ಎಸ್ಸಿ ಸಮುದಾಯದ ಮೀಸಲಾತಿ ಶೇ.20ಕ್ಕೆ ಹೆಚ್ಚಿಸಲಿ: ಮಾಜಿ ಸಚಿವ ಎಚ್.ಆಂಜನೇಯ

Update: 2019-12-23 17:10 GMT

ಬೆಂಗಳೂರು, ಡಿ.23: ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ 101ಜಾತಿಗಳಿಗೆ ನೀಡುತ್ತಿರುವ ಮೀಸಲಾತಿ ಪ್ರಮಾಣವನ್ನು ಶೇ.15ರಿಂದ 20ಕ್ಕೆ ಹೆಚ್ಚಿಸಬೇಕೆಂದು ಮಾಜಿ ಸಚಿವ ಎಚ್.ಆಂಜನೇಯ ಒತ್ತಾಯಿಸಿದ್ದಾರೆ.

ಸೋಮವಾರ ದಲಿತ ಹಕ್ಕುಗಳ ಕಾವಲು ಸಮಿತಿ ನಗರದ ಯವನಿಕಾ ಸಭಾಂಗಣದಲ್ಲಿ ಪರಿಶಿಷ್ಟ ಜಾತಿ ಸಮುದಾಯಕ್ಕೆ ಮೀಸಲಾತಿ ಪ್ರಮಾಣ ಹೆಚ್ಚಳ ಕುರಿತಂತೆ ನ್ಯಾ.ನಾಗಮೋಹನದಾಸ್‌ರವರ ಏಕ ಸದಸ್ಯ ಆಯೋಗಕ್ಕೆ ಮನವಿ ಪತ್ರ ಸಲ್ಲಿಸಿ ಅವರು ಮಾತನಾಡಿದರು.

1950ರಲ್ಲಿ ಪರಿಶಿಷ್ಟ ಜಾತಿಗಿದ್ದ ಶೇ.15ರ ಮೀಸಲಾತಿ ಪ್ರಮಾಣ ಇಂದಿಗೂ ಅಷ್ಟೆ ಇದೆ. ಕಳೆದ 70ವರ್ಷಗಳಲ್ಲಿ ಪರಿಶಿಷ್ಟ ಜಾತಿಪಟ್ಟಿಗೆ 6 ಜಾತಿಯಿಂದ 101 ಜಾತಿಗಳು ಸೇರ್ಪಡೆಗೊಂಡಿವೆ. ಹಾಗೂ ಈ ಜಾತಿಗಳ ಜನಸಂಖ್ಯೆಯ ಪ್ರಮಾಣವು ಸಾಕಷ್ಟು ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಎಸ್ಸಿ ಸಮುದಾಯದ ಮೀಸಲಾತಿ ಪ್ರಮಾಣವನ್ನು ಶೇ.15ರಿಂದ 20ಕ್ಕೆ ಏರಿಕೆ ಮಾಡುವುದು ನ್ಯಾಯೋಚಿತವಾಗಿದೆ ಎಂದು ಅವರು ಹೇಳಿದರು.

ಎಸ್ಸಿ ಸಮುದಾಯಕ್ಕೆ ಶೇ.20ರಷ್ಟು ಮೀಸಲಾತಿಯನ್ನು ಯಾಕೆ ಹೆಚ್ಚಿಸಬೇಕೆಂಬುದರ ಕುರಿತು ನ್ಯಾ.ನಾಗಮೋಹನ ದಾಸ್‌ರವರ ಏಕ ಸದಸ್ಯ ಆಯೋಗಕ್ಕೆ ಪೂರಕವಾದ ಮಾಹಿತಿಯನ್ನು ಕೊಟ್ಟಿದ್ದೇವೆ. ಬ್ರಿಟಿಷರ ಆಳ್ವಿಕೆಯ ಆದೇಶಗಳು ಸೇರಿದಂತೆ ಇಲ್ಲಿಯವರೆಗೂ ಎಲ್ಲ ದಾಖಲೆಗಳನ್ನು ನೀಡಿದ್ದೇವೆ. ಅಗತ್ಯವಿದ್ದರೆ ಮತ್ತಷ್ಟು ದಾಖಲೆ, ಅದಕ್ಕೆ ಸಂಬಂಧಿಸಿದ ವಿವರಣೆಗಳನ್ನು ನೀಡಲು ಸಿದ್ಧರಿರುವುದಾಗಿ ಅವರು ಹೇಳಿದರು.

ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ ಬಹುತೇಕ ಸಮುದಾಯ ಇಲ್ಲಿಯವರೆಗೂ ಮೀಸಲಾತಿಯ ಸೌಲಭ್ಯವನ್ನು ಪಡೆದಿಲ್ಲ. ಆ ಜಾತಿ ಸಮುದಾಯಗಳನ್ನು ಒಳಗೊಂಡಂತೆ ಎಸ್ಸಿ ಪಟ್ಟಿಯಲ್ಲಿ 101 ಜಾತಿಗಳು ಸಾಮಾಜಿಕ, ಆರ್ಥಿಕ, ಔದ್ಯೋಗಿಕ, ಶೈಕ್ಷಣಿಕವಾಗಿ ಮುಂದೆ ಬರಲು ಅನುಕೂಲವಾಗುವಂತೆ ರಾಜ್ಯ ಸರಕಾರಕ್ಕೆ ವರದಿ ಸಲ್ಲಿಸಬೇಕೆಂದು ಅವರು ನಾಗಮೋಹನ ದಾಸ್‌ರಲ್ಲಿ ಮನವಿ ಮಾಡಿದರು.

ರಾಜ್ಯಸಭಾ ಸದಸ್ಯ ಎಚ್.ಹನುಮಂತಯ್ಯ ಮಾತನಾಡಿ, ಇತ್ತೀಚೆಗೆ ಕೇಂದ್ರ ಸರಕಾರ ಮೇಲ್ಜಾತಿಗಳ ಬಡವರಿಗೂ ಶೇ.10 ಮೀಸಲಾತಿಯನ್ನು ಜಾರಿಮಾಡಿದೆ. ಆ ಮೂಲಕ ಮೀಸಲಾತಿ ಪ್ರಮಾಣ ಶೇ.50ಕ್ಕಿಂತ ಹೆಚ್ಚಬಾರದೆಂಬ ಕಾಯ್ದೆಗೆ ತಿದ್ದುಪಡಿಯಾಗಿದೆ. ಈ ಹಿನ್ನೆಲೆಯಲ್ಲಿ ಎಸ್ಸಿ, ಎಷ್ಟಿ ಸಮುದಾಯದ ಮೀಸಲಾತಿ ಪ್ರಮಾಣದ ಹೆಚ್ಚಳಕ್ಕೆ ಯಾವುದೇ ತೊಡಕಾಗುವುದಿಲ್ಲವೆಂದು ತಿಳಿಸಿದರು.

ಹಿರಿಯ ಪತ್ರಕರ್ತ ಇಂದೂಧರ ಹೊನ್ನಾಪುರ ಮಾತನಾಡಿ, ಜನಸಂಖ್ಯೆಗೆ ಅನುಗುಣವಾಗಿ ಎಸ್ಸಿ, ಎಸ್ಟಿ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಬೇಕೆಂಬ ನಮ್ಮ ಬೇಡಿಕೆ ನ್ಯಾಯಯುತ ಹಾಗೂ ವೈಜ್ಞಾನಿಕತೆಯಿಂದ ಕೂಡಿದೆ. ಇದಕ್ಕೆ ನ್ಯಾ.ನಾಗಮೋಹನ್‌ದಾಸ್ ಪೂರಕವಾಗಿ ಸ್ಪಂದಿಸಲಿದ್ದಾರೆಂದು ವಿಶ್ವಾಸ ವ್ಯಕ್ತಪಡಿಸಿದರು.

ಕೆನೆಪದರ ಬೇಡ: ಎಸ್ಸಿ, ಎಸ್ಟಿ ಸಮುದಾಯದ ಮೀಸಲಾತಿಯಲ್ಲಿ ಕೆನೆಪದರ ಜಾರಿಮಾಡಬೇಕೆಂಬ ಮಾತುಗಳು ಕೇಳಿ ಬರುತ್ತಿವೆ. ಇದು ಜಾರಿಯಾದರೆ ಎಸ್ಸಿ, ಎಸ್ಟಿ ಸಮುದಾಯಕ್ಕೆ ಮತ್ತಷ್ಟು ಅನ್ಯಾಯವಾಗಲಿದೆ. ದಲಿತ ಸಮುದಾಯಕ್ಕೆ ಶೇ.100ರಷ್ಟು ಮೀಸಲಾತಿ ಜಾರಿಯಾದ ನಂತರ ಈ ಬಗ್ಗೆ ಚಿಂತನೆ ನಡೆಯಲಿ. ಈಗಲೇ ಬೇಡವೆಂದು ಅವರು ಹೇಳಿದರು.

ದಸಂಸ ಸಂಚಾಲಕ ಮಾವಳ್ಳಿ ಶಂಕರ್ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್‌ರವರ ತ್ಯಾಗ, ಶ್ರಮದ ಫಲವಾಗಿ ಮೀಸಲಾತಿ ಸಿಕ್ಕಿದೆ. ಅದನ್ನು ಉಳಿಸಿಕೊಂಡು ಹೋಗುವುದು ನಮ್ಮೆಲ್ಲರ ಕರ್ತವ್ಯವಾಗಬೇಕು. ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡಬೇಕೆಂಬ ನಮ್ಮ ಬೇಡಿಕೆ ನ್ಯಾಯಸಮ್ಮತವಾಗಿದೆ ಎಂದು ಅವರು ಹೇಳಿದರು.

ಈ ವೇಳೆ ಹಿರಿಯ ಕವಿ ಸಿದ್ದಲಿಂಗಯ್ಯ, ಮಾಜಿ ಸಚಿವೆ ಲಲಿತಾ ನಾಯಕ್, ವಕೀಲ ಅನಂತ ನಾಯ್ಕ, ಶಿಕ್ಷಣ ತಜ್ಞ ನಿರಂಜನಾರಾಧ್ಯ, ನಿವೃತ್ತ ಐಎಎಸ್ ಅಧಿಕಾರಿ ಶಿವರಾಮ್, ಇ.ವೆಂಕಟಯ್ಯ, ತಂಗರಾಜನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಎಸ್ಸಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಳ ಕುರಿತಂತೆ ಸಮುದಾಯದ ಸಾಹಿತಿಗಳು, ದಸಂಸ ಸಂಘಟನೆಗಳ ಮುಖಂಡರು ಹಾಗೂ ವಿವಿಧ ಪಕ್ಷಗಳ ಜನಪ್ರತಿನಿಧಿಗಳು ಪೂರಕವಾದ ದಾಖಲೆಗಳನ್ನು ನೀಡಿ ಮನವಿ ಸಲ್ಲಿಸಿದ್ದಾರೆ. ಈ ದಾಖಲೆಗಳು ನಮ್ಮ ವರದಿಗೆ ಪೂರಕವಾಗಲಿವೆ. ಕಾನೂನು ಚೌಕಟ್ಟಿನಲ್ಲಿ ಎಲ್ಲರಿಗೂ ನ್ಯಾಯಸಿಗುವ ನಿಟ್ಟಿನಲ್ಲಿ ರಾಜ್ಯ ಸರಕಾರಕ್ಕೆ ವರದಿ ಸಲ್ಲಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.

-ನ್ಯಾ.ನಾಗಮೋಹನ ದಾಸ್, ಅಧ್ಯಕ್ಷರು, ಎಸ್ಸಿ,ಎಷ್ಟಿ ಮೀಸಲಾತಿ ಹೆಚ್ಚಳ ಕುರಿತ ಪರಿಶೀಲನೆ ಆಯೋಗ

ಹಕ್ಕೊತ್ತಾಯಗಳು

-ಈಗಿರುವ ಮೀಸಲಾತಿಯನ್ನು ಶೇ.15ರಿಂದ 20ಕ್ಕೆ ಏರಿಸಬೇಕು.

-ಖಾಸಗಿ ವಲಯದ ಶಿಕ್ಷಣ ಮತ್ತು ಉದ್ಯೋಗಗಳಿಗೂ ಇದೇ ಮೀಸಲಾತಿಯನ್ನು ವಿಸ್ತರಿಸಬೇಕು.

-ಸುಳ್ಳು ಜಾತಿ ಪ್ರಮಾಣವನ್ನು ಸಲ್ಲಿಸಿ ಮೀಸಲಾತಿಯನ್ನು ದುರುಪಯೋಗ ಪಡಿಸಿಕೊಂಡಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News