ಬೆಂಗಳೂರು: ಜ.19ರಂದು ರಾಷ್ಟ್ರೀಯ ವಿಚಾರ ಸಂಕಿರಣ

Update: 2019-12-21 18:25 GMT

ಬೆಂಗಳೂರು, ಡಿ.21: ಭಾರತದ ಬಜೆಟ್ ಹಾಲಿ ಅವಧಿಯ ಆವರ್ತನೆ ಬದಲಿಸುವ ವಿಚಾರವಾಗಿ 2020ರ ಜ.19ರಂದು ಅಂಬೇಡ್ಕರ್ ವೀದಿ ನಿವೃತ್ತ ಎಂಜಿನಿಯರಿಂಗ್ ಸಂಘದಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣ ಆಯೋಜಿಸಲಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ವಿಜಯಕುಮಾರ್ ಪಾಟೀಲ್ ತಿಳಿಸಿದ್ದಾರೆ. ಶನಿವಾರ ಪ್ರೆಸ್‌ಕ್ಲಬ್‌ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮ ಬೆಳಗ್ಗೆ 11ಕ್ಕೆ ಆರಂಭವಾಗಲಿದ್ದು, ಅತಿಥಿಗಳಾಗಿ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾ. ಡಾ. ಶಿವರಾಜ್ ಪಾಟೀಲ್ ಸೇರಿದಂತೆ ಬುದ್ಧಿಜೀವಿಗಳು, ಚಿಂತಕರು ಪಾಲ್ಗೊಳ್ಳಲಿದ್ದಾರೆ ಎಂದರು.

ದೇಶದ ವಾರ್ಷಿಕ ಬಜೆಟ್ ಅವಧಿ ಹಾಲಿ ಏಪ್ರಿಲ್ 1 ರಿಂದ ಮಾರ್ಚ್ 31 ರವರೆಗೆ ಇದೆ. ದೇಶದ ಅಭಿವೃದ್ಧಿ ದೃಷ್ಟಿಯಿಂದ ಅದನ್ನು ಜನವರಿ 1 ರಿಂದ ಡಿಸೆಂಬರ್ 31ರವರೆಗೆ ಬದಲಾಯಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.

ಜನವರಿಯಲ್ಲಿ ಬಜೆಟ್ ಮಂಡಿಸಿದರೆ, ಈ ವೇಳೆ ಬೇಸಿಗೆ ಆರಂಭವಾಗುವುದರಿಂದ ಶಾಲಾ ಕಾಲೇಜು ಸೇರಿದಂತೆ ಕಟ್ಟಡ ನಿರ್ಮಾಣ, ರಸ್ತೆ, ರೈಲು ಮಾರ್ಗ ಯೋಜನೆ, ನೀರಾವರಿ ಯೋಜನೆ ಸೇರಿದಂತೆ ಹವಾಮಾನ ಆಧಾರಿತ ಕಾಮಗಾರಿ ಕೈಗೆತ್ತಿಕೊಳ್ಳಲು ಅನುಕೂಲವಾಗುತ್ತದೆ. ಸೂಕ್ತ ಸಮಯಕ್ಕೆ ಕಾಮಗಾರಿಗಳಿಗೆ ಅನುದಾನ ದೊರೆಯುತ್ತದೆ. ಪ್ರಸ್ತುತದಲ್ಲಿ ಏಪ್ರಿಲ್‌ನಲ್ಲಿ ಬಜೆಟ್ ಮಂಡನೆಯಾಗುತ್ತಿದ್ದು, ನಂತರ ಅನುದಾನ ಪ್ರಕ್ರಿಯೆ ಮುಗಿದು ಕಾಮಗಾರಿಗಳಿಗೆ ಹಣ ಸಿಗುವ ಹೊತ್ತಿಗೆ ಮೇ ಇಲ್ಲವೇ ಜೂನ್‌ನಲ್ಲಿ ಮಳೆಗಾಲ ಆರಂಭವಾಗುತ್ತದೆ. ಈ ವೇಳೆ ಜಮೀನಿನಲ್ಲಿ ಬೆಳೆ ಬೆಳಯಲಾಗುವುದರಿಂದ ಹವಾಮಾನಾಧಾರಿತ ಕಾಮಗಾರಿಗಳು ವಿಳಂಬವಾಗುತ್ತವೆ. ಒಂದು ವೇಳೆ ತರಾತುರಿಯಲ್ಲಿ ಕಾಮಗಾರಿ ನಡೆದರೂ ಅಲ್ಲಿ ಗುಣಮಟ್ಟದ ಸಮಸ್ಯೆ ಎದುರಾಗುತ್ತದೆ. ಆದ್ದರಿಂದ ಲೋಪದಿಂದ ಕೂಡಿದ ಬಜೆಟ್ ಅವಧಿ ವ್ಯವಸ್ಥೆ ಬದಲಿಸಬೇಕೆಂದು ಅವರು ವಿವರಿಸಿದರು.

ಈ ಕುರಿತು ವಿಚಾರ ಸಂಕಿರಣದಲ್ಲಿ ಚರ್ಚಿಸಿ ನಿರ್ಧರಿಸಲಾಗುತ್ತದೆ. ಬಳಿಕ ದೆಹಲಿಗೆ ತೆರಳಿ ಕೇಂದ್ರ ಹಣಕಾಸು ಸಚಿವರಿಗೆ, ಕೇಂದ್ರ ಹಣಕಾಸು ಆಯೋಗಕ್ಕೆ ಮನವಿ ಸಲ್ಲಿಸಲಿದ್ದೇವೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News