ಕೇರಳದ ರಾಜಧಾನಿಯಲ್ಲಿ ಕನ್ನಡದ ರಾಯಭಾರಿ ಡಾ. ಎಂ.ರಾಮ

Update: 2019-12-22 10:55 GMT

ಎಂಟನೇ ತರಗತಿ ತನಕ ಔಪಚಾರಿಕ ಶಿಕ್ಷಣ ಪಡೆದು ಶಿಕ್ಷಕ ತರಬೇತಿಯ ಬಳಿಕ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕನಾಗಿ ನಿಯುಕ್ತಿಗೊಂಡ ರಾಮ ಮಾಸ್ಟರ್, ಅಲ್ಲಿಗೆ ಸೀಮಿತವಾಗದೆ ಅಧಮ್ಯ ಉತ್ಸಾಹದಿಂದ ಮುಂದಿನ ಬಹು ಹಂತಗಳ ಶಿಕ್ಷಣದ ಒಂದೊಂದೇ ಮೆಟ್ಟಿಲುಗಳನ್ನು ಏರಿ ಪಿ.ಎಚ್.ಡಿ ಪಡೆದು ವಿಶ್ವವಿದ್ಯಾನಿಲಯದ ಪ್ರೊಫೆಸರ್ ವರೆಗೆ ಏರಿದ ಪರಿ ನಿಜಕ್ಕೂ ಅಚ್ಚರಿಯೇ ಸರಿ. ಕನ್ನಡದ ಕಂಪನ್ನು ಕೇರಳದ ಶಕ್ತಿ ಸ್ಥಳದಲ್ಲಿ ಬೀರಿ, ಅದು ಶಾಶ್ವತವಾಗಿರಲು ಬೇಕಾದ ಅಡಿಪಾಯವನ್ನು ಹಾಕಿದ ರಾಮ ಮಾಸ್ಟರರು ಇಂದಿಗೂ ಕನ್ನಡದ ಕೈಂಕರ್ಯದಲ್ಲಿ ನಿರಂತರವಾಗಿರುವುದು ಕನ್ನಡದ ಸೌಭಾಗ್ಯವೇ ಸರಿ. ಇಂತಹ ಮೇರು ವ್ಯಕ್ತಿಯನ್ನು ಕನ್ನಡ ನಾಡು ಗುರುತಿಸದೆ ಹೋದದ್ದು ದೌರ್ಭಾಗ್ಯವೂ ಹೌದು.

ಬಾಲಕ ರಾಮ, ರಾಮ ಮಾಸ್ಟರ್ ಆದದ್ದು.

ಉತ್ತರ ಕೇರಳದ ತುತ್ತತುದಿ ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಪೈವಳಿಕೆ ಗ್ರಾಮದ ಮೈರುಗ ಎಂಬಲ್ಲಿ ಜನವರಿ 20 1938ರಂದು ಚಂದು ಪಾಟಾಳಿ-ಧೂಮಾಳು ದಂಪತಿಗೆ 5ನೇ ಮಗುವಾಗಿ ಜನಿಸಿದರು. ಮಲಯಾಳಿ ಗಾಣಿಗ ಸಮುದಾಯದ ಚಂದು ಪಾಟಾಳಿ-ಧೂಮಾಳಾ ದಂಪತಿಗೆ ಒಟ್ಟು ಏಳು ಮಕ್ಕಳು. ಗಾಣದಿಂದ ಎಣ್ಣೆ ತೆಗೆಯುವ ಕುಲಕಸುಬು. ಸ್ವಾತಂತ್ರ ಪೂರ್ವದ ಬಡತನದ ಬದುಕು. ಶಾಲಾ ಶಿಕ್ಷಣ ಪಡೆಯದಿದ್ದರೂ ಜೀವನ ಶಿಕ್ಷಣಕ್ಕೇನೂ ಕೊರತೆಯಿರಲಿಲ್ಲ. ಮಕ್ಕಳು ಶಾಲಾ ಶಿಕ್ಷಣಕ್ಕೆ ಒಳ ಪಡುವುದು ತೀರಾ ವಿರಳವಾದ ಅಂದಿನ ದಿನಗಳಲ್ಲಿ ತನ್ನಂತೆ ತನ್ನ ಮಕ್ಕಳು ಕುಲಕಸುಬಿಗೆ ಜೋತು ಬೀಳುವುದು ಬೇಡವೆಂದು ನಿರ್ಧರಿಸಿದ ಚಂದು ಪಾಟಾಳಿ ತನ್ನ ಐದನೇ ಮಗುವಾಗಿ ಜನಿಸಿದ ಬಾಲಕ ರಾಮನನ್ನು ಸ್ಥಳೀಯ ಕುರುಡಪದವು ಪ್ರಾಥಮಿಕ ಶಾಲೆಗೆ ಸೇರಿಸಿದರು. 5ನೇ ತರಗತಿ ತನಕ ಅಲ್ಲಿ ಕಲಿತ ರಾಮನನ್ನು ಬಳಿಕ 6ನೇ ತರಗತಿಗೆ ಪೈವಳಿಕೆ ಬೋರ್ಡ್ ಹೈಸ್ಕೂಲಿಗೆ ದಾಖಲಿಸಲಾಯಿತು. ಈ ಶಾಲೆಯಲ್ಲಿ 8ನೇ ತರಗತಿ ಪಾಸಾದ ರಾಮ ಅಂದಿನ ಕಾಲದ ಒಂದು ಮಹತ್ವದ ಶೈಕ್ಷಣಿಕ ಮಟ್ಟವನ್ನು ಪೂರ್ಣಗೊಳಿಸಿದರು. ಮದ್ರಾಸ್ ಪ್ರಾಂತಕ್ಕೆ ಒಳಪಟ್ಟಿದ್ದ ದಕ್ಷಿಣ ಕನ್ನಡ ಜಿಲ್ಲೆಯ ವ್ಯಾಪ್ತಿಯ ಈ ಶಾಲೆಗಳಲ್ಲಿ ಕನ್ನಡದಲ್ಲೇ ಶಿಕ್ಷಣ ಪಡೆದ ರಾಮ ಅಂದು ಪ್ರಾಥಮಿಕ ಶಾಲಾ ಶಿಕ್ಷಕನ ಹುದ್ದೆಗೆ ಬೇಕಾದ ಜೂನಿಯರ್ ಬೇಸಿಕ್ ತರಬೇತಿಯನ್ನು ಪಡೆಯಲು ಮಾಯಿಪ್ಪಾಡಿಯ ಶಿಕ್ಷಕ ತರಬೇತಿ ಕೇಂದ್ರಕ್ಕೆ ದಾಖಲಾದರು. ಬುನಾದಿ ಶಿಕ್ಷಕ ತರಬೇತಿಯ ಬಳಿಕ 1955ರಲ್ಲಿ ಬೇಕೂರು ಹಿಂದೂ ಅನುದಾನಿತ ಪ್ರಾಥಮಿಕ ಶಾಲೆಯಲ್ಲಿ ತನ್ನ ವೃತ್ತಿ ಜೀವನವನ್ನು ಆರಂಭಿಸಿದರು. ಬಳಿಕ ಸೌತ್‌ಕೆನರಾ ಶಿಕ್ಷಣ ಇಲಾಖೆಯ ನಿರ್ದೇಶಕರ ಆದೇಶದಂತೆ ಸರಕಾರಿ ಸೇವೆಗೆ ಸೇರಿದ ಇವರು ಅರಿಕ್ಕಾಡಿ ಜನರಲ್ ಪ್ರಾಥಮಿಕ ಶಾಲೆಗೆ ನೇಮಕಾತಿ ಹೊಂದಿದರು. ನಂತರದ ವರ್ಷಗಳಲ್ಲಿ ಎಡನಾಡಿನ ಕಣ್ಣೂರು ಎಲ್.ಪಿ.(ಕಿರಿಯ ಪ್ರಾಥಮಿಕ) ಶಾಲೆಗೆ ವರ್ಗಾವಣೆಗೊಂಡು ಏಕೋಪಾಧ್ಯಾಯರಾಗಿ ಕರ್ತವ್ಯ ನಿರ್ವಹಿಸಿ, ಬಡತನ, ಅರಿವಿನ ಕೊರತೆಯ ಕಾರಣದಿಂದ ಶಾಲೆಯ ಸುತ್ತ ಸುಳಿಯದ ವಿದ್ಯಾರ್ಥಿಗಳನ್ನು ಮನವೊಲಿಸಿ ಶಾಲೆಗೆ ದಾಖಲಿಸಿ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಲು ಹಾಗೂ ಮತ್ತೊಂದು ಶಿಕ್ಷಕ ಹುದ್ದೆ ಮಂಜೂರಾಗಲು ಕಾರಣಕರ್ತರಾದರು. ಹಂತ ಹಂತವಾಗಿ ಈ ಶಾಲೆಯ ಬೆಳವಣಿಗೆಗೆ ಕಾರಣರಾದ ರಾಮ ಮಾಸ್ತರ್ ಅಧಿಕಾರಿಗಳ, ಊರವರ ಮೆಚ್ಚುಗೆಗೆ ಪಾತ್ರರಾದರು. ಸೂರಂಬೈಲು ಶಾಲೆಗೆ ವರ್ಗಾವಣೆಗೊಂಡು ಅಲ್ಲಿ ಕರ್ತವ್ಯದಲ್ಲಿದಾಗ ಎಸೆಸೆಲ್ಸಿ ಪರೀಕ್ಷೆಯನ್ನು ಖಾಸಗಿಯಾಗಿ ಬರೆದು ಪಾಸಾದರು. ಅಲ್ಲಿಗೆ ತೃಪ್ತರಾಗದ ರಾಮ ಪಿ.ಯು.ಸಿ.(+2)ಯನ್ನು ಬರೆದು ಪಾಸಾದರು. ಪ್ರಾಥಮಿಕ ಶಾಲೆಯಲ್ಲಿ ಕರ್ತವ್ಯದಲ್ಲಿದ್ದು, ಬೋಧನೆ, ಪಾಠೋಪಕರಣ ತಯಾರಿಯಂತಹ ಚಟುವಟಿಕೆಗಳಲ್ಲಿ ಎತ್ತಿದ ಕೈಯಾಗಿದ್ದ ಇವರ ಓದಿನ ದಾಹ ತಣಿದಿರಲಿಲ್ಲ. ಬಿ.ಎ. ಪರೀಕ್ಷೆಯನ್ನು ಮುಂದಿನ ಮೂರು ವರ್ಷಗಳಲ್ಲಿ ಖಾಸಗಿಯಾಗಿ ಬರೆದು ಬಿ.ಎ. ಪದವೀಧರ ಶಿಕ್ಷಕರಾಗಿ ರಾಮ ಮಾಸ್ಟರ್ ಹುಟ್ಟಿದೂರಿನ ಸಮೀಪದ ಕಾಡೂರು ಕಿರಿಯ ಪ್ರಾಥಮಿಕ ಶಾಲೆಗೆ ವರ್ಗಾವಣೆಗೊಂಡರು. ಈ ಶಾಲೆಯ ಅಭಿವೃದ್ಧಿಗೆ ಊರಿನ ಶಿಕ್ಷಣಾಸಕ್ತರ ನೆರವಿನಿಂದ ಟೊಂಕ ಕಟ್ಟಿದ ರಾಮ ವಿದ್ಯಾರ್ಥಿಗಳ ಹಾಗೂ ಊರವರ ಮೆಚ್ಚಿನ ಶಿಕ್ಷಕರಾಗಿದ್ದರು. ಬೋಧನೆಯ ಜೊತೆಯಲ್ಲಿಯೇ ಯಕ್ಷಗಾನ, ತಾಳಮದ್ದಳೆ ಕೂಟಗಳಲ್ಲಿ ಭಾಗವಹಿಸುತ್ತಾ, ಪಾತ್ರಧಾರಿಯಾಗಿ, ಅರ್ಥಧಾರಿಯಾಗಿ ತನ್ನ ಪ್ರತಿಭೆ ಪ್ರದರ್ಶಿಸತೊಡಗಿದರು. ವಿದ್ಯಾರ್ಥಿಗಳಿಗೆ ರಸವತ್ತಾಗಿ ಬೋಧನೆ ಮಾಡುತ್ತಾ, ತಾನೂ ಓದುತ್ತಾ ತನ್ನ ವಿದ್ಯಾರ್ಹತೆಯನ್ನು ಹೆಚ್ಚಿಸುತ್ತಾ ರಾಮ ಎಲ್ಲರ ಪ್ರೀತಿಯ ರಾಮ ಮಾಸ್ಟರ್‌ರಾಗಿ ರೂಪುಗೊಂಡರು.

ಶಾಲಾ ಅಂಗಳದಿಂದ ವಿಶ್ವವಿದ್ಯಾನಿಲಯದ ಛೇಂಬರ್‌ಗೆ

ಕಾಡೂರಿನ ಶಾಲೆಯಲ್ಲಿ ಕರ್ತವ್ಯದಲ್ಲಿದ್ದಾಗಲೇ ರಾಮ ಮಾಸ್ಟರರಿಗೆ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆಯಬೇಕೆಂಬ ಇಚ್ಛೆ ಉಂಟಾಯಿತು. ಧಾರವಾಡದ ಕರ್ನಾಟಕ ವಿ.ವಿ.ಗೆ ಅರ್ಜಿ ಹಾಕಿದ ಇವರಿಗೆ ಎಂ.ಎ ಪ್ರವೇಶಕ್ಕೆ ಕರೆಯೂ ಬಂತು. ತನ್ನ ಶಿಕ್ಷಕ ವೃತ್ತಿಗೆ ರಜೆ ಹಾಕಿ ನಿರಂತರ ವಿದ್ಯಾರ್ಥಿಯಾಗಿ ಕನ್ನಡ ಎಂ.ಎ. ತರಗತಿಗೆ ಪ್ರವೇಶ ಪಡೆದರು. 1969ರಲ್ಲಿ ಧಾರವಾಡ ವಿ.ವಿ.ಯ ವಿದ್ಯಾರ್ಥಿಯಾಗಿ ದಾಖಲಾದ ಇವರಿಗೆ ಎಂ.ಎಂ ಕಲಬುರಗಿ, ಆರ್.ಎನ್. ಹಿರೇಮಠ, ಎಂ. ಎಸ್. ಇಮ್ರಾಪುರರಂತಹ ಕನ್ನಡ ಸಾರಸ್ವತ ಲೋಕದ ದಿಗ್ಗಜರಿಂದ ಪಾಠ ಕೇಳುವ ಅವಕಾಶ ಒದಗಿ ಬಂತು. ಕನ್ನಡದಲ್ಲಿ ಎಂ.ಎ ಅಧ್ಯಯನದ ಜೊತೆಗೆ ಭಾಷಾ ವಿಜ್ಞಾನದಲ್ಲೂ ಡಿಪ್ಲೊಮಾ ಇದೇ ವಿ.ವಿ.ಯಲ್ಲಿ ಏಕಕಾಲದಲ್ಲಿ ಮಾಡಿ ತನಗೊಲಿದ ಅವಕಾಶವನ್ನು ಒಂದಿಷ್ಟೂ ಬಿಡದೆ ಎರಡು ವರ್ಷಗಳ ಕಲಿಕಾ ಹಂತವನ್ನು ಸಂಪೂರ್ಣವಾಗಿ ಬಳಸಿಕೊಂಡು ಎಂ. ಎ. ಪದವಿ ಹಾಗೂ ಡಿಪ್ಲೊಮಾ ಕಾಡೂರು ಶಾಲೆಗೆ ಮರಳಿ ಕರ್ತವ್ಯಕ್ಕೆ ಹಾಜರಾದರು. ಅಲ್ಪ ಕಾಲದಲ್ಲೇ ಪ್ರೌಢಶಾಲಾ ಶಿಕ್ಷಕರಾಗಿ ಬಡ್ತಿ ಹೊಂದಿದ ರಾಮ ಮಾಸ್ಟರರು ಕಾಸರಗೋಡು ಸರಕಾರಿ ಹೈಸ್ಕೂಲ್‌ಗೆ ವರ್ಗಾವಣೆಗೊಂಡರು. ತಿರುವನಂತಪುರದ ಕೇರಳ ವಿ.ವಿ.ಯಲ್ಲಿ ಭಾಷಾ ವಿಜ್ಞಾನ ವಿಭಾಗದಲ್ಲಿ ಕನ್ನಡ ವಿಷಯದ ಉಪನ್ಯಾಸಕ ಹುದ್ದೆಯೊಂದು ಮಂಜೂರಾಗಿದೆ ಎಂಬ ವಿಷಯವನ್ನು ತಿಳಿದ ರಾಮ ಮಾಸ್ಟರರು ಅಲ್ಲಿಗೆ ಅರ್ಜಿ ಹಾಕಿದರು. ಕರೆ ಬಂದು ಸಂದರ್ಶನವೂ ನಡೆಯಿತು. ಆ ಹುದ್ದೆಗೆ ಸರ್ವ ರೀತಿಯಲ್ಲಿಯೂ ಅರ್ಹರಾಗಿದ್ದ ರಾಮ ಮಾಸ್ಟರ್ ನಿರೀಕ್ಷೆಯಂತೆಯೇ ಆಯ್ಕೆಯಾದರು.

 ಉತ್ತರ ಕೇರಳದ ಕನ್ನಡ ಮಣ್ಣಿನ ಸೊಗಡಿನ ರಾಮ ಮಾಸ್ಟರ್ ದಕ್ಷಿಣ ಕೇರಳದ ಅಪ್ಪಟ ಮಲಯಾಳ ನೆಲದ ಅಂಗಳಕ್ಕೆ ಪ್ರೊಪೆಸರ್ ಆಗಿ ಜಿಗಿದದ್ದು ಒಂದು ಕುತೂಹಲದ ಹಾದಿಯೂ ಆಗಿದೆ. ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಹುದ್ದೆ ನಾರೈ, ಕೈಗೊಂದಿಷ್ಟು ವೇತನಗಾಗುತ್ತಿದ್ದ ಅಂದಿನ ಕಾಲಕ್ಕೆ ನಾರೈದ ಸರಕಾರಿ ನೌಕರಿಗೆ ನ್ಯಾಯವನ್ನು ಕೊಡುತ್ತಾ ತನ್ನ ಕಲಿಯುವ ಅಥವಾ ಉತ್ಸಾಹದಿಂದ ಒಂದೊಂದು ಮೆಟ್ಟಿಲನ್ನು ಹತ್ತಿ ಮಾಸ್ಟರ್ ಹುದ್ದೆಯಿಂದ ಪ್ರೊಫೆಸರ್ ಹಂತಕ್ಕೇರಿದ್ದು, ರಾಮರಲ್ಲಿದ್ದ ಶಿಕ್ಷಣದ ಬಗೆಗಿನ ತುಡಿತಕ್ಕೆ ಸಾಕ್ಷಿ.

ವಿ.ವಿ.ಯಲ್ಲಿ ಉಪನ್ಯಾಸಕರಾಗಿದ್ದುಕೊಂಡೇ ಪಿ.ಎಚ್.ಡಿ ಅಧ್ಯಯನದ ಅವಕಾಶ ಪಡೆದ ರಾಮ ಅವರು ‘ಕಾಸರಗೋಡು ಪ್ರದೇಶದ ತುಳು ಭಾಷೆಯ ವಿವರಣಾತ್ಮಕ ಅಧ್ಯಯನ’ ಎಂಬ ವಿಷಯದಲ್ಲಿ ಸಂಶೋಧನಾ ಪ್ರಬಂಧ ಮಂಡಿಸಿ ಪಿ.ಎಚ್.ಡಿ. ಪಡೆದರು. ಮಲಯಾಳ ಮಾತೃ ಭಾಷೆಯ ರಾಮ ಕನ್ನಡದಲ್ಲಿ ಕಲಿತು ಕನ್ನಡ ಅಧ್ಯಾಪಕನಾಗಿ ದುಡಿದು ಸಾಧನೆಯ ಬೆನ್ನೇರಿ ಮಲಯಾಳದ ಶಕ್ತಿ ಕೇಂದ್ರದಲ್ಲಿದ್ದು ಕೊಂಡು ಕನ್ನಡವನ್ನು ಬೋಧಿಸುತ್ತಾ, ತುಳುವಿನಲ್ಲಿ ಪಿ.ಎಚ್.ಡಿ. ಪಡೆದದ್ದು ಒಂದು ಅಚ್ಚರಿಯೂ ಹೌದು. ಪಿ.ಎಚ್.ಡಿ. ಪಡೆದ ಬಳಿಕ ಪದೋನ್ನತಿ ಹೊಂದಿ ರೀಡರ್ ಬಳಿಕ ಪ್ರೊಫೆಸರ್ ಆಗಿ ಸೇವೆ ಸಲ್ಲಿಸಿದರು. ಇವರಿಗೆ ಪ್ರಾಥಮಿಕ ಶಾಲೆಯ ಒಂದನೇ ತರಗತಿಯ ಮಗುವಿನಿಂದ ಹಿಡಿದು ವಿಶ್ವವಿದ್ಯಾನಿಲಯದ ಪ್ರೌಢನೋರ್ವನಿಗೆ ಬೋಧಿಸುವ ಅವಕಾಶ ಲಭಿಸಿದ್ದು ಇವರ ಸುಯೋಗವೇ ಸರಿ.

ಕೇರಳದ ರಾಜಧಾನಿಯಲ್ಲಿ ಕನ್ನಡದ ಕೈಂಕರ್ಯ, ಎಂ. ಫಿಲ್., ಎಂ.ಎಚ್.ಡಿ. ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುತ್ತಾ ರಾಜಧಾನಿಯಲ್ಲಿ ಕನ್ನಡದ ಕಂಪನ್ನು ಬೀಸುತ್ತಾ ಕನ್ನಡದ ವಿಷಯ ಬಂದಾಗ ಪ್ರೊ.ರಾಮ ಅವರ ಹೆಸರು ಏಕೈಕ ಹೆಸರಾಗಿ ಉಲ್ಲೇಖವಾಗುವಷ್ಟರ ಮಟ್ಟಿಗೆ ಇವರು ಪ್ರಸಿದ್ಧರಾದರು. ಐ.ಎ.ಎಸ್. ಅಧಿಕಾರಿಗಳಿಗೆ, ಕೇರಳ ಪಬ್ಲಿಕ್ ಸರ್ವಿಸ್ ಪರೀಕ್ಷೆ ಪಾಸಾದ ಅಧಿಕಾರಿಗಳಿಗೆ ಕನ್ನಡವನ್ನು ಸುಲಲಿತವಾಗಿ ಬೋಧಿಸಿದರು. ಅದಕ್ಕಾಗಿಯೇ ಪಠ್ಯಪುಸ್ತಕವನ್ನು ರಚಿಸಿದರು. ರಾಮರವರು ಅನೇಕ ಕನ್ನಡದ ಕೃತಿಗಳನ್ನು ಮಲಯಾಳಂ ಭಾಷೆಗೂ, ಮಲಯಾಳಂನಿಂದ ಕನ್ನಡಕ್ಕೂ ಭಾಷಾಂತರ ಮಾಡಿದರು. ಮಂದಾರ ಮಲ್ಲಿಗೆ, ಕನ್ನಾಡಿ, ಕೇರಳ ಜನಪದ ಕಥೆಗಳು, ಮಹಾತ್ಯಾಗಿ, ಕೇರಳ ಕಲಾಮಾಲಾ, ಪರಶಿನಕಡವು ಮುತ್ತಪ್ಪ, ವೇಲುತಂಬಿ ದಶವ, ಮಲಯಾಳಂ ಕವಿತೆಗಳು, ಲಲಿತಾ ಸಹಸ್ರ ನಾಮ ವ್ಯಾಖ್ಯಾನ, ಇತ್ಯಾದಿ ಇವರಿಂದ ಮಲಯಾಳಂನಿಂದ ಕನ್ನಡಕ್ಕೆ ಅನುವಾದಗೊಂಡ ಕೃತಿಗಳು.

ಅಡಿಗ, ಬೇಂದ್ರೆಯವರ ಪದ್ಯಗಳನ್ನು, ಶಿವರಾಮ ಕಾರಂತರ ಮೂಕಜ್ಜಿಯ ಕನಸುಗಳು ಕೃತಿಯನ್ನು ಮೂಕಜ್ಜಿ ಯುಡೆ ಕಿನಾವುಗಳ್, ಅನಂತಮೂರ್ತಿಯವರ ಸೂರ್ಯನ ಕುದುರೆ ನೀಳ್ಗತೆಯನ್ನು ‘ಸೂರ್ಯಂಡೆ ಕುದುರೆ’, ಕನ್ನಡದ 108 ವಚನಗಳನ್ನೂ ವಚನ ಸೋಪಾನವಾಗಿ ಮಲಯಾಳಂಗೆ ಅನುವಾದಿಸಿದ್ದಾರೆ.

ಸರ್ವಜ್ಞನ ವಚನಗಳು, ರಾಮಧಾನ್ಯ ಚರಿತೆ, ವಚನ ಸಾಹಿತ್ಯಗಳನ್ನು ಮಲಯಾಳಂಗೆ ಪರಿಚಯಿಸುವಲ್ಲಿ ಗರಿಷ್ಠ ಶ್ರಮವಹಿಸಿದ್ದಾರೆ. ಸುಮಾರು 50ಕ್ಕಿಂತಲೂ ಮಿಕ್ಕಿದ ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದಾರೆ.

ಎಂ.ಎಂ. ಕಲಬುರ್ಗಿಯವರು ಸಂಪಾದಿಸಿದ ಸುಮಾರು 2,500 ವಚನಗಳನ್ನು ಮಲಯಾಳಂಗೆ ಭಾಷಾಂತರಿಸುವ ಹೊಣೆ ಹೊತ್ತ ಸಂಪಾದಕ ಮಂಡಳಿಯ ಅಧ್ಯಕ್ಷರಾಗಿ ರಾಮರವರು ಕಾರ್ಯನಿರ್ವಹಿಸಿದ್ದಾರೆ. ತಿರುವನಂತಪುರದಲ್ಲಿರುವ ಇಂಟರ್‌ನ್ಯಾಶನಲ್ ಸ್ಕೂಲ್ ಆಫ್ ದ್ರಾವಿಡಿಯನ್ ಲಿಂಗ್ವಿಸ್ಟಿಕ್ ನ ಕೋಶಾಧಿಕಾರಿ, ಕಾರ್ಯದರ್ಶಿ, ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ರಾಮ ನಾಲ್ಕು ವರ್ಷ ಅದರ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದರು. ಇವರ ನಿರ್ದೇಶಕತ್ವದ ಅವಧಿಯಲ್ಲಿ ಕೇರಳ, ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಪಶ್ಚಿಮ ಬಂಗಾಳದಲ್ಲಿ ಐ.ಎಸ್.ಡಿ.ಎಲ್ ಪ್ರಾಯೋಜಿತ ಕಾರ್ಯಕ್ರಮಗಳನ್ನು ಸಂಘಟಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ತಿರುವನಂತಪುರ, ಚೆನ್ನೈ, ಹೈದರಾಬಾದ್, ಪಟಿಯಾಲದಲ್ಲಿ ದ್ರಾವಿಡ ಭಾಷಾ ಇವು ಸಮ್ಮೇಳನಗಳನ್ನು ಅತ್ಯಂತ ಯಶಸ್ವಿಯಾಗಿ ನಡೆಸುವಲ್ಲಿ ಇವರು ಮುಂಚೂಣಿಯಲ್ಲಿ ನಿಂತು ನಿರ್ದೇಶನ ನೀಡಿದರು.

ಕೇರಳ ಸರಕಾರ, ಕೇರಳ ವಿಶ್ವವಿದ್ಯಾನಿಲಯ, ಕೇರಳ ಪರೀಕ್ಷಾ ಭವನ, ಕೇರಳ ಲೋಕ ಸೇವಾ ಆಯೋಗದ ಕನ್ನಡದ ಕೆಲಸಗಳಲ್ಲಿ ರಾಮರವರ ಸೇವೆ ಗಣನೀಯ ಹಾಗೂ ಶಾಶ್ವತ ಪರಿಣಾಮ ಬೀರಿದ್ದಾಗಿದೆ. ಸರಕಾರದ ಹಂತದಲ್ಲಿ ಸಚಿವಾಲಯಗಳ ನಡುವೆ ಸಂಪರ್ಕಸಾಧಿಸಿ ಅನೇಕ ಕನ್ನಡ ಶಾಲೆಗಳ ಸ್ಥಾಪನೆ, ಉನ್ನತೀಕರಣ, ಅನುದಾನಕ್ಕಾಗಿ ರಾಮ ಅವರು ಪಟ್ಟ ಶ್ರಮ, ಶ್ಲಾಘನೀಯ. ಆ ಮೂಲಕ ಕೇರಳದಲ್ಲಿ ಕನ್ನಡ ಭಾಷಾ ಅಲ್ಪ ಸಂಖ್ಯಾತರಿಗೆೆ ಔದ್ಯೋಗಿಕ ನೆಲೆ ಹಾಗೂ ಸಾಮಾಜಿಕ ಬೆಲೆ, ಶ್ಯಕ್ಷಣಿಕ ಮೌಲ್ಯಗಳನ್ನು ತಂದುಕೊಡುವಲ್ಲಿ ಇವರ ಶ್ರಮವನ್ನು ಫಲಾನುಭವಿಗಳ ನಿತ್ಯ ಸ್ಮರಣೆಯಲ್ಲೇ ಕೇಳಬಹುದು.

 ಸುಮಾರು ಮೂರು ದಶಕಗಳ ಕಾಲSCERT ಯ ಕನ್ನಡ ಭಾಷೆಯ ಪಠ್ಯ ಪುಸ್ತಕಗಳ ಸಂಪಾದಕರಾಗಿ 1ರಿಂದ 12ನೇ ತರಗತಿವರೆಗಿನ ಕನ್ನಡ ಭಾಷೆಯ ಎಲ್ಲಾ ವಿಷಯವಾರು ಪಠ್ಯಪುಸ್ತಕ ಹಾಗೂ ಕೈಪಿಡಿ ರಚನೆಯಲ್ಲಿ ಅಹೋ ರಾತ್ರಿ ಶ್ರಮಿಸಿದ್ದನ್ನು ಕನ್ನಡ ಭಾಷಾ ಶಿಕ್ಷಕರು ಇಂದು ಕೂಡಾ ನೆನಪಿಸಿಕೊಳ್ಳುತ್ತಾರೆ. ಕೇರಳದ ಗಡಿನಾಡಿನಲ್ಲಿ ಪದೇ ಪದೇ ಅವಗಣನೆಗೆ ಒಳಗಾಗುತ್ತಿರುವ ಕನ್ನಡ ಕೇವಲ ಉದ್ಯೋಗದಾತರ ಭಾಷೆಯಾಗಿ ಉಳಿಯಬಾರದು. ಅದು ನೆಲದ ಭಾಷೆಯಾಗಿ, ಆಸಕ್ತಿಯಿಂದ ಕಲಿಯುವ-ಕಲಿಸುವ ಭಾಷೆಯಾಗಬೇಕೆಂಬ ತುಡಿತ ರಾಮರಲ್ಲಿತ್ತು. ಅದರಿಂದಾಗಿ ತನ್ನ ಪಠ್ಯಪುಸ್ತಕದ ರಚನೆಯ ಜವಾಬ್ದಾರಿಯುತ ಹುದ್ದೆಯಲ್ಲಿ ಯಾವ ಕಾರ್ಯವನ್ನೂ ಅವರು ಹಗುರವಾಗಿ ತೆಗೆದುಕೊಳ್ಳಲೇ ಇಲ್ಲ. ಎಲ್ಲವನ್ನು ಗಂಭೀರವಾಗಿ ನಿರ್ವಹಿಸಿದ ಫಲವಾಗಿ ಇವರ ಮಾರ್ಗದರ್ಶನದಲ್ಲಿ ರಚನೆಗೊಂಡ ಕೇರಳದ ಕನ್ನಡ ಪಠ್ಯ ಪುಸ್ತಕಗಳು ಕರ್ನಾಟಕಕ್ಕೆ ಮಾದರಿ ಎನಿಸಿಕೊಂಡವು. ಪಠ್ಯ ಪುಸ್ತಕ ರಚನೆ, ಕಾರ್ಯಾಗಾರ ತರಬೇತಿ ಕೈಪಿಡಿ ಇವೆಲ್ಲವುಗಳಲ್ಲಿ ರಾಮರವರು ತೋರುತ್ತಿದ್ದ ಗಂಭೀರ ಆಸಕ್ತಿ ಮತ್ತು ಕಾಳಜಿ ಅವರ ಶ್ರಮವನ್ನು ಕೇರಳದಲ್ಲಿ ಚಿರಸ್ಥಾಯಿಯಾಗಿಸಿದೆ.

ಕನ್ನಡ ಭಾಷೆ, ಪ್ರಶ್ನೆ ಪತ್ರಿಕೆ ತಯಾರಿಯಲ್ಲಿ ರಾಮರವರು ಎತ್ತಿದ ಕೈ. ಕೇರಳ, ಕ್ಯಾಲಿಕಟ್, ಮದ್ರಾಸ್, ಹೈದರಾಬಾದ್, ಧಾರವಾಡ, ಕಲಬುರಗಿ, ಮೈಸೂರು ವಿಶ್ವವಿದ್ಯಾನಿಲಯಗಳ ಕನ್ನಡ ಭಾಷಾ ಪರಿಕ್ಷಾ ಕಾರ್ಯದಲ್ಲಿ ತನ್ನ ಸೇವೆಯನ್ನು ಸಲ್ಲಿಸಿದ್ದಾರೆ. ದ್ರಾವಿಡ ಭಾಷೆಗಳ ಸಾಲಿನಲ್ಲಿ ತುಳುವನ್ನು ಒಪ್ಪಿಕೊಳ್ಳಲು ಹಿಂಜರಿಯುತ್ತಿದ್ದ ಸಂದರ್ಭದಲ್ಲಿ ತುಳುವಿನಲ್ಲಿ ಪಿ.ಎಚ್.ಡಿ ಮಾಡಿ ತುಳುವಿನ ವೈಶಿಷ್ಟವನ್ನು ಎತ್ತಿ ತೋರಿಸಲು ಶ್ರಮಿಸಿ ದರು. ತುಳುವಿನ 20 ಲೇಖಕರ ಬಗ್ಗೆ ಮಲಯಾಳಂ ಲೆಕ್ಸಿಕನ್‌ಗೆ ಲೇಖನ ಬರೆದು ನೀಡಿದ್ದಾರೆ.

ಕೇರಳ ಲೋಕಸೇವಾ ಆಯೋಗದ ಮೂಲಕ ನೇಮಕ ಹೊಂದಿದ ಅಧಿಕಾರಿಗಳಿಗೆ ಕನ್ನಡ ಭಾಷೆಯನ್ನು ಕಲಿಸಲು ಬೇಕಾದ ಕೋರ್ಸುಗಳನ್ನು ನಡೆಸಲು ಪಠ್ಯಪುಸ್ತಕ, ಪ್ರಶ್ನೆಪತ್ರಿಕೆ ಮೌಲ್ಯಮಾಪನ ಯೋಜನೆಗಳನ್ನು ನಿರಂತರವಾಗಿ ಮಾಡುತ್ತಿ ದ್ದಾರೆ. ಕೇರಳ ಸರಕಾರದ ಕುಟುಂಬಶ್ರೀ ಯೋಜನೆಯ ಸಿಬ್ಬಂದಿಗೆ ಕನ್ನಡ ಕಲಿಸಲು ಪೂರಕ ಕೋರ್ಸುಗಳನ್ನು ನಡೆಸಿಕೊಟ್ಟಿದ್ದಾರೆ.

1998 ರಲ್ಲಿ ತನ್ನ ವೃತ್ತಿಯಿಂದ ನಿವೃತ್ತರಾದ ರಾಮ ಇಂದಿಗೂ ವಿರಾಮವಾಗಿಲ್ಲ. ತನ್ನ ನಿವೃತ್ತಿಯ ನಂತರ ಎರಡು ದಶಕಗಳಲ್ಲಿ ನವ ಸ್ಫೂರ್ತಿಯೊಂದಿಗೆ ಕೇರಳದಲ್ಲಿ ಕನ್ನಡದ ಕೆಲಸದಲ್ಲಿ ತೊಡಗಿರುವ ಇವರು ತುಳು-ಕನ್ನಡ-ಮಲಯಾಳಂ ಶಬ್ದಕೋಶದ ರಚನಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಕೇರಳ ವಿ.ವಿ. ಯ ತಮಿಳು ವಿಭಾಗವು ಹೊರತರಲು ಉದ್ದೇಶಿಸಿರುವ ತಮಿಳು-ಕನ್ನಡ ನಿಘಂಟಿನ ರಚನಾ ಕಾರ್ಯವು ಇವರ ನೇತೃತ್ವದಲ್ಲಿ ನಡೆಯುತ್ತಿದೆ. ಎಂ.ಎಂ. ಕಲಬುರ್ಗಿಯವರು ಸಂಪಾದಿಸಿದ ಸುಮಾರು 2,000 ಕ್ಕೂ ಹೆಚ್ಚು ವಚನಗಳನ್ನು ಮಲಯಾಳಂಗೆೆ ಭಾಷಾಂತರಿಸುವ ಹೊಣೆ ಹೊತ್ತ ಸಂಪಾದಕ ಮಂಡಳಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಕನ್ನಡ, ಕನ್ನಡ ಶಾಲೆ, ಕನ್ನಡ ಭಾಷೆ, ಪರೀಕ್ಷೆ-ಪಠ್ಯಕ್ರಮ, ಪಠ್ಯಪುಸ್ತಕ, ಮೌಲ್ಯಮಾಪನ ಅನುವಾದ, ಭಾಷಾ ಅಧ್ಯಯನಕ್ಕೆ ಸಂಬಂಧಿಸಿದ ವಿಷಯಗಳು ಮುನ್ನೆಲೆಗೆ ಬಂದಾಗ ಕೇರಳ ಸರಕಾರ ಮತ್ತು ಕೇರಳ ವಿ.ವಿಗೆ ಬಲು ಹತ್ತಿರದ ಹೆಸರು ಪ್ರೊ. ರಾಮರದ್ದು. ತನ್ನ ಅಗಾಧ ಅನುಭವ ಮತ್ತು ಕೈಗೆತ್ತಿಕೊಂಡ ಕಾರ್ಯವನ್ನು ಪೂರ್ಣಗೊಳಿಸುವ ದಕ್ಷತೆ, ಬಹುಭಾಷೆಗಳ ಹಿಡಿತದಿಂದಾಗಿ ರಾಮರವರು ಕೇರಳದಲ್ಲಿ ಕನ್ನಡದ ಕಲ್ಪವೃಕ್ಷವಾಗಿ ಕಂಡವರು. ತಿರುವನಂತಪುರದಲ್ಲಿ ವಾಸ್ತವ್ಯವಿದ್ದು ಕನ್ನಡ ಮಲಯಾಳಂ ಭಾಷೆಗಳ ನಡುವೆ ಸೇತುವೆಯಾಗಿಯೂ, ಉತ್ತರ -ದಕ್ಷಿಣ ಕೇರಳವನ್ನು ಭಾಷೆ ಸಮನ್ವಯದಿಂಧ ಬೆಸೆಯುವ ಕೊಂಡಿಯಾಗಿಯೂ, ಸುಮಾರು ನಾಲ್ಕು ದಶಕಗಳಿಂದ ಪ್ರಚಾರದ ಹಂಗಿಲ್ಲದೆ, ಹಾರ - ತುರಾಯಿಗಳಿಗೆ ಜೋತು ಬೀಳದೆ ಪ್ರಶಸ್ತಿಗಳಿಗೆ ಬೆನ್ನು ಬೀಳದೆ ಕನ್ನಡದ ಕಾಯಕ ಮಾಡಿದ ರಾಮರನ್ನು ಕನ್ನಡ ನಾಡು ಗುರುತಿಸಬೇಕಾಗಿತ್ತು. ಎಂಬತ್ತೊಂದು ವರ್ಷದ ಪ್ರೊ. ರಾಮ ಈಗಲೂ ಕ್ರಿಯಾಶೀಲರು. ಕನ್ನಡದ ಕರೆಗೆ ಕೇರಳದ ರಾಜಧಾನಿ ತಿರುವನಂತಪುರದಿಂದ ಉತ್ತರದ ಮೂಲೆಗೂ ಧಾವಿಸುವ ಆಸಕ್ತಿ ಈಗಲೂ ಬತ್ತಿ ಹೋಗಿಲ್ಲ. ರಾಜಧಾನಿಯಲ್ಲಿದ್ದುಕೊಂಡೇ ವಹಿಸಿಕೊಂಡಿರುವ ಹತ್ತಾರು ಜವಾಬ್ದಾರಿಗಳನ್ನು ದಣಿವಿಲ್ಲದೆ ಮುಗಿಸುವ ಹಂಬಲವುಳ್ಳವರು. ಇಂತಹ ಮೇರುವ್ಯಕ್ತಿತ್ವದ ಪ್ರೊ.ರಾಮರವರಿಗೆ ಅವರ ಹುಟ್ಟೂರಿನ ಸಜ್ಜನರು ಸೇರಿ 2010 ರಲ್ಲಿ ರಾಮ ಅಭಿನಂದನ ಟ್ರಸ್ಟ್ ರಚಿಸಿ ಸುಮಾರು 400 ಪುಟಗಳ ಅಭಿನಂದನಾ ಗ್ರಂಥ ಸಮರ್ಪಿಸಿ ಕೃತಾರ್ಥರಾಗಿದ್ದಾರೆ.

ಗಡಿನಾಡ ಕನ್ನಡಿಗನಾಗಿ ಹೊರನಾಡಿನಲ್ಲಿದ್ದು ಕನ್ನಡಕ್ಕಾಗಿ ಬಹಿರಂಗ ಡಂಗುರ ಸಾರದೆ ಅಕಾಡಮಿಕ್ ಕಾಯಕದ ಮೂಲಕ ಸಾಹಿತ್ಯ ರಚನೆ, ಅನುವಾದ - ನಿಘಂಟು ಪಠ್ಯ ದಂತಹ ಶಾಶ್ವತ ಕಾರ್ಯದ ಮೂಲಕ ಸರ್ವ ಮಾನ್ಯ ರಾದ ಪ್ರೊ. ರಾಮರನ್ನು ಕನ್ನಡ ನಾಡು ಗುರುತಿಸದೆ ಹೋದದ್ದು ದುರಂತವೇ ಸರಿ. ಸರಕಾರ ಅಥವಾ ಪ್ರಾಧಿಕಾರ ಇಲ್ಲವೇ ಸಾಹಿತ್ಯ ಪರಿಷತ್ತು 81ರ ಹರೆಯದ ಕೇರಳದ ಈ ಕನ್ನಡ ಕುವರನನ್ನು ಅವರ ಕ್ರಿಯಾಶೀಲತ್ವದ ಅವಧಿಯಲ್ಲೇ ಗುರುತಿಸಬೇಕಾಗಿದೆ.

Writer - ಅಬ್ದುಲ್ ರಝಾಕ್ ಅನಂತಾಡಿ

contributor

Editor - ಅಬ್ದುಲ್ ರಝಾಕ್ ಅನಂತಾಡಿ

contributor

Similar News