ಸಂಭ್ರಮದ ಕ್ರಿಸ್‌ಮಸ್ ಗೆ ಸಜ್ಜಾದ ರಾಜ್ಯ ರಾಜಧಾನಿ: ಆಕರ್ಷಿಸುತ್ತಿರುವ ಚರ್ಚ್, ಶಾಲೆಗಳು

Update: 2019-12-22 17:54 GMT

ಬೆಂಗಳೂರು, ಡಿ.22 : ಎನ್‌ಆರ್‌ಸಿ ಹಾಗೂ ಸಿಎಎ ಜಾರಿ ವಿರೋಧಿಸಿ ನಗರದಲ್ಲಿ ನಡೆಯುತ್ತಿರುವ ಬೃಹತ್ ಪ್ರತಿಭಟನೆ, ಧರಣಿಗಳ ನಡುವೆಯೂ ಶಾಂತಿಧೂತ ಎಂದೇ ಕರೆಯುವ ಏಸುವಿನ ಜನ್ಮ ದಿನವಾದ ಕ್ರಿಸ್‌ಮಸ್ ಆಚರಿಸಲು ನಗರದಲ್ಲಿನ ಕ್ರೈಸ್ತ ಸಮುದಾಯ ಸಜ್ಜಾಗುತ್ತಿದ್ದು, ಆತಂಕದ ವಾತಾವರಣದಲ್ಲಿಯೇ ಹಬ್ಬದ ಆಚರಣೆಗೆ ತಯಾರಿ ನಡೆಸಿದೆ.

ಹಬ್ಬದ ಆಚರಣೆಗೆ ಇನ್ನೆರಡು ದಿನಗಳಷ್ಟೇ ಬಾಕಿ ಉಳಿದುಕೊಂಡಿದ್ದು, ನಗರದಾದ್ಯಂತ ನಕ್ಷತ್ರಗಳ ಮಿಂಚು, ಬಲೂನುಗಳ ಚಿತ್ತಾರ, ಹಚ್ಚ ಹಸಿರಾದ ಕ್ರಿಸ್‌ಮಸ್ ಟ್ರೀಗಳು, ಭಿನ್ನ-ವಿಭಿನ್ನವಾದ ಗೊಂಬೆಗಳು, ಸಾಂತಾ ಕ್ಲಾಸ್‌ನ ಪ್ರತಿಬಿಂಬ, ಶುಭ ಸಂಕೇತದ ಗಂಟೆ, ಘಮಘಮಿಸುವ ಬಗೆ ಬಗೆಯ ಕೇಕುಗಳ ತಯಾರಿ ಇತ್ಯಾದಿಗಳು ರಂಗು ಮೂಡಿಸಿವೆ. ನಗರದಲ್ಲಿ ಸಾಮಗ್ರಿಗಳ ಆಕರ್ಷಕ ಜೋಡಣೆ ಮೂಲಕ ಮಾರಾಟಗಾರರು ಗ್ರಾಹಕರನ್ನು ಕೈಬಿಸಿ ಕರೆಯುತ್ತಿದ್ದಾರೆ. ‘ಮೇರಿ ಕ್ರಿಸ್‌ಮಸ್’ ಸಂದೇಶದ ಕ್ರಿಸ್‌ಮಸ್ ಕಾರ್ಡ್‌ಗಳು, ಉಡುಗೊರೆಗಳು, ವಿಭಿನ್ನ ವಿನ್ಯಾಸ ಹಾಗೂ ಬಣ್ಣದ ಕ್ಯಾಂಡಲ್‌ಗಳು, ಗೃಹಾಲಂಕಾರಕ್ಕೆ ಅಗತ್ಯವಾದ ತೋರಣ, ಚಿನ್ನಾರಿಗಳ ಮಾರಾಟದ ಭರಾಟೆ ಎಲ್ಲೆಲ್ಲೂ ಕಳೆಕಟ್ಟಿದೆ. ಶಿವಾಜಿನಗರ, ಜಯನಗರ, ಬ್ರಿಗೇಡ್ ರಸ್ತೆ, ಎಂ.ಜಿ. ರಸ್ತೆ, ಕಮರ್ಷಿಯಲ್ ಸ್ಟ್ರೀಟ್, ಗಾಂಧಿಬಜಾರ್ ಹೀಗೆ ನಗರದ ನಾನಾ ಕಡೆಗಳಲ್ಲಿ ಕ್ರಿಸ್‌ಮಸ್ ಹಬ್ಬದ ವಸ್ತುಗಳದ್ದೇ ಕಾರುಬಾರು ನಡೆಯುತ್ತಿದೆ.

ತಮಿಳುನಾಡು, ಚೆನ್ನೈ, ಗೋವಾ, ಹೈದರಾಬಾದ್, ಮುಂಬೈ ಸೇರಿದಂತೆ ವಿವಿಧ ಕಡೆಗಳಿಂದ ಆಗಮಿಸಿರುವ ಕಲಾವಿದರ ಕೈ ಚಳಕದಿಂದ ಮೂಡಿಬಂದಿರುವ ಕಲಾಕೃತಿಗಳು, ಗೊಂಬೆಗಳು ಹಾಗೂ ಮರದ ಮತ್ತು ಹುಲ್ಲಿನಿಂದ ಮಾಡಿರುವ ಮನೆ ವಿಶೇಷವಾಗಿ ಜನರನ್ನು ಆಕರ್ಷಿಸುತ್ತಿವೆ. ಗ್ರಾಹಕರ ಕೈಗೆಟುಕುವಂತೆ ಬೇರೆ ಬೇರೆ ವಿನ್ಯಾಸದ ಸ್ಟಾರ್‌ಗಳು, ಶುಭ ಸಂಕೇತದ ಗಂಟೆ, ನಾನಾ ಆಕಾರ ಅಥವಾ ಗಾತ್ರದ ಕ್ರಿಸ್‌ಮಸ್ ಟ್ರೀ ಇತ್ಯಾದಿಗಳನ್ನು ಮಾರಾಟಕ್ಕಿಟ್ಟಿದ್ದು, ಗೋದಲಿ ಗೊಂಬೆ 500 ರಿಂದ 1500ಕ್ಕೂ ಅಧಿಕ ರೂ.ಗಳಿಗೆ, ಸಾಂತಾ ಟೊಪ್ಪಿ 20 ರೂ.ಗಳು, ಮಾಸ್ಕ್ 100-150ರೂ.ಗಳು, ಬಟ್ಟೆಗಳು 500 ರೂ. ಗಳಿಂದ 1,500 ರೂ.ಗಳವರೆಗೆ, ಕ್ರಿಸ್‌ಮಸ್ ಟ್ರೀ-150 ರಿಂದ ಎರಡು ಸಾವಿರ ರೂ.ಗಳಿಗೂ ಅಧಿಕಕ್ಕೆ ಮಾರಾಟವಾಗುತ್ತಿದೆ. ಪ್ಲಾಸ್ಟಿಕ್ ಟ್ರೀ 50-1 ಸಾವಿರ ರೂ.ಗಳು ಹಾಗೂ ನಕ್ಷತ್ರ 50 ರೂ.ಗಳಿಂದ 120 ರೂ.ಗಳ ವರೆಗೆ ಮಾರಾಟ ಮಾಡಲಾಗುತ್ತಿದೆ.

ಚರ್ಚ್-ಶಾಲೆಗಳಲ್ಲಿ ಸಂಭ್ರಮ: ಶಿವಾಜಿನಗರ, ಎಂ.ಜಿ.ರಸ್ತೆ ಸೇರಿದಂತೆ ನಗರದ ಹಲವು ಪ್ರಮುಖ ಚರ್ಚ್‌ಗಳು ಸಿಂಗಾರಗೊಂಡಿವೆ. ಜೊತೆಗೆ, ಕ್ರಿಶ್ಚಿಯನ್ ಸಮುದಾಯದ ನಡೆಸುತ್ತಿರುವ ಶಾಲೆ-ಕಾಲೇಜುಗಳಲ್ಲಿ ಕ್ರಿಸ್‌ಮಸ್‌ನ ಸಡಗರ ಆರಂಭವಾಗಿದೆ. ಝಗಮಗಿಸುವ ಸ್ಟಾರ್‌ಗಳು, ಕ್ರಿಸ್‌ಮಸ್ ಟ್ರೀಗಳನ್ನು ಜೋಡಿಸಲಾಗಿದೆ. ಹಬ್ಬಕ್ಕೆಂದೇ ವಿದ್ಯಾರ್ಥಿ ಮತ್ತು ಪೋಷಕರಿಗಾಗಿ ‘ಕಾರ್ನಿವಲ್’ ಉತ್ಸವಗಳು ನಡೆಯುತ್ತಿವೆ. ಬೃಹತ್ ಹೋಟೆಲ್‌ಗಳು, ಮಾಲ್‌ಗಳು, ಕೆಲವು ಕಚೇರಿಗಳಲ್ಲೂ ಹಬ್ಬದ ಸಂಭ್ರಮವಿದೆ.

ಆನ್‌ಲೈನ್ ಮಾರಾಟ: ಬಿಡುವಿಲ್ಲದ ಕೆಲಸಗಳ ನಡುವೆ ಕೆಲವರು ಮಾರುಕಟ್ಟೆಗಳಿಗೆ ಹೋಗಿ ಬೇಕಾದ ಸಾಮಗ್ರಿಗಳನ್ನು ಖರೀದಿಸಲು ಸಮಯಾವಕಾಶವೇ ಇಲ್ಲ. ಇದರ ಜೊತೆಗೆ ಬ್ಯಾಂಕ್‌ನಲ್ಲಿ ಸಾಲುನಿಂತು ಹಣ ಪಡೆಯಲು ಸಾಧ್ಯವಾಗದೇ ಸುಮಾರು ಗ್ರಾಹಕರು ಆನ್‌ಲೈನ್ ಖರೀದಿ ಮಾಡುತ್ತಿದ್ದಾರೆ. ಮತ್ತೊಂದೆಡೆ, ಹಲವು ಸ್ಥಳಗಳಲ್ಲಿ ಡೆಬಿಟ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್‌ಗಳ ಮೂಲಕ ಖರೀದಿ ಮಾಡಲು ಅವಕಾಶ ಕಲ್ಪಿಸಿರುವುದರಿಂದ ಗ್ರಾಹಕರು ನಿಟ್ಟುಸುರು ಬಿಟ್ಟಿದ್ದಾರೆ. ಪ್ರೀಮಿಯಂ ಕೇಕ್‌ಗಳಿಂದ ಹಿಡಿದು ತಮಗೆ ಬೇಕಾದ ಸ್ಟಾರ್, ಕ್ರಿಸ್‌ಮಸ್ ಟ್ರೀ ಇತ್ಯಾದಿಗಳನ್ನು ಆನ್‌ಲೈನ್ ಮೂಲಕ ಬುಕಿಂಗ್ ಮಾಡಲಾಗುತ್ತಿದೆ.

‘ಕ್ರಿಸ್‌ಮಸ್ ಹಬ್ಬ ನಾವು ಆಚರಣೆ ಮಾಡುವ ಹಬ್ಬಗಳಲ್ಲಿ ಹೆಚ್ಚಿನ ಪ್ರಮುಖವಾದ ಹಬ್ಬವಾಗಿದೆ. ಈ ಹಬ್ಬ ಆಚರಣೆಗೆ ಬೇಕಾದ ಎಲ್ಲ ಅಲಂಕಾರಿಕ ವಸ್ತುಗಳು ಸೇರಿದಂತೆ ಅಗತ್ಯ ವಸ್ತುಗಳನ್ನು ನಗರದ ಹಲವು ಅಂಗಡಿಗಳಲ್ಲಿ ಒಂದೇ ಕಡೆ ಸಿಗುವಂತೆ ಮಾಡಿದ್ದಾರೆ. ಹೀಗಾಗಿ, ಜಾಸ್ತಿ ಸುತ್ತಾಡಿ, ಸಮಯ ವ್ಯರ್ಥ ಮಾಡಿಕೊಳ್ಳಬೇಕಾದ ಅಗತ್ಯವಿಲ್ಲ’

- ಪ್ರಣಿತಾ, ಗ್ರಾಹಕರು

‘ಕ್ರಿಸ್‌ಮಸ್ ಹಬ್ಬದಲ್ಲಿ ಕೇಕುಗಳಿಗೆ ವಿಶೇಷವಾದ ಪ್ರಾಮುಖ್ಯತೆ ಇದೆ. ಆದುದರಿಂದ ಹೆಚ್ಚಿನ ಪ್ರಮಾಣದಲ್ಲಿ ಕೇಕ್‌ಗಳನ್ನು ಖರೀದಿ ಮಾಡುತ್ತಾರೆ. ಅದಕ್ಕಾಗಿ ಹಲವು ಬಗೆಯ ವಿನ್ಯಾಸದಲ್ಲಿರುವ ಕೇಕ್‌ಗಳನ್ನು ತಯಾರಿಸಿದ್ದು, ಗ್ರಾಹರಿಂದ ಬೇಡಿಕೆ ಇದೆ. ಆದರೆ, ಕಳೆದ ವರ್ಷಕ್ಕಿಂತ ಈ ವರ್ಷ ಬೇಡಿಕೆ ಪ್ರಮಾಣದಲ್ಲಿ ಇಳಿಕೆಯಾಗಿದೆ. ಗುಣಮಟ್ಟ ಆಧಾರದ ಮೇಲೆ ಕೇಕ್‌ಗಳು ಕೆ.ಜಿ.ಗೆ 200 ರೂ.ಗಳಿಂದ ಸಾವಿರಾರು ರೂ.ಗಳವರೆಗೆ ಮಾರಾಟವಾಗುತ್ತಿವೆ’

-ಪರಮೇಶ್, ಸಿದ್ದಿ ಅಯ್ಯಂಗಾರ್ ಬೇಕರಿ, ಶಿವಾಜಿನಗರ

ಪ್ರತಿ ವರ್ಷ ಬೆಲೆಗಳು ಏರುತ್ತವೆ. ಆದರೂ ವ್ಯಾಪಾರಕ್ಕೆ ಯಾವುದೇ ತೊಡಕಾಗಿಲ್ಲ. ಈ ಬಾರಿ ಕೇಂದ್ರ ಸರಕಾರ ಎನ್‌ಆರ್‌ಸಿಯನ್ನು ಜಾರಿ ಮಾಡಲು ಮುಂದಾಗಿರುವುದನ್ನು ವಿರೋಧಿಸಿ ಪ್ರತಿಭಟನೆಗಳು ನಡೆಸುತ್ತಿರುವುದರಿಂದ ಜನ ಹೆಚ್ಚು ಮಳಿಗೆಗಳ ಕಡೆಗೆ ಬರುತ್ತಿಲ್ಲ. ಇದರಿಂದ ಈ ಬಾರಿಯ ಸಂಪಾದನೆಯೂ ಕಡಿಮೆಯಾಗುತ್ತಿದೆ.

- ಸುನೀಲ್ ಕುಮಾರ್, ವ್ಯಾಪಾರಿ

Writer - ಬಾಬುರೆಡ್ಡಿ ಚಿಂತಾಮಣಿ

contributor

Editor - ಬಾಬುರೆಡ್ಡಿ ಚಿಂತಾಮಣಿ

contributor

Similar News