ಕ್ರಿಕೆಟ್ ಆಟವಾಡಿ ಗಮನ ಸೆಳೆದ ಡಿ.ಕೆ.ಶಿವಕುಮಾರ್
Update: 2019-12-21 22:55 IST
ಬೆಂಗಳೂರು, ಡಿ. 21: ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರು ಮಾಧ್ಯಮ ಪ್ರತಿನಿಧಿಗಳ ಕ್ರಿಕೆಟ್ ಪಂದ್ಯ ಉದ್ಘಾಟನೆ ವೇಳೆ ಬ್ಯಾಟ್ ಹಿಡಿದು ಕ್ರಿಕೆಟ್ ಆಟವಾಡಿ ಎಲ್ಲರ ಗಮನ ಸೆಳೆದಿದ್ದಾರೆ.
ಶನಿವಾರ ಇಲ್ಲಿನ ಹೊಸಕೆರೆಹಳ್ಳಿ ಸಮೀಪದ ಪಿಇಎಸ್ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಇಂಟರ್ ಮೀಡಿಯಾ ಟಿ-10 ಕ್ರಿಕೆಟ್ ಪಂದ್ಯಾವಳಿಯನ್ನು ಉದ್ಘಾಟಿಸಿದ ಡಿ.ಕೆ.ಶಿವಕುಮಾರ್ ಕೆಲಕಾಲ ಬ್ಯಾಟ್ ಹಿಡಿದು ಚೆಂಡನ್ನು ಬೌಂಡರಿಗೆ ಅಟ್ಟಿದರು. ನಂತರ ಕೆಲ ಓವರ್‌ಗಳು ಬೌಲಿಂಗ್ ಮಾಡಿದ್ದು ವಿಶೇಷವಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್ ಅವರು, ನಾನು ವಾಲಿಬಾಲ್, ಕಬಡ್ಡಿ ಆಟಗಾರನಾಗಿದ್ದೆ. ಇಪ್ಪತ್ತು ವರ್ಷಗಳ ಹಿಂದೆ ವಿವಿಧ ಪಂದ್ಯಗಳಲ್ಲೂ ಭಾಗವಹಿಸಿದ್ದೆ. ಆದರೆ, ಈಗ ಸಮಯದ ಅಭಾವದಿಂದ ಕ್ರೀಡೆಯಲ್ಲಿ ಪಾಲ್ಗೊಳ್ಳಲು ಆಗುತ್ತಿಲ್ಲ ಎಂದು ಹೇಳಿದರು.
ಈ ವೇಳೆ ಪ್ರೆಸ್‌ಕ್ಲಬ್ ಅಧ್ಯಕ್ಷ ಸದಾಶಿವ ಶೆಣ್ಣೈ, ಕಾರ್ಯದರ್ಶಿ ಕಿರಣ್, ಪತ್ರಕರ್ತ ತ್ಯಾಗರಾಜ್ ಸೇರಿದಂತೆ ಮಾಧ್ಯಮ ಪ್ರತಿನಿಧಿಗಳು ಉಪಸ್ಥಿತರಿದ್ದರು.