ಮೋದಿ ಸರಕಾರ ಎಷ್ಟೇ ಪ್ರಯತ್ನಿಸಿರೂ ಎನ್‌ಆರ್‌ಸಿ ಜಾರಿ ಸಾಧ್ಯವಿಲ್ಲ: ದಿನೇಶ್ ಗುಂಡೂರಾವ್

Update: 2019-12-23 16:14 GMT

ಬೆಂಗಳೂರು, ಡಿ.23: ದೇಶದ ಜನರ ವಿರೋಧ ಎದುರಿಸುತ್ತಿರುವ ಎನ್‌ಆರ್‌ಸಿಯನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ಎಷ್ಟೇ ಪ್ರಯತ್ನಿಸಿರೂ ಜಾರಿ ಮಾಡಲು ಸಾಧ್ಯವಿಲ್ಲ ಎಂದು ಮಾಜಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಸೋಮವಾರ ಗಾಂಧಿನಗರದಲ್ಲಿರುವ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರೇಷನ್‌ಕಾರ್ಡ್, ಆಧಾರ್ ಕಾರ್ಡ್ ಪಡೆಯಲು ತಿಂಗಳುಗಟ್ಟಲೆ ಅಲೆದಾಡುವ ಜನರು, ಪೌರತ್ವ ನಿರೂಪಿಸಲು ಸರಕಾರ ಕೇಳಿದ ದಾಖಲಾತಿ ಸಲ್ಲಿಸಲು ಎಷ್ಟೆಲ್ಲಾ ಪರದಾಡಬೇಕಾಗುತ್ತದೆ ಎಂದರು.

ನರೇಂದ್ರ ಮೋದಿ ಸರಕಾರ ಪೌರತ್ವ ತಿದ್ದುಪಡಿ ಕಾಯಿದೆ ಜಾರಿ ವಿರುದ್ಧದ ಪ್ರತಿಭಟನೆಗಳನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ. ರಾಜ್ಯದಲ್ಲೂ ಬಿಜೆಪಿ ಸರಕಾರ ಅನಗತ್ಯವಾಗಿ ನಿಷೇಧಾಜ್ಞೆ, ಕರ್ಫ್ಯೂ ಜಾರಿ ಮಾಡಿತು. ಅನಗತ್ಯವಾಗಿ ಗೋಲಿಬಾರ್ ಮಾಡಿದ್ದರಿಂದಾಗಿ ಇಬ್ಬರು ಅಮಾಯಕರು ಜೀವ ಕಳೆದುಕೊಂಡರು ಎಂದು ದಿನೇಶ್ ಗುಂಡೂರಾವ್ ಆರೋಪಿಸಿದರು.

ನರೇಂದ್ರ ಮೋದಿ ಸರಕಾರ ಪೌರತ್ವ ತಿದ್ದುಪಡಿ ಮಸೂದೆ ಜಾರಿಗೆ ಮೊದಲು ದೇಶದ ಜನರು, ಸರ್ವಪಕ್ಷಗಳ ಅಭಿಪ್ರಾಯವನ್ನು ಪಡೆಯಬೇಕಿತ್ತು. ಬಹುಮತ ಇದೆ ಎನ್ನುವ ಕಾರಣಕ್ಕೆ ತಮ್ಮ ತೀರ್ಮಾನವನ್ನ ಜನರ ಮೇಲೆ ಹೇರಿದರೆ ಅದರ ಪರಿಣಾಮ ಹೀಗೆಯೇ ಇರುತ್ತದೆ. ಪ್ರತಿಭಟನೆ ನಮ್ಮ ಹಕ್ಕು, ಶಾಂತಿಯುತವಾಗಿ ಹೋರಾಟ ಮಾಡೋಣ ಎಂದು ಅವರು ಹೇಳಿದರು.

ಪೌರತ್ವ ತಿದ್ದುಪಡಿ ಮಸೂದೆಯನ್ನು ಸಂಸತ್ತಿನಲ್ಲಿ ತರಾತುರಿಯಲ್ಲಿ ಮಂಡಿಸಿ ಅಂಗೀಕಾರ ಪಡೆಯುವ ಅನಿವಾರ್ಯತೆ ಏನಿತ್ತು? ಮಸೂದೆಯನ್ನು ಸಂಸತ್ತಿಗೆ ತರುವಾಗಲೇ ಅದನ್ನು ಒಂದು ಸಮಿತಿಗೆ ವಹಿಸಬೇಕಿತ್ತು, ಸಮಿತಿ ವರದಿಯ ಬಳಿಕ ಸಾಧಕ-ಬಾಧಕಗಳನ್ನು ಅರಿತು ಮಸೂದೆ ಜಾರಿಯ ಬಗ್ಗೆ ತೀರ್ಮಾನಿಸಬಹುದಿತ್ತು ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.

ಎನ್‌ಆರ್‌ಸಿಗೆ ದೇಶದಾದ್ಯಂತ ಪ್ರಬಲ ವಿರೋಧವಿದೆ. ಓರಿಸ್ಸಾ, ಬಿಹಾರ್, ಪಶ್ಚಿಮ ಬಂಗಾಳ ಸೇರಿ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಇದನ್ನು ತಮ್ಮ ರಾಜ್ಯದಲ್ಲಿ ಜಾರಿ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಹೀಗಿದ್ದಾಗಲೂ ಕೇಂದ್ರ ಸರಕಾರ ಎನ್‌ಆರ್‌ಸಿಯನ್ನು ಬಲವಂತವಾಗಿ ಜಾರಿ ಮಾಡಲು ಹೊರಟಿದ್ದು ಸರಿಯಲ್ಲ ಎಂದು ಅವರು ಅಭಿಪ್ರಾಯಪಟ್ಟರು.

ದೇಶದಲ್ಲಿ ನೂರೆಂಟು ಸಮಸ್ಯೆಗಳಿವೆ. ದೇಶದ ಅರ್ಥ ವ್ಯವಸ್ಥೆ ಕುಸಿದು ಹೋಗುತ್ತಿದೆ, ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ ಮತ್ತಷ್ಟು ಕೆಟ್ಟ ಸ್ಥಿತಿಗಳು ಬರುವ ಸಾಧ್ಯತೆ ಇದೆ. ದೇಶದ ಪರಿಸ್ಥಿತಿ ಸುಧಾರಿಸುವ ಬದಲಿಗೆ ಜನರಲ್ಲಿ ದ್ವೇಷ, ವೈಷಮ್ಯವನ್ನು ಸೃಷ್ಟಿಸಲಾಗುತ್ತಿದೆ. ಇದು ಉತ್ತಮ ಬೆಳವಣಿಗೆಯಲ್ಲ ಎಂದು ದಿನೇಶ್ ಗುಂಡೂರಾವ್ ಹೇಳಿದರು.

ಎನ್‌ಆರ್‌ಸಿ, ಸಿಎಎ ವಿರೋಧಿಸಿ ಪ್ರಗತಿಪರರು, ಬರಹಗಾರರು, ವಿದ್ಯಾರ್ಥಿ- ಯುವಜನರು, ಹಲವು ಸಂಘ-ಸಂಸ್ಥೆಗಳು ಪ್ರತಿಭಟನೆ ಮಾಡುತ್ತಿವೆ. ಈ ಯಾವ ಹೋರಾಟಗಳಲ್ಲೂ ಕಾಂಗ್ರೆಸ್ ನೇರವಾಗಿ ಭಾಗಿಯಾಗಿಲ್ಲ. ಆದರೂ ಇದೆಲ್ಲಾ ಕಾಂಗ್ರೆಸ್ ಪ್ರೇರಿತ ಎನ್ನುವಂತೆ ಬಿಜೆಪಿ ಸರಕಾರ ಅಪಪ್ರಚಾರ ಮಾಡುತ್ತಿದೆ ಎಂದು ಅವರು ಕಿಡಿಗಾರಿದರು.

ಹೊಸಬರಿಗೆ ಸಹಕಾರ ನೀಡಲು ಸಿದ್ಧ

15 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ತೀವ್ರ ಮುಖಭಂಗ ಅನುಭವಿಸಿದ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದನ್ನು ಸಮರ್ಥಿಸಿಕೊಂಡ ದಿನೇಶ್ ಗುಂಡೂರಾವ್, ಎಲ್ಲ ವಿಚಾರಗಳನ್ನು ಅರ್ಥ ಮಾಡಿಕೊಂಡೆ ನಾನು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದೆ. ಪಕ್ಷದ ಹೈಕಮಾಂಡ್ ರಾಜೀನಾಮೆ ವಿಚಾರದ ಕುರಿತು ತೀರ್ಮಾನ ಕೈಗೊಳ್ಳುತ್ತದೆ. ಒಂದು ಬಾರಿ ರಾಜೀನಾಮೆ ನೀಡಿದ ಬಳಿಕ ಮುಗಿಯಿತು. ಸಮರ್ಥರನ್ನು ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡುತ್ತಾರೆ ಎಂಬ ನಂಬಿಕೆಯಿದೆ. ಹೊಸಬರಿಗೆ ಅಗತ್ಯ ಸಹಕಾರ ನೀಡಲು ನಾವು ಸಿದ್ಧವಾಗಿದ್ದೇವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News