ಜಿಎಸ್‌ಟಿ ದರದಲ್ಲಿ ಏರಿಕೆ ಇಲ್ಲ: ಸುಶೀಲ್‌ ಕುಮಾರ್ ಮೋದಿ

Update: 2019-12-23 17:42 GMT

ಬೆಂಗಳೂರು, ಡಿ.23: ವರಮಾನದಲ್ಲಿ ಸ್ಥಿರತೆ ಸಾಧಿಸದ ಹೊರತು ಜಿಎಸ್‌ಟಿ ದರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಜಿಎಸ್‌ಟಿ ಮಂಡಳಿ ಅಧ್ಯಕ್ಷ, ಬಿಹಾರದ ಉಪಮುಖ್ಯಮಂತ್ರಿ ಸುಶೀಲ್‌ ಕುಮಾರ್ ಮೋದಿ ಹೇಳಿದ್ದಾರೆ. 

ಸೋಮವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ನಡೆದ ರಾಷ್ಟ್ರೀಯ ಜಿಎಸ್‌ಟಿ ಮಂಡಳಿಯ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಎಸ್‌ಟಿ ಜಾರಿಗೆ ಬಂದ ಮೇಲೆ ವಸ್ತುಗಳ ಬೆಲೆ ಜಿಎಸ್‌ಟಿ ಜಾರಿಗಿಂತ ಮೊದಲು ಇದ್ದ ಬೆಲೆಗಿಂತ ಕಡಿಮೆ ಇದೆ. ದೇಶದಲ್ಲಿ ಆರ್ಥಿಕ ಹಿಂಜರಿತ ಇರುವುದರಿಂದ ಜಿಎಸ್‌ಟಿ ದರಗಳನ್ನು ಏರಿಸುವುದಿಲ್ಲ. ಅಲ್ಲದೆ, ಜಿಎಸ್‌ಟಿ ದರಗಳನ್ನು ಏರಿಸುವ ಯಾವುದೇ ಪ್ರಸ್ತಾವ ಇಲ್ಲ. ಜಿಎಸ್‌ಟಿ ದರ ಏರಿಕೆ ವರದಿಗಳು ಬರೀ ವದಂತಿಗಳು ಎಂದು ಹೇಳಿದರು.

ಹೊಸ ವ್ಯವಸ್ಥೆ ಬರುವ ಎಪ್ರಿಲ್‌ನಿಂದ ಜಿಎಸ್‌ಟಿ ರಿಟನ್ಸ್ ಸಲ್ಲಿಕೆ ಸರಳವಾಗಲಿದ್ದು, ಇದು ಉದ್ಯಮ ಸ್ನೇಹಿ ರಿಟನ್ಸ್ ಸಲ್ಲಿಕೆಯಾಗಲಿದೆ. ನಕಲಿ ಜಿಎಸ್‌ಟಿ ಪ್ರಕರಣಗಳಿಗೆ ಕಡಿವಾಣ ಹಾಕಲು ಇನ್ನು ಮುಂದೆ ಜಿಎಸ್‌ಟಿಗೆ ಆಧಾರ್ ಜೋಡಣೆಯನ್ನು ಕಡ್ಡಾಯ ಮಾಡುವ ತೀರ್ಮಾನವನ್ನು ಕೈಗೊಳ್ಳಲಾಗಿದೆ. ಈಗಾಗಲೇ ಜಿಎಸ್‌ಟಿ ನೋಂದಣಿ ಮಾಡುವವರು ಸಹ ಆಧಾರ್ ಜೋಡಣೆಯನ್ನು ಮಾಡಿಕೊಳ್ಳಬೇಕಾಗುತ್ತದೆ ಎಂದು ತಿಳಿಸಿದರು.

ಕೆಲವು ಶೆಲ್ ಕಂಪೆನಿಗಳು(ನೋಂದಾಯಿತ ಕಚೇರಿ ಇಲ್ಲದ ಸಂಸ್ಥೆಗಳು) ಜಿಎಸ್‌ಟಿ ನೋಂದಣಿ ಮಾಡಿಕೊಂಡಿರುವುದು ಪತ್ತೆಯಾಗಿದೆ. ಇನ್ನು ಕೆಲವು ಕಂಪೆನಿಗಳು ಜಿಎಸ್‌ಟಿ ನೋಂದಣಿ ಮಾಡಿಕೊಂಡು ರಿಟನ್ಸ್ ಸಲ್ಲಿಸಿಲ್ಲ. ಇದುವರೆಗೂ ಇಂತಹ ಸುಮಾರು 24,86,000 ಜಿಎಸ್‌ಟಿಗಳನ್ನು ರದ್ದು ಮಾಡಲಾಗಿದೆ. ಸತತವಾಗಿ 2 ಜಿಎಸ್‌ಟಿ ರಿಟನ್ಸ್‌ಗಳನ್ನು ಸಲ್ಲಿಸದ ಉದ್ಯಮಿಗಳಿಗೆ ಎಲೆಕ್ಟ್ರಾನಿಕ್ ವೇ ಬಿಲ್ ಸಿಗುವುದಿಲ್ಲ. ಇವು ಸಿಗದಂತೆಯೂ ನಿರ್ಬಂಧ ಮಾಡಿದ್ದೇವೆ. ಪ್ರತಿಯೊಬ್ಬರೂ ಜಿಎಸ್‌ಟಿ ಸಲ್ಲಿಸುವುದು ಕಡ್ಡಾಯ ಎಂದು ತಿಳಿಸಿದರು. 5 ಕೋಟಿಗಿಂತ ಕಡಿಮೆ ವ್ಯವಹಾರ ನಡೆಸುವ ಉದ್ಯಮಿಗಳು 4 ತಿಂಗಳಿಗೊಮ್ಮೆ ಜಿಎಸ್‌ಟಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ. ಎಪ್ರಿಲ್‌ನಿಂದ ಜಾರಿಯಾಗುವ ಹೊಸ ಜಿಎಸ್‌ಟಿ ರಿಟನ್ಸ್ ವ್ಯವಸ್ಥೆಯ ಜತೆಗೆ ಎಲೆಕ್ಟ್ರಾನಿಕ್ ಬಿಲ್ಲಿಂಗ್ ವ್ಯವಸ್ಥೆಯನ್ನು ಜಾರಿ ಮಾಡಲು ತೀರ್ಮಾನಿಸಲಾಗಿದೆ. ಈ ಎಲೆಕ್ಟ್ರಾನಿಕ್ ಬಿಲ್ಲಿಂಗ್ ವ್ಯವಸ್ಥೆಯಿಂದ ಉದ್ಯಮಿಗಳು ಜಿಎಸ್‌ಟಿ ರಿಟನ್ಸ್‌ಗಳನ್ನು ಸಲ್ಲಿಸುವ ಅಗತ್ಯವೇ ಬೀಳುವುದಿಲ್ಲ. ತಾನೇ ತಾನಾಗಿ ಜಿಎಸ್‌ಟಿ ರಿಟನ್ಸ್ ಈ ಎಲೆಕ್ಟ್ರಾನಿಕ್ ಬಿಲ್ಲಿಂಗ್ ಮೂಲಕ ಸಂದಾಯವಾಗುತ್ತದೆ ಎಂದು ಹೇಳಿದರು.

1.5 ಕೋಟಿಗಿಂತ ಕಡಿಮೆ ವ್ಯವಹಾರ ಮಾಡುವವರಿಗೆ ಸರಕಾರವೇ ಉಚಿತವಾಗಿ ಬಿಲ್ಲಿಂಗ್ ಮತ್ತು ಅಕೌಟಿಂಗ್ ಸಾಫ್ಟ್‌ವೇರ್ ಅನ್ನು ಒದಗಿಸುತ್ತಿದೆ. ರಾಜ್ಯಗಳಿಗೆ ಜಿಎಸ್‌ಟಿ ಪರಿಹಾರಗಳನ್ನು ಸಕಾಲಕ್ಕೆ ಕಲ್ಪಿಸಲಾಗುತ್ತಿದೆ. ಕರ್ನಾಟಕದ ಜಿಎಸ್‌ಟಿ ಪರಿಹಾರ ನವೆಂಬರ್‌ವರೆಗೂ ನೀಡಲಾಗಿದೆ. ನವೆಂಬರ್, ಡಿಸೆಂಬರ್ ಬಾಕಿ ಇರಬಹುದು. ಏನೇ ಇರಲಿ, ಈ ಡಿಸೆಂಬರ್ ಒಳಗೆ ಎಲ್ಲ ರಾಜ್ಯಗಳಿಗೂ ಬಾಕಿ ಇರುವ ಜಿಎಸ್‌ಟಿ ಪರಿಹಾರವನ್ನು ನೀಡುವುದಾಗಿ ತಿಳಿಸಿದರು.

ಕರ್ನಾಟಕಕ್ಕೂ ಎಲ್ಲ ಜಿಎಸ್‌ಟಿ ಪರಿಹಾರ ನೀಡಲಾಗಿದೆ. ಜಿಎಸ್‌ಟಿ ಪರಿಹಾರ ನೀಡಿಲ್ಲ ಎಂದು ರಾಜ್ಯ ಸರಕಾರದಿಂದ ದೂರು ಬಂದಿಲ್ಲ. ಜಿಎಸ್‌ಟಿ ವ್ಯವಸ್ಥೆ ಜಾರಿಯಾದ ಮೇಲೆ ಹೊಸದಾಗಿ ಸುಮಾರು 66.79 ಲಕ್ಷ ಉದ್ಯಮಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಈಗ ದೇಶದಲ್ಲಿ ಒಟ್ಟು 1.71 ಲಕ್ಷ ಕೋಟಿ ಜಿಎಸ್‌ಟಿ ನೋಂದಣಿಯಾಗಿದೆ. ರಾಜ್ಯ ಸರಕಾರಗಳು ನಡೆಸುವ ಲಾಟರಿಗಳಿಗೆ ಶೇ. 28ರಷ್ಟು ಜಿಎಸ್‌ಟಿ ವಿಧಿಸಲಾಗಿದೆ. ಮಾರ್ಚ್ ತಿಂಗಳಿನಿಂದ ಇದು ಜಾರಿಯಾಗಲಿದೆ ಎಂದು ಹೇಳಿದರು.

ಜಿಎಸ್‌ಟಿ ಸಭೆಯಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಹರಿಯಾಣದ ಉಪಮುಖ್ಯಮಂತ್ರಿ ದುಶ್ಯಂತ್ ಚೌತಾಲ, ಒರಿಸ್ಸಾದ ಹಣಕಾಸು ಸಚಿವರು ಉಪಸ್ಥಿತರಿದ್ದರು.

‘ಇದೇ ಮೊದಲ ಬಾರಿಗೆ ಜಿಎಸ್‌ಟಿಗಳ ಕುಂದುಕೊರತೆಗಳನ್ನು ಆಲಿಸಲು ಪ್ರತಿ ರಾಜ್ಯದಲ್ಲೂ ಜಿಎಸ್‌ಟಿ ಅಧಿಕಾರಿಗಳು, ಉದ್ಯಮಿಗಳು ಮತ್ತು ಚಾರ್ಟೆಡ್ ಅಕೌಂಟೆಂಟ್‌ಗಳನ್ನು ಒಳಗೊಂಡ ಕುಂದುಕೊರತೆ ನಿವಾರಣಾ ಸಮಿತಿಗಳನ್ನು ರಚಿಸಲು ತೀರ್ಮಾನಿಸಲಾಗಿದೆ.’

-ಸುಶೀಲ್‌ ಕುಮಾರ್ ಮೋದಿ, ಜಿಎಸ್‌ಟಿ ಮಂಡಳಿ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News