಡಿದರು.

ರಾಷ್ಟ್ರದಲ್ಲಿ ಭದ್ರತೆ ಮತ್ತು ಏಕತೆಗಾಗಿ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತರಲಾಗಿದೆ. ಆದರೆ, ಕಾಯ್ದೆ ಕುರಿತು ಕೆಲವರು ತಪ್ಪು ಮಾಹಿತಿ ನೀಡಿ ಜನರನು ದಾರಿ ತಪ್ಪಿಸುತ್ತಿದ್ದಾರೆ. ಕಾಂಗ್ರೆಸ್ ಶಾಸಕ ಯು.ಟಿ.ಖಾದರ್ ಹಿಂಸೆಗೆ ಪ್ರಚೋದನೆ ನೀಡಿ, ಹಿಂಸಾಚಾರ ತೀವ್ರ ರೂಪ ಪಡೆಯಲು ಕಾರಣವಾಗಿದ್ದಾರೆ ಎಂದು ಅವರು ದೂರಿದರು.

ಯಾವುದೇ ಪ್ರತಿಭಟನೆ ನಡೆಸಲು ಜನರಿಗೆ ಹಕ್ಕಿದೆ. ಆದರೆ, ಶಾಂತಿಯುತ ಪ್ರತಿಭಟನೆ ಮೂಲಕ ತಮ್ಮ ಬೇಡಿಕೆಗಳನ್ನು ಜಿಲ್ಲಾಧಿಕಾರಿ ಮೂಲಕ ಸರಕಾರಕ್ಕೆ ಸಲ್ಲಿಸಬೇಕು. ಸಾರ್ವಜನಿಕ ಆಸ್ತಿ-ಪಾಸ್ತಿಗೆ ನಷ್ಟವಾದರೆ, ಸರಕಾರದ ಬೊಕ್ಕಸಕ್ಕೆ ನಷ್ಟವಾಗುತ್ತದೆ. ಅಂತಿಮವಾಗಿ ಇದು ಸಾರ್ವಜನಿಕರ ಮೇಲೆ ಹೊರೆ ಬೀಳುತ್ತದೆ. ಈ ನಿಟ್ಟಿನಲ್ಲಿ ರಾಷ್ಟ್ರದ ಹಿತದೃಷ್ಟಿಯಿಂದ ನಾವೆಲ್ಲರೂ ಶಾಂತಿ-ಸುವ್ಯವಸ್ಥೆ ಕಾಪಾಡಲು ಕೈ ಜೋಡಿಸಬೇಕು ಎಂದು ಅವರು ಕೋರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News