ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಅಪಪ್ರಚಾರ ಬೇಡ: ಸಚಿವ ಜಗದೀಶ್ ಶೆಟ್ಟರ್

Update: 2019-12-21 18:24 GMT

ಬೆಂಗಳೂರು, ಡಿ. 21: ಪೌರತ್ವ ತಿದ್ದುಪಡಿ ಕಾಯ್ದೆ ವಿಚಾರವಾಗಿ ಮಂಗಳೂರಿನಲ್ಲಿ ನಡೆದ ಹಿಂಸಾಚಾರಕ್ಕೆ ನೇರ ಹೊಣೆ ಮಾಜಿ ಸಚಿವ ಯು.ಟಿ.ಖಾದರ್ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಇಂದಿಲ್ಲಿ ಆರೋಪಿಸಿದ್ದಾರೆ.

ಶನಿವಾರ ಉದ್ಯೋಗ ಮಿತ್ರ ಸಭಾಂಗಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪೌರತ್ವ ತಿದ್ದುಪಡಿ ಕಾಯ್ದೆ ಅನುಷ್ಠಾನವಾದರೆ ಮಂಗಳೂರಿನಲ್ಲಿ ಹಿಂಸಾಚಾರ ನಡೆಯಲಿದೆ ಎಂದು ಖಾದರ್ ವಿವಾದಾತ್ಮಕ ಹೇಳಿಕೆ ನೀಡಿದ್ದರಿಂದಲೇ ಅಲ್ಲಿನ ಜನರು ಹಿಂಸೆಗೆ ಇಳಿಯಲು ಪ್ರೇರೇಪಣೆಗೊಂಡರು. ಬೇರೆ ಜಿಲ್ಲೆಗಳಲ್ಲಿ ಯಾವುದೇ ಗಲಭೆ ನಡೆದಿಲ್ಲ. ಮಂಗಳೂರಿನಲ್ಲಿ ಇಬ್ಬರು ಅಮಾಯಕರ ಸಾವಿಗೆ ಖಾದರ್ ನೇರ ಹೊಣೆ. ಮಂಗಳೂರಿನಲ್ಲಿನ ವಾತಾವರಣ ಸಂಪೂರ್ಣ ಪ್ರಕ್ಷ್ಯುಬ್ಧವಾಗಿರುವ ವೇಳೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅಲ್ಲಿಗೆ ತೆರಳಿದರೆ ವಾತಾವರಣ ಇನ್ನಷ್ಟು ಹಾಳಾಗುತ್ತದೆ. ಈ ದೃಷ್ಟಿಯಿಂದ ಅವರು ಮಂಗಳೂರಿಗೆ ತೆರಳಲು ಪೊಲೀಸರು ಅವಕಾಶ ನೀಡಿಲ್ಲ. ವಿಪಕ್ಷ ಸ್ಥಾನದಲ್ಲಿರುವ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿಯೂ ಕೆಲಸ ಮಾಡಿದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡುವುದು ಎಲ್ಲರ ಜವಾಬ್ದಾರಿ. ಇದನ್ನು ಅವರು ಅರಿತುಕೊಳ್ಳಲಿ ಎಂದು ಜಗದೀಶ್ ಶೆಟ್ಟರ್ ಸಲಹೆ ಮಾಡಿದರು.

ಪೌರತ್ವ ಕಾನೂನು ದೇಶದಲ್ಲಿನ ಜನರನ್ನು ಹೊರಗೆ ಹಾಕುವುದಲ್ಲ. ಹೊರಗಿನಿಂದ ಬಂದವರಿಗೆ ಪೌರತ್ವ ಕೊಡುವ ಉದ್ದೇಶಕ್ಕೆ ಈ ಕಾನೂನು ತರಲಾಗಿದೆ. ಆದರೆ ಕಾಂಗ್ರೆಸ್ ಮುಖಂಡರು ಈ ಕಾಯಿದೆ ಬಗ್ಗೆ ಅಪಪ್ರಚಾರ ಮಾಡಿ ಜನರನ್ನು ಆತಂಕಕ್ಕೆ ಒಳಗಾಗುವಂತೆ ಮಾಡುತ್ತಿದ್ದಾರೆ ಎಂದು ಶೆಟ್ಟರ್ ಟೀಕಿಸಿದರು.

‘ಮಹಾದಾಯಿ ವಿವಾದ ಬಗೆಹರಿಸಲು, ಗೋವಾ ಮತ್ತು ಮಹಾರಾಷ್ಟ್ರ ಹಾಗೂ ಕರ್ನಾಟಕ ಸಿಎಂಗಳ ಜತೆ ಸಂಧಾನ ಸಭೆ ನಡೆಸಲು ಕೇಂದ್ರ ಸಚಿವ ಪ್ರಕಾಶ್ ಜಾವಡೆಕರ್ ಆಸಕ್ತಿ ತೋರಿಸಿದ್ದಾರೆ. ಹೀಗಾಗಿ ಶೀಘ್ರವೇ ಸಿಹಿ ಸುದ್ದಿ ನೀಡುವುದಾಗಿ ಹೇಳಿದ್ದಾರೆ’
-ಜಗದೀಶ್ ಶೆಟ್ಟರ್, ಕೈಗಾರಿಕಾ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News