ಶಿಶುಮನದ ಮಹಾಮಾರಿ

Update: 2019-12-22 10:31 GMT

ಅಧ್ಯಯನ ಮತ್ತು ಅರಿವು: ಭಾಗ 4

ವಿಧ್ವಂಸಕರ ಬೇರು

ಕುಟುಂಬ ಸಮಾಜಕ್ಕೆ ಅಂಜುತ್ತದೆ. ಕುಟುಂಬ ಮಗುವನ್ನು ಅಂಜಿಸುತ್ತದೆ. ಕುಟುಂಬವು ಯಾವುದ್ಯಾವುದೋ ಸ್ಟಿಗ್ಮಾ ಅಥವಾ ಸಾಮಾಜಿಕ ಅಪಖ್ಯಾತಿಗೆ ಒಳಗಾಗುತ್ತದೆ ಎಂಬ ಭಯವನ್ನು ಹೊಂದಿರುವುದರಿಂದ ಮಗುವನ್ನೂ ಅದೇ ಹಳಿಗಳಿಗೆ ತರಲೆತ್ನಿಸುತ್ತದೆ. ವಾಸ್ತವವಾಗಿ ಮಗುವಿಗೆ ಸಾಮಾಜಿಕ ಅಪಖ್ಯಾತಿಯ ಭಯ ಇರುವುದಿಲ್ಲ. ಸಮಾಜದಲ್ಲಿ ಕಳಂಕವೊಂದನ್ನು ಎದುರಿಸುತ್ತೇವೆ ಎಂಬ ಸಂಕೋಚ ಅಥವಾ ಭಯ ಎಂದಿಗೂ ಹೊಂದಿರುವುದಿಲ್ಲ. ಏಕೆಂದರೆ ಮಗುವಿನ ದೃಷ್ಟಿ ಕುಟುಂಬದ ವ್ಯಾಪ್ತಿ ಅದರಲ್ಲೂ ಅದರ ಆಪ್ತವಲಯವನ್ನು ಮೀರಿ ಹೋಗಿರುವುದೇ ಇಲ್ಲ. ಇದು ಬಹಳ ಮುಖ್ಯವಾದ ಅಂಶ. ತಿನ್ನು, ಕುಡಿ, ಮಲಗು, ನಲಿ, ನೇರವಾದ ಅಪಾಯಗಳು; ಇತ್ಯಾದಿಗಳ ಗಮನ ಬಿಟ್ಟರೆ, ಮಗುವಿಗೆ ಬಹಳ ದೂರದೃಷ್ಟಿ, ಗ್ರಹಿಕೆ ಏನೂ ಇರುವುದೇ ಇಲ್ಲ. ಆದರೆ ಕುಟುಂಬವು, ಅದರಲ್ಲಿಯೂ ಸಾಮಾನ್ಯವಾಗಿ ಮಧ್ಯಮವರ್ಗಗಳ ಕುಟುಂಬಗಳು ಸಮಾಜದ ಟೀಕೆಗಳನ್ನು, ಪ್ರಶಂಸೆ ಅಥವಾ ಅಪಖ್ಯಾತಿಗಳನ್ನು ತೀರಾ ಗಂಭೀರವಾಗಿ ಪರಿಗಣಿಸುತ್ತದೆ. ಕುಟುಂಬದವರ ಜನರ ಅಂಜಿಕೆ ಮತ್ತು ಸಮಾಜದ ಕಟ್ಟುಪಾಡುಗಳನ್ನು ತಾನೇ ಮೈಮೇಲೆ ಎಳೆದುಕೊಳ್ಳುವ ರೀತಿ ಮಗುವಿಗೆ ಬಹಳ ದೊಡ್ಡ ಹೊರೆಯಾಗಿ ಪರಿಣಮಿಸುತ್ತದೆ. ಅವರಿಗೆ ಎಂದಿಗೂ ಅರ್ಥವಾಗದ ಸ್ಟಿಗ್ಮಾದ ಅಥವಾ ಸಾಮಾಜಿಕ ಕಳಂಕದ ಹೆದರಿಕೆ, ದೂರದೃಷ್ಟಿಯ ವ್ಯಕ್ತಿಗತ ಮತ್ತು ಕೌಟುಂಬಿಕ ಯೋಜನೆಗಳು, ಸಾಧನೆಗಳು ವಿಚಿತ್ರವಾಗಿಯೂ ಮತ್ತು ಅಸಂಬದ್ಧವಾಗಿಯೂ ತೋರುತ್ತದೆ. ಇದು ಅವರಿಗೆ ಬೇಡದ ಒತ್ತಡವಾಗಿ ಕಾಡುತ್ತದೆ. ತಾನು ತನ್ನ ಮನೆಯವರಿಂದ ಅನಾವಶ್ಯಕ ಒತ್ತಡದಲ್ಲಿ ಸಿಲುಕಿದ್ದೇನೆ ಮತ್ತು ತನಗೆ ಬೇಡದ್ದನ್ನು ಬಲವಂತವಾಗಿ ನೀಡುತ್ತಿದ್ದಾರೆ ಎಂಬ ಭಾವನೆಯಿಂದ ಮಗುವು ಕುಟುಂಬ ಕೊಡುವಿಕೆಗಳನ್ನು ತಿರಸ್ಕರಿಸುತ್ತಾ ಬರುತ್ತದೆ. ಕೆಲವೊಮ್ಮೆ ಸ್ವೀಕರಿಸುವಂತೆ ನಟಿಸುತ್ತದೆ. ಮಗುವನ್ನು ಹೊಂದಿರುವ ಕುಟುಂಬವಾಗಲಿ ಅಥವಾ ಸಂಸ್ಥೆಗಳಾಗಲಿ ಚೆನ್ನಾಗಿ ಗಮನಿಸಬೇಕಾದ ಒಂದು ಮುಖ್ಯವಾದ ಅಂಶವೆಂದರೆ; ಮಗುವಿನ ಯಾವುದೇ ವಿಷಯದ ಪಡೆಯುವಿಕೆಯು ಮಗುವು ಪಡೆಯುತ್ತಿರುವ ಹಿತದ ಮೇಲೆ ಅವಲಂಬಿತವಾಗಿರುತ್ತದೆ. ಮಗುವಿಗೆ ಕೊಡುವಿಕೆಗಿಂತ ಮಗುವು ತಾನೇ ಅದನ್ನು ಗಮನಿಸುವಂತಹ ಮತ್ತು ಪ್ರಶಂಸಿಸುವಂತಹ ಒತ್ತಡರಹಿತ ವಾತಾವರಣವಿದ್ದಲ್ಲಿ ಅದು ಪಡೆಯತೊಡಗುತ್ತದೆ. ತಮ್ಮ ಕೌಟುಂಬಿಕ ಮತ್ತು ಸಾಮಾಜಿಕ ಪರಿಸರಗಳಿಂದ ಶಿಕ್ಷಣ, ತರಬೇತಿ ಮತ್ತು ವೌಲ್ಯಗಳನ್ನು ಮಕ್ಕಳು ಸಮರ್ಥವಾಗಿ ಮತ್ತು ಸಮರ್ಪಕವಾಗಿ ಪಡೆಯುವುದರಲ್ಲಿ ವಿಫಲವಾಗುತ್ತಿರುವ ಕಾರಣವೇ ಇದು.

 ಹೀಗೆ ಪರಿಸರದ ಪ್ರಭಾವದಿಂದ ಉಂಟಾಗುವ ಒತ್ತಡಗಳು ಮಕ್ಕಳಲ್ಲಿ ಈಗಾಗಲೇ ಇರಬಹುದಾದಂತಹ ಎಡಿಎಚ್‌ಡಿ ಅಥವಾ ಬಾರ್ಡರ್ ಲೈನ್ ಪರ್ಸನಾಲಿಟಿ ಡಿಸಾರ್ಡರ್ ಅಥವಾ ಗೀಳುರೋಗದಂತಹ ಸಮಸ್ಯೆಗಳನ್ನು ಉಲ್ಭಣಗೊಳಿಸುತ್ತವೆ. ಯಾವಾಗ ಕುಟುಂಬದ ಹಿತವಾದ ವಾತಾವರಣವು ಸಮಾಜ ಅಥವಾ ನೆರೆಹೊರೆಯನ್ನು ಪ್ರಶಂಸಿಸುವುದನ್ನು ಹೇಳಿಕೊಡಲಾಗುವುದಿಲ್ಲವೋ ಆಗ ಮಗುವು ಬೆಳೆದಂತೆ ಸಮಾಜದ ಸಂಬಂಧಗಳಿಗೆ ಯಾವುದೇ ಬೆಲೆ ಕೊಡುವುದಿಲ್ಲ. ಸಾರ್ವಜನಿಕ ವಸ್ತುಗಳಿಗೆ ಮಾನ್ಯತೆ ನೀಡುವುದಿಲ್ಲ, ಆ ಮಕ್ಕಳು ಮುಂದೆ ಸಮಾಜ ವಿದ್ರೋಹಿ ಚಟುವಟಿಕೆಗಳಲ್ಲಿ ತೊಡಗುತ್ತಾರೆ. ಸಾರ್ವಜನಿಕ ಆಸ್ತಿಪಾಸ್ತಿಗಳನ್ನು ಯಾವುದೋ ಒಂದು ಕಾರಣಕ್ಕೆ ಧ್ವಂಸ ಮಾಡುವ ಮನಸ್ಥಿತಿ ಉಳ್ಳವರಾಗುತ್ತಾರೆ. ಕೋಪಗೊಂಡ ತಂದೆ ಊಟದ ತಟ್ಟೆಯನ್ನು ಎತ್ತಿ ಎಸೆಯುವುದು, ಟಿವಿ ಅಥವಾ ಇನ್ನಾವುದಾದರೂ ವಸ್ತುಗಳನ್ನು ಒಡೆದು ಹಾಕುವುದು, ಅದೇ ಅಪ್ಪ ಅಮ್ಮನಿಗೆ ಹೊಡೆಯುವುದು, ತನ್ನ ಗಂಡನ ಮೇಲಿನ ಕೋಪವನ್ನು ತಾಯಿ ತನ್ನ ಮಕ್ಕಳ ಮೇಲೆ ಹರಿಯಬಿಡುವುದು; ಈ ಬಗೆಯ ಸನ್ನಿವೇಶಗಳನ್ನೆಲ್ಲಾ ಸಾಕ್ಷೀಕರಿಸಿರುವ ಮಗು ಬೆಳೆದು ದೊಡ್ಡದಾಗುತ್ತಿದ್ದಂತೆ ಎಲ್ಲವನ್ನೂ ಮರೆತು ಹೋಗಿರುತ್ತದೆ ಎಂದುಕೊಂಡಿರಾ? ಹೌದು, ಸನ್ನಿವೇಶಗಳನ್ನು, ಸಂಗತಿಗಳನ್ನು ಮಕ್ಕಳು ಮರೆತಿರುತ್ತಾರೆ. ಆದರೆ, ಎಂದಿಗೂ ಆ ಸನ್ನಿವೇಶಗಳ ಪ್ರಭಾವದಿಂದ ಮುಕ್ತರಾಗಿರುವುದಿಲ್ಲ. ಆ ಸಂಗತಿಗಳು ಬೀರಿರುವ ಅಡ್ಡಪರಿಣಾಮಗಳು ಅವರಿಗೆ ಅರಿವಿಲ್ಲದಂತೆಯೇ ತಮ್ಮ ಪರಿಣಾಮಗಳು ಬೀರಿರುತ್ತವೆ.

ಸಮೂಹಸನ್ನಿಯ ಮೂಲವೆಲ್ಲಿ?

ಬಾಲ್ಯದಲ್ಲಿ ಪೂರಕವಾಗಿ ಕೆಲಸ ಮಾಡುವ ಕೆಲವು ಅಂಶಗಳನ್ನು ಗಮನಿಸಿ:

1. ಸ್ಟಿಗ್ಮಾ ಅಥವಾ ಸಾಮಾಜಿಕ ಅಪಖ್ಯಾತಿ ಅಥವಾ ಕಳಂಕಗಳನ್ನು ಅರ್ಥವೇ ಮಾಡಿಕೊಳ್ಳದಂತಹ ಮನಸ್ಸಿರುವ ವಯಸ್ಸಿನಲ್ಲಿ ಅವುಗಳ ಬಗ್ಗೆ ಕುಟುಂಬವು ನೀಡುವ ಒತ್ತು ಮತ್ತು ಮಗುವಿನ ಮೇಲೆ ಅದರ ಒತ್ತಡ, ಆ ಮಗುವು ಬೆಳೆದಂತೆ ಅದರ ಬಗ್ಗೆ ನಿರ್ಲಕ್ಷ ತಾಳುವುದು ಮಾತ್ರವಲ್ಲದೇ ಅದನ್ನು ಚೂರೂ ಪರಿಗಣಿಸದೇ ಅದರ ವಿರುದ್ಧವಾಗಿಯೇ ಕೆಲಸ ಮಾಡುವಂತಹ ವಯಸ್ಕನಾಗಿ ರೂಪುಗೊಳ್ಳುತ್ತಾನೆ.

2. ಮುರಿದ ಸಂಬಂಧಗಳ ಕುಟುಂಬಗಳು, ಸಂಘರ್ಷಣಾ ನಿರತ ಕುಟುಂಬಗಳು, ಸಂಬಂಧಗಳ ಬಗ್ಗೆ ಹಿತವಾದ ಭಾವನೆಗಳ ಬದಲಾಗಿ ಜಿಗುಪ್ಸೆಯ ಅಥವಾ ನಕಾರಾತ್ಮಕ ಧೋರಣೆಗಳನ್ನು ಉಂಟು ಮಾಡುವಂತಹ ಕುಟುಂಬದ ಮಕ್ಕಳು ವಯಸ್ಕರಾಗುತ್ತಿದ್ದಂತೆ ಸಾಮಾಜಿಕ ಸಂಬಂಧಗಳಿಗೂ, ನೆರೆಹೊರೆಯವರಿಗೆ ಬೆಲೆ ಕೊಡಲಾರದೆ ಹೋಗುವರಲ್ಲದೇ, ಆತ್ಮಕೇಂದ್ರಿತವಾಗಿಯೇ ಸದಾ ಯೋಚನೆ ಮಾಡುವವರಾಗಿ ರೂಪುಗೊಳ್ಳುವ ಬಹಳ ದೊಡ್ಡ ಸಾಧ್ಯತೆಗಳಿರುತ್ತವೆ.

3. ವಸ್ತುಗಳನ್ನು ಗೌರವಿಸದ, ತಮ್ಮ ಹಿತಕ್ಕಾಗಿ ಜತನ ಮಾಡುವ ಬದಲು ತಮ್ಮ ಆಗ್ರಹಕ್ಕೆ ಆವೇಶಕ್ಕೆ ವಸ್ತುಗಳನ್ನು ನಾಶ ಮಾಡುವಂತಹ ಮಾದರಿಗಳು ಮಕ್ಕಳನ್ನು ಮುಂದೆ ಸಾರ್ವಜನಿಕ ಆಸ್ತಿಪಾಸ್ತಿಗಳನ್ನು ನಾಶ ಮಾಡುವ ವಿಧ್ವಂಸಕರನ್ನಾಗಿ ಮಾಡುವುದೇನೂ ಆಶ್ಚರ್ಯವಿಲ್ಲ.

4. ಸದಾ ಸಮೂಹಕ್ಕೆ ಅಂಜುವ, ಸಮೂಹದ ಇಷ್ಟಗಳನ್ನು ತಮ್ಮ ಇಷ್ಟಗಳನ್ನಾಗಿಸಿಕೊಳ್ಳುವ ಕುಟುಂಬಗಳು, ಯಾವಾಗಲೂ ಜನಪ್ರಿಯವಾದ ವಿಷಯಗಳನ್ನೇ ಅನುಸರಿಸುವ, ಬಟ್ಟೆ, ಸಿನೆಮಾ, ತಿಂಡಿ, ಹೊಟೇಲ್ ಇತ್ಯಾದಿಗಳನ್ನು ಆಯುವಾಗ ಖ್ಯಾತಿಯನ್ನೇ ಬಯಸುವ ಕುಟುಂಬಗಳು ತಮ್ಮ ಮಕ್ಕಳನ್ನು ಸಮೂಹ ಸನ್ನಿಗೆ ಒಳಗಾಗುವ ವಯಸ್ಕರನ್ನಾಗಿ ರೂಪಿಸುತ್ತದೆ ಎಂದರೆ ಆಶ್ಚರ್ಯಪಡಬೇಕಾಗಿಲ್ಲ.

5.ಸಾರ್ವಜನಿಕವಾಗಿ ತೋರುವ ಸಕಾರಾತ್ಮಕವಾದ ಅಥವಾ ನಕಾರಾತ್ಮಕವಾದ ಯಾವುದೇ ಧೋರಣೆ ಮತ್ತು ವರ್ತನೆಗಳು ಮಕ್ಕಳು ಪಡೆಯುವ ವರ್ತನೆಗಳ ಮಾದರಿಯ ಮೇಲೆ ಮತ್ತು ಬೆಳೆಯುವ ವಾತಾವರಣದ ಮೇಲೆ ಬಹಳಷ್ಟು ಅವಲಂಬಿತವಾಗಿರುತ್ತದೆ. ಅದಕ್ಕೆ ಪೂರಕವಾಗಿ ಜೈವಿಕವಾಗಿಯೋ ಅಥವಾ ಮಾನಸಿಕವಾಗಿಯೋ ಇರುವ ಕೆಲವು ಸಮಸ್ಯೆಗಳೂ ಕೆಲಸ ಮಾಡುತ್ತವೆ.

Writer - ಯೋಗೇಶ್ ಮಾಸ್ಟರ್

contributor

Editor - ಯೋಗೇಶ್ ಮಾಸ್ಟರ್

contributor

Similar News