ಸಂವಿಧಾನದ ರಕ್ಷಣೆಗಾಗಿ ಮುಸ್ಲಿಮರು ಪ್ರಾಣ ತ್ಯಾಗಕ್ಕೂ ಸಿದ್ಧ: ಸಯ್ಯದ್ ತನ್ವೀರ್ ಹಾಶ್ಮಿ
ಬೆಂಗಳೂರು, ಡಿ.23: ದೇಶದ ಸಂವಿಧಾನ ಉಳಿಸುವ ಹೋರಾಟದಲ್ಲಿ ಮುಸ್ಲಿಮರು ಭಾಗಿಯಾಗಲಿದ್ದು, ಪ್ರಾಣ ತ್ಯಾಗಕ್ಕೂ ಸಿದ್ಧರಾಗಿದ್ದೇವೆ ಎಂದು ಜಮಾತೆ ಅಹ್ಲೆ ಸುನ್ನತ್ ಕರ್ನಾಟಕದ ಅಧ್ಯಕ್ಷ ಮೌಲಾನ ಸಯ್ಯದ್ ತನ್ವೀರ್ ಹಾಶ್ಮಿ ಹೇಳಿದರು.
ಸೋಮವಾರ ನಗರದ ಮಿಲ್ಲರ್ಸ್ ರಸ್ತೆಯ ಖುದ್ದೂಸ್ ಸಾಹೇಬ್ ಈದ್ಗಾ ಮೈದಾನದಲ್ಲಿ ಸಿಎಎ-ಎನ್‌ಆರ್‌ಸಿ ವಿರೋಧಿಸಿ ನಡೆದ ಬೃಹತ್ ಸಮಾವೇಶವನ್ನುದ್ದೇಶಿಸಿ ಅವರು ಮಾತನಾಡಿದರು.
ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದಲ್ಲಿ ಎಲ್ಲರಿಗೂ ಸಮಾನತೆ ಹಕ್ಕು ನೀಡಲಾಗಿದೆ. ಎಲ್ಲಿಯೂ ಧರ್ಮದ ಮೇಲಿನ ಅಂಶಗಳಿಲ್ಲ. ಆದರೆ, ಇಂದಿನ ಕೇಂದ್ರ ಸರಕಾರ ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡಲು ಮುಂದಾಗಿದೆ. ಇದರಿಂದ ಸಂವಿಧಾನಕ್ಕೆ ಧಕ್ಕೆಯಾಗಿದ್ದು, ಇದನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ನಾವು ಹೋರಾಟ ನಡೆಸಲಿದ್ದೇವೆ ಎಂದು ತಿಳಿಸಿದರು.
ಈ ಭಾರತ ಮುಸ್ಲಿಮರದ್ದು, ಈ ದೇಶದ ಮುಸ್ಲಿಮರ ದೇಶಭಕ್ತಿ ಕುರಿತು ಯಾರು ಸಹ ಪ್ರಮಾಣಪತ್ರ ನೀಡುವ ಅಗತ್ಯವಿಲ್ಲ. ನಾವು ಯಾರೆಂದು ಸ್ವಾತಂತ್ರ್ಯದ ಇತಿಹಾಸ ಪುಟಗಳು ಹೇಳುತ್ತವೆ ಎಂದ ಅವರು, ಎನ್‌ಆರ್‌ಸಿ, ಸಿಎಎ ಸಂವಿಧಾನ ವಿರೋಧಿಯಾಗಿದ್ದು, ಇದನ್ನು ಸರಕಾರ ಕೈಬಿಡಬೇಕೆಂದು ಒತ್ತಾಯ ಮಾಡಿದರು.
ಕೆಲವರು ಪದೇ ಪದೇ ಪಾಕಿಸ್ತಾನಕ್ಕೆ ಹೋಗಿ ಎನ್ನುತ್ತಾರೆ. ಆದರೆ, ಹೇಳುವವರೇ ಒಮ್ಮೆ ಕುಟುಂಬದ ಜೊತೆ ಹೋಗಲಿ. ಅಲ್ಲದೆ, ಇದು ಮೈಸೂರು ಹುಲಿ ಟಿಪ್ಪು ಸುಲ್ತಾನ್ ಹುತಾತ್ಮನಾದ ಭೂಮಿ. ಅವರು ಇಡೀ ಮನುಕುಲಕ್ಕಾಗಿ ಹೋರಾಟ ಮಾಡಿದ್ದಾರೆ. ಆದರೆ, ಕೆಲವರು ರಾಜಕೀಯಕ್ಕಾಗಿ ಅವರ ಸಾಧನೆಯನ್ನು ಮರೆಮಾಚಲು ಯತ್ನಿಸುತ್ತಿದ್ದಾರೆ ಎಂದು ಸಯ್ಯದ್ ತನ್ವೀರ್ ಹಾಶ್ಮಿ ಹೇಳಿದರು.