ಬೆಂಕಿಯ ಕೆನ್ನಾಲಿಗೆಗೆ ಬಲಿಯಾಗುತ್ತಿರುವುದು ಭಾರತದಲ್ಲೇ ಅಧಿಕ

Update: 2019-12-22 04:43 GMT

ಮುಂಬೈ, ಡಿ.22: ವಿಶ್ವಾದ್ಯಂತ 2017ರಲ್ಲಿ ನಡೆದ ಅಗ್ನಿ ಆಕಸ್ಮಿಕಗಳಲ್ಲಿ ಜೀವ ಕಳೆದುಕೊಂಡ 1.2 ಲಕ್ಷ ಮಂದಿಯ ಪೈಕಿ 27,027 ಮಂದಿ ಭಾರತೀಯರು! ಅಂದರೆ ಪ್ರತಿ ಐವರಲ್ಲಿ ಒಬ್ಬರು ಭಾರತೀಯರು. ಇಡೀ ವಿಶ್ವದಲ್ಲಿ ಒಂದು ವರ್ಷದಲ್ಲಿ ಸುಮಾರು 90 ಲಕ್ಷ ಅಗ್ನಿ ಅವಘಡಗಳು ಸಂಭವಿಸಿವೆ.

ಈ ಪೈಕಿ 16 ಲಕ್ಷ ಬೆಂಕಿ ಆಕಸ್ಮಿಕಗಳು ಭಾರತದಲ್ಲಿ ಸಂಭವಿಸಿದ್ದು, ಒಟ್ಟು 27,027 ಮಂದಿ ಜೀವ ಕಳೆದುಕೊಂಡಿದ್ದಾರೆ ಎಂದು 195 ದೇಶಗಳಲ್ಲಿ ಜಾಗತಿಕ ರೋಗಗಳ ಹೊರೆ ಬಗ್ಗೆ ನಡೆಸಿದ ವಿಶ್ಲೇಷಣೆಯಿಂದ ತಿಳಿದುಬಂದಿದೆ. ಬಿಎಂಜೆ ಇಂಜುರಿ ಪ್ರಿವೆನ್ಷನ್ ಜರ್ನಲ್ ಇತ್ತೀಚೆಗೆ ಪ್ರಕಟಿಸಿದ ಲೇಖನದಲ್ಲಿ ಈ ಉಲ್ಲೇಖವಿದೆ.

ಭಾರತದಲ್ಲಿ ಸಂಭವಿಸಿರುವ ಬೆಂಕಿ ಸಂಬಂಧಿತ ಸಾವು ಚೀನಾದಲ್ಲಿ ಆಗಿರುವ ಒಟ್ಟು ಸಾವಿನ 2.5ರಷ್ಟು ಅಧಿಕ. ಚೀನಾದಲ್ಲಿ ಬೆಂಕಿ ಸಂಬಂಧಿತ ಅವಘಡಗಳಲ್ಲಿ 10,836 ಮಂದಿ ಮೃತಪಟ್ಟಿದ್ದಾರೆ. ಪಾಕಿಸ್ತಾನ ಹಾಗೂ ಭಾರತ ಸೇರಿದಂತೆ ಇಡೀ ವಿಶ್ವದ ಏಳು ದೇಶಗಳಲ್ಲಿ ಬೆಂಕಿಯಿಂದಾದ ಸಾವಿನ ಪ್ರಮಾಣ ಜಾಗತಿಕ ಮಟ್ಟದಲ್ಲಿ ಆಗಿರುವ ಸಾವಿನ ಪ್ರಮಾಣದ ಅರ್ಧದಷ್ಟಾಗಿದೆ. ಐದು ವರ್ಷಕ್ಕಿಂತ ಕೆಳಗಿನ ಮಕ್ಕಳು ಹಾಗೂ 60 ವಯಸ್ಸು ಮೇಲ್ಪಟ್ಟ ವೃದ್ಧರು ಅತಿಹೆಚ್ಚು ಸಂಖ್ಯೆಯಲ್ಲಿ ಬಲಿಯಾಗಿರುವುದನ್ನೂ ಅಧ್ಯಯನ ವಿವರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News