ಬೆಂವಿವಿಗೆ ಉಪನ್ಯಾಸಕರ ನೇಮಕಾತಿ ಶೀಘ್ರ: ವೇಣುಗೋಪಾಲ್

Update: 2019-12-21 14:00 GMT

ಬೆಂಗಳೂರು, ಡಿ.21: ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಖಾಲಿಯಿರುವ ಉಪನ್ಯಾಸಕರ ಹುದ್ದೆಗಳನ್ನು ಮುಂದಿನ ಆರು ತಿಂಗಳಲ್ಲಿ ಭರ್ತಿ ಮಾಡಲಾಗುವುದು ಎಂದು ಬೆಂವಿವಿ ಕುಲಪತಿ ಪ್ರೊ.ಕೆ.ಆರ್.ವೇಣುಗೋಪಾಲ್ ತಿಳಿಸಿದ್ದಾರೆ.

ನಗರದ ಬೆಂವಿವಿ ವತಿಯಿಂದ ಜ್ಞಾನಭಾರತಿ ಆವರಣದಲ್ಲಿ ಆಯೋಜಿಸಿದ್ದ ವಿಶ್ವವಿದ್ಯಾಲಯ ಸಸ್ಯಶಾಸ್ತ್ರ ವಿಭಾಗದ ಶತಮಾನೋತ್ಸವ ಸಮಾರಂಭದ ಸಮಾರೋಪ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಿಶ್ವವಿದ್ಯಾಲಯ ಉಪನ್ಯಾಸಕರ ಕೊರತೆಯಿಂದ ಕಳೆಗುಂದಿದೆ. ಇದನ್ನು ಮುಂದಿನ ಆರು ತಿಂಗಳಲ್ಲಿ ಉಪನ್ಯಾಸಕರ ನೇಮಕಾತಿ ನಡೆಸಿ ಮೊದಲಿನ ಹುರುಪನ್ನು ಮರುಕಳಿಸುವಂತೆ ಮಾಡುವುದಾಗಿ ತಿಳಿಸಿದರು.

ಸಸ್ಯಶಾಸ್ತ್ರ ವಿಭಾಗಕ್ಕೆ 10ಜನರ ನೇಮಕಾತಿ ನಡೆಸಲಾಗುವುದು. ಮುಂದಿನ ದಿನಗಳಲ್ಲಿ ಔಷದಿ ಸಸ್ಯಶಾಸ್ತ್ರದ ಕೋರ್ಸ್ ಪ್ರಾರಂಭಿಸುವ ಉದ್ದೇಶವಿದೆ. ಈ ಬಗ್ಗೆ ಸಂಬಂಧಿಸಿದ ಶಿಕ್ಷಣ ಇಲಾಖೆಯ ಸಚಿವರು, ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ಸೂಕ್ತ ತೀರ್ಮಾನಕ್ಕೆ ಬರಲಾಗುವುದು ಎಂದು ಅವರು ಹೇಳಿದರು.

ವಿಜ್ಞಾನಿಗಳಾದ ಎಸ್.ಆರ್.ರಾವ್ ಮಾತನಾಡಿ, ಸಸ್ಯಶಾಸ್ತ್ರ ವಿಭಾಗವು ಹಲವು ಉನ್ನತ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹಿರಿಯ ವಿದ್ಯಾರ್ಥಿಗಳಿಂದ ಕೂಡಿರುವುದು ಹೆಮ್ಮೆಯ ಸಂಗತಿ ಹಾಗೂ ಸಸ್ಯಶಾಸ್ತ್ರದಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಸಮಾಜಕ್ಕೆ ಉಪಯುಕ್ತವಾಗುವ ಮಾಧರಿಯಲ್ಲಿ ನವೀನ ಕೋರ್ಸ್‌ಗಳನ್ನು ಪ್ರಾರಂಭಿಸಬೇಕು ಎಂದು ಅವರು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಬೆಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಎಚ್.ಎನ್.ರಂಗನಾಥ್ ಮಾತನಾಡಿ, ವಿಶ್ವವಿದ್ಯಾಲಯಕ್ಕೆ ನಾನು ಚಿರಋಣಿಯಾಗಿರುತ್ತೇನೆ. ನನ್ನ ಬದುಕಿನ ಹಲವು ಮಹತ್ತರ ಘಟನೆಗಳು ಸಂಭವಿಸಿದ ಸ್ಥಳ ಇದಾಗಿದೆ. ಮತ್ತಷ್ಟು ಮೂಲಭೂತ ಸೌಕರ್ಯ ಮತ್ತು ಉಪನ್ಯಾಸಕರ ಕೊರತೆಯನ್ನು ನೀಗಿಸುವ ಮೂಲಕ ವಿಶ್ವವಿದ್ಯಾಲಯದ ಹೊಳಪನ್ನು ಮರುಕಳಿಸುವಂತೆ ಮಾಡಬೇಕೆಂದು ಕುಲಪತಿಗಳಿಗೆ ಮನವಿ ಮಾಡಿದರು.

ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಕೆ.ಸಿದ್ದಪ್ಪ, ಬೆಂಗಳೂರು ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಪ್ರೊ.ಬಿ.ಕೆ. ರವಿ, ಬೆಂಗಳೂರು ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಸಿ.ಶಿವರಾಜ, ವಿತ್ತ ಅಧಿಕಾರಿ ಪಾರ್ವತಿ, ಸಸ್ಯಶಾಸ್ತ್ರ ವಿಭಾಗದ ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ನಿಜಲಿಂಗಪ್ಪಮತ್ತು ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಟಿ.ಜಿ.ಉಮೇಶ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News