ಬಂಧನ ಕೇಂದ್ರಕ್ಕೆ ಹೋಗುತ್ತೇನೆ ಹೊರತು ಯಾವುದೇ ದಾಖಲೆ ನೀಡಲ್ಲ: ಸಸಿಕಾಂತ್ ಸೆಂಥಿಲ್
ಬೆಂಗಳೂರು, ಡಿ.23: ಪೌರತ್ವ ತಿದ್ದುಪಡಿ ಕಾಯ್ದೆ ಎನ್‌ಆರ್‌ಸಿಗೆ ದೇಶಾದ್ಯಂತ ವ್ಯಕ್ತವಾಗಿರುವ ವಿರೋಧ ಕಂಡು ಪ್ರಧಾನಿ ನರೇಂದ್ರ ಮೋದಿ ವಿಚಲಿತಗೊಂಡಿದ್ದಾರೆ ಎಂದು ಮಾಜಿ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್ ಹೇಳಿದರು.
ಸೋಮವಾರ ನಗರದ ಮಿಲ್ಲರ್ಸ್ ರಸ್ತೆಯ ಖುದ್ದೂಸ್ ಸಾಹೇಬ್ ಈದ್ಗಾ ಮೈದಾನದಲ್ಲಿ ಸಿಎಎ-ಎನ್‌ಆರ್‌ಸಿ ವಿರೋಧಿಸಿ ನಡೆದ ಬೃಹತ್ ಸಮಾವೇಶವನ್ನುದ್ದೇಶಿಸಿ ಅವರು ಮಾತನಾಡಿದರು.
ದೇಶದ ಜನರು ಇಷ್ಟೊಂದು ಏಕತೆಯನ್ನು ಪ್ರದರ್ಶಿಸುತ್ತಾರೆ ಎಂದು ಪ್ರಧಾನಿ ಮೋದಿ ನಿರೀಕ್ಷಿಸಿರಲಿಲ್ಲ. ಕೇಂದ್ರ ಸರಕಾರ ಗೊತ್ತು ಗುರಿಯಿಲ್ಲದ ಸರಕಾರವಾಗಿದ್ದು, ಅಸ್ಸಾಂನ ಸಮಸ್ಯೆಯನ್ನು ತೆಗೆದುಕೊಂಡು, ಇಡೀ ದೇಶದ ಮೇಲೆ ಎನ್‌ಆರ್‌ಸಿ ಎಂದು ಜಾರಿ ಮಾಡಲು ಹೊರಟಿದ್ದಾರೆ ಎಂದು ದೂರಿದರು.
ಪತ್ರ ಬರೆದಿದ್ದೇನೆ: ಸಿಎಎ ಮತ್ತು ಎನ್‌ಆರ್‌ಸಿ ಜಾರಿಗೆ ಸಂಬಂಧಿಸಿದಂತೆ ನನ್ನನ್ನು ಯಾವುದೇ ದಾಖಲೆ ಕೇಳಿದರೂ ನೀಡುವುದಿಲ್ಲ. ಬದಲಿಗೆ, ಬಂಧನ ಕೇಂದ್ರಕ್ಕೆ ಹೋಗುತ್ತೇನೆ ಎಂದು ಈಗಾಗಲೇ ಕೇಂದ್ರ ಗೃಹ ಸಚಿವರಿಗೆ ಪತ್ರ ಬರೆದಿದ್ದೇನೆ ಎಂದು ಅವರು ತಿಳಿಸಿದರು.
ಎನ್‌ಆರ್‌ಸಿ ಜಾರಿಯಿಂದಾಗಿ ಅಸ್ಸಾಂನಲ್ಲಿ ಒಟ್ಟು 18 ಲಕ್ಷ ಮಂದಿಯನ್ನು ವಲಸಿಗರು ಎಂದು ಗುರುತಿಸಲಾಗಿದೆ. ಇದರಲ್ಲಿ ಒಟ್ಟು 11 ಲಕ್ಷ ಮಂದಿ ಹಿಂದೂಗಳಾಗಿದ್ದಾರೆ. ಹಾಗಾದರೆ, ಕೇಂದ್ರ ಸರಕಾರ ಯಾರಿಗೆ ಪೌರತ್ವ ಕಲ್ಪಿಸಲು ಹೊರಟಿದೆ ಎಂಬುದು ಹಾಸ್ಯಾಸ್ಪದ ಸಂಗತಿಯಾಗಿದೆ. ಎನ್‌ಆರ್‌ಸಿ ವಿಷಯದಲ್ಲಿ ಹಿಂದೂ, ಮುಸ್ಲಿಂರ ಒಗ್ಗಟ್ಟು ಒಡೆದು ಹೋಗುತ್ತದೆ ಎಂದು ಕೇಂದ್ರ ಸರಕಾರ ಪರಿಗಣಿಸಿತ್ತು. ಬದಲಿಗೆ, ಇಡೀ ದೇಶ ಒಂದಾಗಿದೆ. ಕೇಂದ್ರಕ್ಕೆ ಎನ್‌ಆರ್‌ಸಿ ಬದಲಿಗೆ ಘರ್ಷಣೆ ನಡೆಯಬೇಕು ಎಂಬ ಹಂಬಲವಿದೆ. ಘರ್ಷಣೆಗೆ ನಾವು ಅವಕಾಶ ನೀಡಿದರೆ, ಅವರಿಗೆ ವಿಜಯ ದೊರೆತಂತಾಗುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕೂ ಘರ್ಷಣೆಗಿಳಿಯದೆ ಅಹಿಂಸಾತ್ಮಕ ಹೋರಾಟದ ಮೂಲಕ ವಿಜಯ ಸಾಧಿಸೋಣ ಎಂದು ನುಡಿದರು.
ಈ ಪ್ರತಿಭಟನೆಗೆ ಚಾಲನೆ ನೀಡಿದ ದೇಶದ ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡುತ್ತಿರುವ ನಮ್ಮ ವಿದ್ಯಾರ್ಥಿಗಳಿಗೆ ನಾವು ಧನ್ಯವಾದ ಹೇಳಬೇಕು. ದೇಶದ ಜನರು ರೊಚ್ಚಿಗೆದ್ದಿದ್ದಾರೆ. ಇದನ್ನು ಕೇಂದ್ರ ಸರಕಾರ ಅರ್ಥ ಮಾಡಿಕೊಳ್ಳದೇ ಹೋದರೆ ಭವಿಷ್ಯದಲ್ಲಿ ದೊಡ್ಡ ಬೆಲೆ ತೆರಬೇಕಾಗುತ್ತದೆ. ನಮ್ಮ ಅಜ್ಜಿ, ತಾತ, ತಂದೆ, ತಾಯಿಗಳು ಈ ನೆಲೆದಲ್ಲಿ ಹುಟ್ಟಿ ನೂರಾರು ವರ್ಷಗಳಿಂದ ಬಾಳುತ್ತಿದ್ದಾರೆ. ಅವರ ಬಳಿಯೂ ದೇಶದ ಪೌರತ್ವಕ್ಕಾಗಿ ಜನನ ಪ್ರಮಾಣ ಪತ್ರ ಕೇಳುತ್ತೀರಾ? ಎಂದು ಪ್ರಶ್ನಿಸಿದ ಅವರು, ಕರ್ನಾಟಕ ಸೇರಿದಂತೆ ದೇಶದಲ್ಲಿ ಯಾವುದೇ ಕಾರಣಕ್ಕೂ ಎನ್‌ಆರ್‌ಸಿ ಜಾರಿಗೆ ತರಬಾರದು ಎಂದು ಒತ್ತಾಯಿಸಿದರು.