ಬೈರೂತಿನ ದಾರಿ ಹಿಡಿದು...

Update: 2019-12-22 09:28 GMT

ಡಾ. ಅಂಗ್ ಸ್ವೀ ಚಾಯ್ ಅವರು ಮಾಡಿರುವುದು ಶ್ರೇಷ್ಠ ಸಾಧನೆ. ಫೆಲೆಸ್ತೀನಿಗಳ, ಲೆಬನಾನಿಗಳ ನಿಜ ಬದುಕನ್ನು ಹೊರಜಗತ್ತಿಗೆ ತಿಳಿಸಿದ ಅವರು ಅಭಿನಂದಾರ್ಹರು. ನಿತ್ಯವೂ ಭಯದಲ್ಲೇ ಬದುಕಬೇಕಾದ ಸಂದಿಗ್ಧ ಶಿಬಿರಗಳಲ್ಲಿ ನಿರಾಶ್ರಿತರ ಬದುಕಿಗೆ ಭರವಸೆಯಾದ ಸ್ವೀ ಎಲ್ಲರಿಗೂ ಮಾದರಿ. ಹಾಯಾಗಿ ಬದುಕಬಹುದಾದ ಸಂದರ್ಭವಿದ್ದೂ ದಮನಿತರಿಗಾಗಿ ಬದುಕಿದ ಕೆಲವು ವ್ಯಕ್ತಿಗಳಲ್ಲಿ ಸ್ವೀ ಕೂಡ ಒಬ್ಬರು. ನಾವು ತಿಳಿಯದ ಇಸ್ರೇಲಿನ ನೈಜ ಮುಖವನ್ನು ಜಗತ್ತಿನ ಮುಂದಿಟ್ಟಿದ್ದಾರೆ. ಫಕೀರ್ ಮುಹಮ್ಮದ್ ಕಟ್ಪಾಡಿಯವರು ಒಂದು ಅರ್ಥಪೂರ್ಣ ಕೃತಿಯನ್ನು ಕನ್ನಡಕ್ಕೆ ತಂದಿದ್ದಾರೆ.

ಬರಹದ ತಾಕತ್ತೇ ಅದು. ಎಲ್ಲೋ ಕೂತು ಬರೆದ ಬರಹಗಳು ಮತ್ತೆಲ್ಲೋ ಇರುವ ಓದುಗನನ್ನು ಎಬ್ಬಿಸಿ ಬಿಡುತ್ತದೆ. ಬರಹಗಾರ ಹಂಚಿಕೊಂಡ ಅನುಭವಗಳನ್ನು ಓದುಗನೂ ಪಡೆಯುತ್ತಲೇ ಹೋಗುತ್ತಾನೆ. ಓದುಗ ಬರಹಗಾರನ ನೋವಿನ, ನಲಿವಿನ ಭಾಗವಾಗುತ್ತಲೇ ಸಾಗುತ್ತಾನೆ. ವಿಷಯಕ್ಕೆ ಬರೋಣ, ಏನಿಲ್ಲವೆಂದರೂ ಫೆಲೆಸ್ತೀನ್ ಇಸ್ರೇಲ್‌ನ ಕದನ, ಇರಾಕ್ ಇರಾನ್‌ನ ಸ್ಫೋಟಗಳು, ಅಮೆರಿಕದ ಮಸಲತ್ತು, ಲೆಬನಾನ್‌ನ ಅವಸ್ಥೆ ಹೀಗೆ ಮಧ್ಯಪ್ರಾಚ್ಯ ದೇಶಗಳ ಬಗ್ಗೆ ನಾವು ಪೂರ್ಣ ಪ್ರಾಜ್ಞರಲ್ಲದಿದ್ದರೂ ಒಂದು ಇಮೇಜನ್ನು ಮನಸಲ್ಲೇ ಹಾಕಿಕೊಂಡಿರುವವರು ನಾವು. ಸದಾ ಸುದ್ದಿಯಲ್ಲಿರುವ ಈ ರಾಷ್ಟ್ರಗಳು ತಮ್ಮಲ್ಲಿ ಉಳಿಸಿಕೊಂಡ ನೋವು, ಸಿದ್ಧಾಂತದ ಹೆಸರಲ್ಲಿ ಮನುಷ್ಯ ಮನುಷ್ಯನನ್ನು ನಡೆಸಿಕೊಂಡ ಬಗೆ, ಮನುಷ್ಯ ಮನಸ್ಸು ಹೀಗೂ ಚಿಂತಿಸುತ್ತದಪ್ಪಾ ಎನ್ನುವ ನಂಬಲಾಗದ ಆದರೆ ನಂಬಲೇಬೇಕಾದ ದೊಡ್ಡ ಕಥನಗಳನ್ನೇ ಈ ದೇಶಗಳು ತಮ್ಮಲ್ಲಿ ಹುದುಗಿಸಿಕೊಂಡಿವೆ. ಈ ರಾಷ್ಟ್ರಗಳಿಗೆಲ್ಲಾ ಹಲವು ಬಾರಿ ಸುತ್ತು ಹಾಕಿಕೊಂಡು ಬಂದು ಫೆಲೆಸ್ತೀನಿಯರ, ಲೆಬನಾನಿಗಳ ಬದುಕನ್ನು ಹತ್ತಿರದಿಂದ ಕಂಡು, ಅವರ ಬದುಕಿನ ಭಾಗವಾಗಿದ್ದ ವ್ಯಕ್ತಿಯೊಬ್ಬರು ತನ್ನ ಹತ್ತಿರದ ಕಾಣ್ಕೆಯನ್ನು ಜಗತ್ತಿನ ಮುಂದೆ ಹೇಳಿದರೆ ಹೇಗಿರಬೇಡ? ತನ್ನ ಬದುಕಿನ ಸಂತೃಪ್ತಿಯನ್ನು ಇತರರ ಕ್ಷೇಮದಲ್ಲಿ ಕಂಡ ಮೂಲತಃ ಸಿಂಗಾಪುರ್ ದೇಶದ ಆರ್ಥೋಪೆಡಿಕ್ ಸರ್ಜನ್ ಡಾ. ಅಂಗ್ ಸ್ವೀ ಚಾಯ್ ವೈದ್ಯಕೀಯ ಸೇವೆಗಾಗಿ ಬೈರೂತ್‌ನಲ್ಲಿ ಸಾವಿರಾರು ರೋಗಿಗಳ ಶುಶ್ರೂಷೆ ಮಾಡಿ ಬಂದವರು. ‘ಬೈರೂತ್ ಟು ಜೆರುಸೆಲೇಂ’ ಎನ್ನುವ ಕೃತಿಯಲ್ಲಿ ಅವರು ಜಗತ್ತಿನ ಮುಂದೆ ಸತ್ಯ ಮಾತಾಡಿದ್ದಾರೆ. ಸುದೀರ್ಘ ಏಳೆಂಟು ವರ್ಷಗಳ ಅನುಭವದ ವಿವರಣೆ ಇದು. ಹಿರಿಯ ಲೇಖಕ ಫಕೀರ್ ಮುಹಮ್ಮದ್ ಕಟ್ಪಾಡಿಯವರು ಕೃತಿಯನ್ನು ಕನ್ನಡಕ್ಕಿಳಿಸಿದ್ದಾರೆ. ನಿರಾಶ್ರಿತ ಶಿಬಿರಗಳಲ್ಲಿ ಬದುಕು ಕಳೆದುಕೊಂಡವರೊಂದಿಗೆ ತಾನೂ ಬದುಕಿ, ಅಲ್ಲಿಯ ಜನಜೀವನದ ಆಗುಹೋಗುಗಳಿಗೆ ಸಾಕ್ಷಿಯಾಗಿ ಲೇಖಕಿ ಇಲ್ಲಿ ಮಾತಾಡಿದ್ದಾರೆ. ಯಾರದೋ ಸಾಮ್ರಾಜ್ಯದ ಕನಸಿಗಾಗಿ, ಸ್ವಾರ್ಥಕ್ಕಾಗಿ ಬಾಳು ಕಳೆದುಕೊಂಡ ಫೆಲೆಸ್ತೀನ್‌ನ, ಲೆಬನಾನ್‌ನ ಜನತೆಯ ಘೋರ ಬದುಕಿನ ಚಿತ್ರಣ ಕೃತಿಯ ಗೆರೆ ಗೆರೆಯಲ್ಲೂ ಎದ್ದು ಕಾಣುತ್ತದೆ. ಓದುತ್ತಾ ಹೋದಂತೆ ಓದುಗನ ಕಣ್ಣು ಒದ್ದೆಯಾಗತೊಡಗುತ್ತದೆ. ಲಂಡನ್‌ನ ಸಂಡೇ ಟೈಮ್ಸ್‌ನ ಸರ್ ಅಂಥೋನಿ ಪಾರ್‌ಸನ್ಸ್ ಸಬ್ರಾ ಮತ್ತು ಶಾತಿಲಾ ಶಿಬಿರಗಳಲ್ಲಿ ನಡೆದ ಸಾಮೂಹಿಕ ಹತ್ಯಾಕಾಂಡದ ವಿವರಗಳನ್ನು ಓದಿಯೂ ಯಾರಾದರೂ ಭಾವಶೂನ್ಯರಾದರೆ ಅಂತಹವರಿಗೆ ನಾನು ಧಿಕ್ಕಾರ ಹಾಕುತ್ತೇನೆ ಎಂದ ಮಾತು ಅತಿಶಯೋಕ್ತಿಯಲ್ಲ. ಓದಿದ ಬಳಿಕ ಒಬ್ಬ ಮನುಷ್ಯ ತನ್ನದೇ ಜಾತಿಯವನಾದ ಮನುಷ್ಯನನ್ನು ಈ ಪಾಟಿ ನಡೆಸಿಕೊಳ್ಳುತ್ತಾನಾ ಅನ್ನುವ ಪ್ರಶ್ನೆ ನಿಮ್ಮಲ್ಲಿ ಖಂಡಿತಾ ಹುಟ್ಟಿ ಬಿಡುತ್ತದೆ. ಹಿಟ್ಲರ್ ಮಾಡಿದ ಜನಾಂಗೀಯ ಹತ್ಯೆಯ ಬಳಿಕ ಅಬ್ಬೇಪಾರಿಗಳಾಗಿದ್ದ ಯಹೂದಿಗಳಿಗೆ 1947ರಲ್ಲಿ ಫೆಲೆಸ್ತೀನನ್ನು ಇಬ್ಭಾಗ ಮಾಡಿ ಇಸ್ರೇಲ್ ಮಾಡಿ ಕೊಟ್ಟಾಗ ಇದು ನಮ್ಮ ಶಾಂತಿ ಬದುಕಿನ ಕೊನೆ ನಿಮಿಷಗಳೆಂದು ಫೆಲೆಸ್ತೀನಿಯರಿಗೆ ಹೇಗೆ ಗೊತ್ತಾಗಬೇಕು? ಅಮೆರಿಕನ್ ಕೃಪಾಪೋಷಿತ ನಿರ್ವೀಯ ಮಾಧ್ಯಮಗಳು ತಮ್ಮನ್ನು ಮಾರಿಕೊಂಡು ಸುಳ್ಳನ್ನು ಸತ್ಯವೆಂದು ನಂಬಿಸುವಾಗ ಜಗತ್ತಿಗೆ ನೈಜ ಪರಿಸ್ಥಿತಿ ಹೇಗೆ ತಾನೆ ಅರ್ಥವಾಗುವುದು? ಫೆಲೆಸ್ತೀನ್‌ನಲ್ಲಿ, ಲೆಬನಾನ್‌ನಲ್ಲಿ ಯಹೂದಿಗಳು ಅಮೆರಿಕನ್ನರ ಸಹಾಯದಿಂದ ಮಾಡಿದ ಹತ್ಯಾಕಾಂಡದ ವಸ್ತುನಿಷ್ಠ ಮಾಹಿತಿಗಾಗಿ ಇತರ ಮಾಧ್ಯಮಗಳ ಮಾತು ಕೇಳಿ ತೀರ್ಮಾನಕ್ಕೆ ಬಂದವರು ಈ ಕೃತಿಯ ಬೆನ್ನು ಬೀಳಲೇ ಬೇಕು. ನೇರವಾಗಿ ಕಂಡು, ಆ ಶಿಬಿರಗಳಲ್ಲಿ ವೈದ್ಯಕೀಯ ಸೇವೆ ಮಾಡಿದ ವೈದ್ಯೆ ಹಂಚಿಕೊಂಡ ವಿಚಾರಗಳಿವು. ಫೆಲೆಸ್ತಿನ್ ಲಿಬರೇಷನ್ ಆರ್ಗನೈಝೇಷನ್ (ಪಿಎಲ್‌ಒ)ನ್ನು ಉಗ್ರವಾದಿ ಸಂಘಟನೆಯೆಂಬ ಭಾವನೆಯೊಂದಿಗೆ ತೆರಳಿದ ಲೇಖಕಿಯ ಮುಂದೆ ನೆಲದ ಹಕ್ಕಿಗಾಗಿ ಹೋರಾಡುವ ಯುವಕರಿದ್ದರು. ಮಾಧ್ಯಮಗಳು ಹೇಳಿದ ವಿಚಾರಗಳು ಮತ್ತು ನೈಜ ವಿಚಾರಗಳ ನಡುವೆ ಅಜಗಜಗಳ ಅಂತರ. ತಮ್ಮ ನೆಲಕ್ಕಾಗಿ ಒಂದಾಗಿ ಬೀದಿಗಿಳಿದ ಫೆಲೆಸ್ತೀನಿಗಳನ್ನು ಅದೇಗೆ ಉಗ್ರವಾದಿಗಳೆಂದು ಬಿಡುವುದು? ತಮ್ಮ ನೆಲಕ್ಕಾಗಿ ಹೋರಾಡುವ ಫೆಲಸ್ತೀನ್ ಯುವಕರು ಜಗತ್ತಿನ ಮುಂದೆ ಅದ್ಹೇಗೆ ಉಗ್ರವಾದಿಗಳಾಗಿ ಬಿಟ್ಟರು? ಎಂತಾದರೆ, ನಮ್ಮ ದೇಶಕ್ಕಾಗಿ ಹೋರಾಡಿದವರೆಲ್ಲರೂ ಉಗ್ರವಾದಿಗಳಾಗಬೇಕಲ್ಲವೇ? ಇಸ್ರೇಲ್ ಯಹೂದಿಗಳು ಫೆಲೆಸ್ತೀನಿಯರೊಂದಿಗೆ ಬಂದೂಕು, ಬಾಂಬ್‌ನಲ್ಲೇ ಮಾತಾಡಿದ ಜನರು. ಹಕ್ಕಿಗಾಗಿ ಒಂದಾದವರಿಗೆ ಉಗ್ರವಾದಿ ಅನ್ನುವುದಾದರೆ ಬಂದೂಕು, ಬಾಂಬುಗಳಿಂದ ಫೆಲೆಸ್ತೀನಿನ ಜನಜೀವನವನ್ನು ಅಕ್ಷರಶಃ ಬರಡು ಮಾಡಿದ ಇಸ್ರೇಲ್ ಯಹೂದಿಗಳಿಗೆ ಏನೆನ್ನಬೇಕು? ಎನ್ನುವ ಪ್ರಶ್ನೆ ಕೃತಿಯುದ್ದಕ್ಕೂ ಧ್ವನಿಸುತ್ತದೆ. ವೈದ್ಯಕೀಯ ಸೇವೆಗಾಗಿ ಶಿಬಿರಗಳನ್ನು ದಾಟಿದ ಲೇಖಕಿಗೆ ಫೆಲೆಸ್ತೀನ್‌ಗಳ ಛಲದ ಬದುಕು, ಕುಟುಂಬಿಕರನ್ನು ಕಣ್ಣೆದುರೇ ಕಳೆದುಕೊಂಡು, ಯಾವುದೇ ಸಮಯದಲ್ಲಿ ಬಂದು ಬೀಳಲು ಸಾಧ್ಯತೆಯಿರುವ ಬಾಂಬುಗಳನ್ನೂ ಲೆಕ್ಕಿಸದೆ ಮತ್ತೆ ಬದುಕು ಕಟ್ಟುವ ಉತ್ಸಾಹವನ್ನು ನೋಡಿ ಕಣ್ಣು ತುಂಬಿ ಬರುತ್ತದೆ. ಶಿಬಿರಗಳಲ್ಲಿ ಮಗುವನ್ನು ಕಳೆದುಕೊಂಡ ಅಮ್ಮ, ಅಮ್ಮನನ್ನು ಕಳೆದುಕೊಂಡ ಮಕ್ಕಳಿಗೆಲ್ಲಾ ಸಾಂತ್ವನ ಹೇಳುತ್ತಾ, ದಿನವೂ ಕಳಚಿಕೊಳ್ಳುತ್ತಲೇ ಹೋಗುವ ಕುಟುಂಬದ ಕೊಂಡಿಗಳ ಸ್ಥಾನವನ್ನು ತುಂಬುತ್ತಾ ಹೋದ ಲೇಖಕಿಯ ತಾಯಿ ಮನಸ್ಸನ್ನು ಮೆಚ್ಚಲೇಬೇಕು. ಆಹಾರ, ವಸತಿ, ಬಟ್ಟೆಗಳಿಗೂ ತತ್ವಾರವಿರುವ ಈ ಅಮಾಯಕ, ಮುಗ್ಧ ಶಿಬಿರಾರ್ಥಿಗಳನ್ನು ಅಟ್ಟಾಡಿಸಿ ಗುಂಡು ಹೊಡೆದು ಸಾಯಿಸುವ ಇಸ್ರೇಲಿ ಯಹೂದಿಗಳ ಬಗ್ಗೆ ಮಾಧ್ಯಮಗಳು ಮೆಚ್ಚಿ ಬರೆಯುವಾಗ ಲೇಖಕಿಗೆ ವಸ್ತುಸ್ಥಿತಿಯ ರುದ್ರ ದರ್ಶನವಾಗುತ್ತದೆ. ಆಸ್ಪತ್ರೆಗಳನ್ನು ಗುರಿಯಾಗಿಸಿ ನಡೆಯುವ ದಾಳಿಗಳು ಯಹೂದಿಗಳ ಕಲ್ಲು ಹೃದಯದ ಕಠಿಣತೆಯನ್ನು ಜಗತ್ತಿಗೆ ಹೇಳುತ್ತದೆ. ಫೆಲೆಸ್ತೀನ್ ಒಂದು ರಾಷ್ಟ್ರವೆಂದು ಒಪ್ಪಿಕೊಳ್ಳದ, ಒಂದು ಕಾಲದಲ್ಲಿ ಅಬ್ಬೇಪಾರಿಗಳಾಗಿ ಬದುಕುತ್ತಿದ್ದ ಇಸ್ರೇಲಿಗರು ಫೆಲೆಸ್ತೀನ್‌ನ ಶಾಂತಿ ಬದುಕನ್ನು ತಿಂದು ಹಾಕಿದ್ದಾರೆ. ಮಕ್ಕಳು ಮಹಿಳೆಯರೆನ್ನದೆ ಎಲ್ಲರ ಮೇಲೂ ನಡೆಯುತ್ತಿರುವ ಹತ್ಯಾಕಾಂಡ ಇಸ್ರೇಲ್‌ನ ನಿಜಬಣ್ಣವನ್ನು ಜಗತ್ತಿನ ಮುಂದೆ ಬಿಚ್ಚಿಟ್ಟಿದೆ. ನೆಲದ ಹಕ್ಕಿಗಾಗಿ ಹೋರಾಟದ ದಾರಿ ಹಿಡಿದ ಪಿಎಲ್‌ಒ ಅನ್ನು ನಾವು ಉಗ್ರವಾದಿ ಸಂಘಟನೆಯೆಂದು ಕೆಲವೊಂದು ಮಾರಿಕೊಂಡ ಮಾಧ್ಯಮಗಳ ವಾರ್ತೆಯ ಮುಖಾಂತರ ನಂಬಿ ಬಿಟ್ಟಿದ್ದೇವೆ. ಅಸಲಿಯತ್ತು ಗೊತ್ತಿರುವುದು ಕೆಲವರಿಗಷ್ಟೇ. ಇಸ್ರೇಲ್‌ಗೆ ಸಂಪೂರ್ಣವಾಗಿ ಶಸ್ತ್ರಾಸ್ತ್ರಗಳನ್ನು ಪೂರೈಸುವ ನಪುಂಸಕ ಅಮೆರಿಕ ಫೆಲೆಸ್ತೀನ್, ಲೆಬನಾನ್ ನಾಗರಿಕರ ಬದುಕಿನಲ್ಲಿ ಚೆಲ್ಲಾಟವಾಡಿದೆ. ಮುನ್ನುಡಿ ಮಾತಿನಲ್ಲಿ ಜಿ. ಕೆ ಗೋವಿಂದರಾವ್ ಅವರು ಭಯೋತ್ಪಾದಕ ಹಣೆಪಟ್ಟಿ ಯಾರಿಗಾದರೂ ಪೂರ್ಣಪ್ರಮಾಣದಲ್ಲಿ ಅನ್ವಯಿಸಬಹುದಾದರೆ ಅದು ಅಮೆರಿಕ ಮತ್ತು ಇಸ್ರೇಲ್ ರಾಷ್ಟ್ರಗಳಿಗೆ ಅಂದಿರುವುದು ಮಾತ್ರ ಸತ್ಯ. ಸೇವೆಯಲ್ಲಿ ಲೇಖಕಿಗೆ ಭುಜಕ್ಕೆ ಭುಜ ಕೊಟ್ಟು ನಿಂತ ಇತರ ವೈದ್ಯರ ಬಗ್ಗೆ, ಸಂಘಟನೆಗಳ ಬಗ್ಗೆ ಕೃತಿಯಲ್ಲಿ ಹೇಳಲಾಗಿದೆ. ಯಾವುದೇ ಕ್ಷಣದಲ್ಲಿ ಯಹೂದಿ ಗುಂಡಿಗೆ ಎದೆ ಕೊಡಬಹುದಾದ ಸಂದರ್ಭವಿದ್ದರೂ ಅವೆಲ್ಲವನ್ನೂ ಬದಿಗಿಟ್ಟು ಮನುಷ್ಯರಿಗಾಗಿ ಮಿಡಿಯುವ ಹೃದಯವಂತರನ್ನು ಸ್ವೀ ಮೆಚ್ಚಿ ಬರೆದಿದ್ದಾರೆ. ಲೆಬನಾನ್‌ಗಳ, ಫೆಲೆಸ್ತೀನ್‌ಗಳ ಅತಂತ್ರ ಬದುಕಿಗೆ ಕಾರಣವಾಗಿ ಜಗತ್ತಿನ ಮುಂದೆ ಸಾಚಾತನವನ್ನು ಪ್ರದರ್ಶಿಸುತ್ತಿರುವ ಅಮೆರಿಕದ ನಿಜಸ್ಥಿತಿಯ ಬೆತ್ತಲು ಮಾಡಿದ ಕೃತಿಯಿದು. ಆಸ್ಪತ್ರೆಯೊಂದರಲ್ಲಿ ಸಾಮೂಹಿಕ ಹತ್ಯಾಕಾಂಡ ನಡೆದ ಬಳಿಕ ಮಾಳಿಗೆಯಲ್ಲಿ ಬಿದ್ದು ಸಿಕ್ಕಿದ ಗನ್‌ಗಳಲ್ಲಿ ಇದ್ದ ಮೇಡ್ ಇನ್ ಯು.ಎಸ್.ಎ, ವಾಕ್ಯ ಸ್ವೀಗೆ ಎಲ್ಲವನ್ನೂ ಹೇಳಿತ್ತು. ರಾಷ್ಟ್ರ ರಾಷ್ಟ್ರಗಳ ನಡುವೆ ವೈಷಮ್ಯದ ಬೀಜ ಬಿತ್ತಿ ಲಾಭ ಪಡೆಯುತ್ತಿರುವ ಈ ರಾಷ್ಟ್ರಗಳ ಅಸಲಿಯತ್ತು ಇಷ್ಟೇ. ಮಾನವಕುಲ ಅವಕ್ಕೆಲ್ಲಾ ಸಂಗತಿಯೇ ಅಲ್ಲ. ಉದ್ದೇಶ ಸಾಧನೆಗಾಗಿ ಏನೂ ಬೇಕಾದರೂ ಮಾಡಬಲ್ಲ ರಾಷ್ಟ್ರಗಳಿವು. ಅಲ್ಲಲ್ಲಿ ರಾಶಿ ಬಿದ್ದ ಹೆಂಗಸರ ಶವಗಳು, ಆಸ್ಪತ್ರೆಗಳಲ್ಲಿ ಪರದಾಡುವ ರೋಗಿಗಳು, ರಸ್ತೆಯ ಇಕ್ಕೆಲಗಳಲ್ಲಿ ಕಾಲು, ಕಣ್ಣು ಕಳೆದುಕೊಂಡು ರೋಧಿಸುತ್ತಿರುವ ಮಕ್ಕಳು, ವ್ಯವಸ್ಥೆಗಳಿಲ್ಲದೆ ಮಾಡಿ ಮುಗಿಸುವ ಶಸ್ತ್ರಚಿಕಿತ್ಸೆ ಹೀಗೆ ಸುತ್ತಲೂ ಎಲ್ಲವನ್ನೂ ಕಳೆದುಕೊಂಡ ಮನುಷ್ಯರ ಪರಿಸ್ಥಿತಿ ಸ್ವೀಯವರನ್ನು ಕಂಗಾಲಾಗಿಸಿತ್ತು. ಆ್ಯಂಬುಲೆನ್ಸ್‌ನಲ್ಲಿ ಸಾಗಿಸುವ ರೋಗಿಗಳನ್ನು ಮಾರ್ಗಮಧ್ಯದಲ್ಲಿ ನಿಲ್ಲಿಸಿ ಗುಂಡಿಕ್ಕಿ ಕೊಲ್ಲುವ, ಆಸ್ಪತ್ರೆ ಹೋಗುತ್ತಿದ್ದ ನಲ್ವತ್ತರಷ್ಟು ಗರ್ಭಿಣಿಯರಿಗೆ ವಾಹನದಲ್ಲೇ ಹೆರಿಗೆಯಾಗಿ ಹಲವರು ಅಸುನೀಗಿದ ಸಂಗತಿ ಬೆಚ್ಚಿ ಬೀಳಿಸುವಂಥದ್ದು. ಹೀಗೆ ಲೆಬನಾನಿಗಳ, ಫೆಲೆಸ್ತೀನಿಗಳ ಬದುಕನ್ನು ಅವ್ಯಾಹತವಾಗಿ ಮುಗಿಸುತ್ತಿರುವ ದರಿದ್ರ ರಾಷ್ಟ್ರಗಳು ಶಾಂತಿ ಜಗತ್ತಿಗೆ ಮೊದಲ ತೊಡಕು. ಫೆಲೆಸ್ತೀನ್‌ನಲ್ಲಿ, ಲೆಬನಾನ್‌ನಲ್ಲಿ ನಿರಂತರ ಕೇಳಿ ಬರುವ ಗುಂಡಿನ ಮೊರೆತ ನಡುವೆ ಕಂಗಾಲಾಗಿ ಬದುಕುವ ನಾಗರಿಕರ ಅವಸ್ಥೆಯನ್ನು ಸ್ವೀ ನೋವಿನಿಂದ ಹೇಳಿದ್ದಾರೆ. ಇಸ್ರೇಲಿ ಸೈನಿಕರು ಉರುಳಿಸಿ ಹೋಗುವ ಆಸ್ಪತ್ರೆ, ಮನೆ, ಕಟ್ಟಡಗಳನ್ನು ಮತ್ತೆ ಕಟ್ಟುವ ನಿರಾಶ್ರಿತರ ಆತ್ಮವಿಶ್ವಾಸಕ್ಕೆ ಸ್ವೀ ಶರಣಾಗಿದ್ದಾರೆ. ಇದನ್ನು ಒಂದು ಕೃತಿಯೆನ್ನುದಕ್ಕಿಂದ ಒಂದು ದಾಖಲೆಯೆನ್ನಬಹುದು. ಇದ್ದುದ್ದನ್ನು ಇದ್ದ ಹಾಗೆ ಹೇಳಿದ ಅಪೂರ್ವ ದಾಖಲೆಯಿದು. ಸ್ವೀಗೆ ಶಿಬಿರಗಳಲ್ಲಿ ಕಂಡದ್ದು ನೋವು, ನೋವು ಮತ್ತು ನೋವೇ. ಲೆಬನಾನ್‌ನ ಪರಿಸ್ಥಿತಿ ವಿವರಿಸಿ ಸಹಾಯ ಬೇಕೆಂದು ಪತ್ರಿಕಾ ಪ್ರಕಟನೆಗೆ ಸ್ಪಂದಿಸಿದ ಹೃದಯವಂತರ ಬಗ್ಗೆ ಕೃತಿಯಲ್ಲಿ ಪ್ರಸ್ತಾಪವವಿದೆ. ಮುನ್ನುಡಿ ಮಾತಿನಲ್ಲಿ ಗೋವಿಂದರಾವ್ ಅವರು ಇಸ್ರೇಲಿನ ಅನ್ಯಜನಾಂಗ ನಿರ್ಮೂಲನಾ ಸಿದ್ಧಾಂತವನ್ನು ಗಮನಿಸುತ್ತಾ ಹೋದಂತೆ, ಈ ರಾಷ್ಟ್ರ ಯಾವ ಕಾರಣಕ್ಕೆ ನಮ್ಮ ದೇಶದ ಸಂಘಪರಿವಾರಕ್ಕೆ ಪ್ರಿಯವೂ ಆದರ್ಶಪ್ರಾಯವೂ ಆಗುತ್ತದೆ ಎಂಬುದು ಸ್ಪಷ್ಟಗೊಳ್ಳುತ್ತಾ ಹೋಗುತ್ತದೆ ಎಂದಿದ್ದಾರೆ. ತಮ್ಮ ಧರ್ಮವನ್ನು ಅನುಸರಿಸದೆ, ಅನ್ಯ ಧರ್ಮವನ್ನು ಸಹಿಸದೆ ಇರುವ ಮನಸ್ಥಿತಿಗೆ ಇಸ್ರೇಲ್ ಆದರ್ಶವಾಗುವ ರಾಷ್ಟ್ರ. ನಮ್ಮಲ್ಲೇ ನೋಡಿ, ಸಂವಿಧಾನ ಬದಿಗಿಟ್ಟು ಪಕ್ಕಾ ಧರ್ಮ ರಾಜಕಾರಣ ಮಾಡುವ ರಾಜಕಾರಣಿಗಳು ತುಂಬಿ ಹೋಗಿದ್ದಾರೆ. ಅಲ್ಪಸಂಖ್ಯಾತರನ್ನು, ದಲಿತರನ್ನು, ಈ ನೆಲಕ್ಕಾಗಿ ದುಡಿದವರನ್ನು ದೇಶದಿಂದ ಹೊರಗಿಡುವ, ಅನ್ಯರನ್ನಾಗಿ ಕಾಣುವ ಪ್ರಯತ್ನ ಆಗುತ್ತಲೇ ಇದೆ. ನಮ್ಮ ದೇಶದಲ್ಲೂ ಇಂತಹ ಪರಿಸ್ಥಿತಿ ದೂರವಿಲ್ಲ ಅಂತ ಅನಿಸುತ್ತಿದೆ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ, ಡಾ. ಅಂಗ್ ಸ್ವೀ ಚಾಯ್ ಅವರು ಮಾಡಿರುವುದು ಶ್ರೇಷ್ಠ ಸಾಧನೆ. ಫೆಲೆಸ್ತೀನಿಗಳ, ಲೆಬನಾನಿಗಳ ನಿಜ ಬದುಕನ್ನು ಹೊರಜಗತ್ತಿಗೆ ತಿಳಿಸಿದ ಅವರು ಅಭಿನಂದಾರ್ಹರು. ನಿತ್ಯವೂ ಭಯದಲ್ಲೇ ಬದುಕಬೇಕಾದ ಸಂದಿಗ್ಧ ಶಿಬಿರಗಳಲ್ಲಿ ನಿರಾಶ್ರಿತರ ಬದುಕಿಗೆ ಭರವಸೆಯಾದ ಸ್ವೀ ಎಲ್ಲರಿಗೂ ಮಾದರಿ. ಹಾಯಾಗಿ ಬದುಕಬಹುದಾದ ಸಂದರ್ಭವಿದ್ದೂ ದಮನಿತರಿಗಾಗಿ ಬದುಕಿದ ಕೆಲವು ವ್ಯಕ್ತಿಗಳಲ್ಲಿ ಸ್ವೀ ಕೂಡ ಒಬ್ಬರು. ನಾವು ತಿಳಿಯದ ಇಸ್ರೇಲಿನ ನೈಜ ಮುಖವನ್ನು ಜಗತ್ತಿನ ನಮ್ಮ ಮುಂದಿಟ್ಟಿದ್ದಾರೆ. ಫಕೀರ್ ಮುಹಮ್ಮದ್ ಕಟ್ಪಾಡಿಯವರು ಒಂದು ಅರ್ಥಪೂರ್ಣ ಕೃತಿಯನ್ನು ಕನ್ನಡಕ್ಕೆ ತಂದಿದ್ದಾರೆ. ಅನುವಾದಕರೊಂದಿಗೆ ಮಾತಾಡುತ್ತಾ ಇರುವಾಗ ಅನುವಾದ ಮುಗಿದ ಮೇಲೆ ಕೃತಿ ಸಂಪೂರ್ಣ ಓದಿ ಹನಿಗಣ್ಣಾದೆೆ ಎಂದ ಕಟ್ಪಾಡಿ ಭಾವುಕರಾದರು. 325 ಪುಟಗಳ ಈ ಕೃತಿಯನ್ನು ಕೇರಳದ ಅದರ್ ಬುಕ್ಸ್ ಹೊರತಂದಿದೆ. ಈ ಕೃತಿ ಕನ್ನಡಿಗರ ಕೈಗಳಿಗೆ ಸಿಕ್ಕಿದ ಅಮೂಲ್ಯ ದಾಖಲೆ. ಧನ್ಯವಾದಗಳು ಕಟ್ಪಾಡಿ..

Writer - ಎ. ರಹ್‌ಮಾನ್, ಕಕ್ಯಪದವು

contributor

Editor - ಎ. ರಹ್‌ಮಾನ್, ಕಕ್ಯಪದವು

contributor

Similar News