ಮಂಗಳೂರು ಭೇಟಿ ಅವಕಾಶ ನಿರಾಕರಿಸಿ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಲಾಗಿದೆ: ಸಿದ್ದರಾಮಯ್ಯ

Update: 2019-12-21 14:05 GMT

ಬೆಂಗಳೂರು, ಡಿ.21: ಮುಖ್ಯಮಂತ್ರಿ, ಗೃಹ ಸಚಿವರು ಮಂಗಳೂರಿಗೆ ಭೇಟಿ ನೀಡಬಹುದು. ಆದರೆ, ಪ್ರತಿಪಕ್ಷ ನಾಯಕನಾದ ನನಗೆ ಭೇಟಿ ನೀಡಲು ಅವಕಾಶವಿಲ್ಲ. ಇದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಶನಿವಾರ ನಗರದಲ್ಲಿರುವ ತಮ್ಮ ನಿವಾಸ ‘ಕಾವೇರಿ’ಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸರಕಾರದ ವೈಫಲ್ಯ ಮತ್ತು ಪೊಲೀಸರ ಅಮಾನವೀಯತೆ ಜನರಿಗೆ ಗೊತ್ತಾಗುತ್ತದೆ ಎಂಬ ಕಾರಣಕ್ಕೆ ನನಗೆ ಭೇಟಿ ನೀಡಲು ಅವಕಾಶ ನಿರಾಕರಿಸುತ್ತಿದ್ದಾರೆ ಎಂದು ಕಿಡಿಗಾರಿದರು.

ನೊಂದವರ ಧ್ವನಿಯಾಗಿ, ಸರಕಾರದ ಅನ್ಯಾಯವನ್ನು ಎತ್ತಿ ತೋರಿಸಲು ಅವಕಾಶವಿಲ್ಲ ಎಂದಾದರೆ ವಿರೋಧ ಪಕ್ಷ ಏಕೆ ಬೇಕು? ಕಾನೂನು ಸುವ್ಯವಸ್ಥೆ ಬಗ್ಗೆ ಎರಡೆರಡು ಬಾರಿ ಗೋಲಿಬಾರ್ ಮಾಡಿಸಿ ಅಮಾಯಕರನ್ನು ಕೊಂದ ಬಿಜೆಪಿಯವರಿಂದ ಪಾಠ ಹೇಳಿಸಿಕೊಳ್ಳಬೇಕಾದ ಅಗತ್ಯ ನನಗಿಲ್ಲ ಎಂದು ಸಿದ್ದರಾಮಯ್ಯ ತಿಳಿಸಿದರು.

ಕೇಂದ್ರ ಸಚಿವರೊಬ್ಬರು ‘ರಿವಾಲ್ವರ್‌ಗಳಿರುವುದು ಪೂಜೆ ಮಾಡೋಕೆ ಅಲ್ಲ’ ಎಂದು ಹೇಳುತ್ತಾರೆ. ಇಂಥ ಮಾತುಗಳು ಗಲಭೆಗೆ ಪ್ರಚೋದನೆ ನೀಡಿದಂತೆ ಆಗುವುದಿಲ್ಲವೇ? ರಿವಾಲ್ವರ್ ಇದೆ ಅಂತ ದಿನಕ್ಕೊಬ್ಬನನ್ನು ಕೊಲ್ಲುತ್ತೀರಾ? ಬಿಜೆಪಿ ನಾಯಕರೇ ನಾಚಿಕೆಯಾಗಲ್ವ ನಿಮಗೆ ಇಂಥವರನ್ನು ಇನ್ನೂ ಮಂತ್ರಿಯಾಗಿ ಉಳಿಸಿಕೊಂಡಿದ್ದೀರಲ್ಲ? ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಸಮಯ ಸಂದರ್ಭ ನೋಡಿ ಪೊಲೀಸರೆ ಲಾಠಿ ಚಾರ್ಜ್, ಗೋಲಿಬಾರ್ ಮಾಡಬಹುದು ಅಂತ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಎಲ್ಲವನ್ನೂ ಪೊಲೀಸರೇ ತೀರ್ಮಾನ ಮಾಡುವುದಾದರೆ ಗೃಹ ಸಚಿವರಾಗಿ ನೀಮಗೇನು ಕೆಲಸ? ಇನ್ನೂ ಯಾಕೆ ಆ ಹುದ್ದೆಯಲ್ಲಿದ್ದೀರಾ, ಎಲ್ಲವನ್ನೂ ಅವರಿಗೇ ನಿರ್ಧರಿಸಲು ಬಿಟ್ಟು ರಾಜೀನಾಮೆ ನೀಡಿ ಮನೆಗೆ ಹೋಗಿ ಎಂದು ಸಿದ್ದರಾಮಯ್ಯ ಕಿಡಿಗಾರಿದರು.

ಹೈಕೋರ್ಟ್‌ನ ಹಾಲಿ ನ್ಯಾಯಾಧೀಶರಿಂದ ಗೋಲಿಬಾರ್ ಪ್ರಕರಣದ ನ್ಯಾಯಾಂಗ ತನಿಖೆಯಾಗಿ, ಅಪರಾಧಿಗಳನ್ನು ಪತ್ತೆ ಹಚ್ಚಿ ಸೂಕ್ತ ಶಿಕ್ಷೆ ನೀಡಬೇಕು. ಪ್ರತಿಯೊಬ್ಬರ ಜೀವವೂ ಅಮೂಲ್ಯ, ಗೋಲಿಬಾರ್‌ನಲ್ಲಿ ಪ್ರಾಣ ಕಳೆದುಕೊಂಡ ಅಮಾಯಕರ ಬಲಿದಾನಕ್ಕೆ ನ್ಯಾಯ ಸಿಗುವವರೆಗೆ ಹೋರಾಟ ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ಸಿದ್ದರಾಮಯ್ಯ ಎಚ್ಚರಿಕೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವರಾದ ಸತೀಶ್ ಜಾರಕಿಹೊಳಿ, ಝಮೀರ್ ಅಹ್ಮದ್ ಖಾನ್, ಮಾಜಿ ಶಾಸಕರಾದ ಅಪ್ಪಾಜಿ ನಾಡಗೌಡ, ಅಶೋಕ್ ಪಟ್ಟಣ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News