×
Ad

ಮತಾಂತರ ವಿರುದ್ಧ ಕಾನೂನು ರೂಪಿಸಲು ​ಜಂಟಿ ಅಧಿವೇಶನದಲ್ಲಿ ಒತ್ತಾಯ: ಪರಿಷತ್ ಸದಸ್ಯ ಪ್ರಕಾಶ ರಾಠೋಡ್

Update: 2019-12-23 22:51 IST

ಬೆಂಗಳೂರು, ಡಿ.23: ಯುವಪೀಳಿಗೆಯ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಬಂಜಾರ ಜನಾಂಗದ ವಲಸೆ ತಪ್ಪಿಸಲು ಹಾಗೂ ಮತಾಂತರ ವಿರುದ್ಧ ಕಠಿಣ ಕಾನೂನು ರೂಪಿಸಲು ಜ.20 ರಂದು ಆರಂಭವಾಗುವ ಜಂಟಿ ಅಧಿವೇಶನದಲ್ಲಿ ಒತ್ತಾಯಿಸಲಾಗುವುದು ಎಂದು ವಿಧಾನಪರಿಷತ್ ಸದಸ್ಯ ಪ್ರಕಾಶ.ಕೆ. ರಾಠೋಡ್ ಹೇಳಿದ್ದಾರೆ.

ಸೋಮವಾರ ನಗರದ ನಯನ ಸಭಾಂಗಣದಲ್ಲಿ ಭಾರತೀಯ ಬಂಜಾರ ಸಂಘಟನಾ ಸಮಿತಿ ಸೋಮವಾರ ಆಯೋಜಿಸಿದ್ದ ‘ಬಂಜಾರಾ ಮತಾಂತರ ಪಿಡುಗು ಮತ್ತು ವಲಸೆ (ಗುಳೆ ಹೋಗುವುದು)’ ಕುರಿತ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ರಾಜಕಾರಣಿಗಳು ಪಕ್ಷಭೇದ ಮರೆತು ಜನಾಂಗವನ್ನು ಒಗ್ಗೂಡಿಸಲು ಹಾಗೂ ಬಂಜಾರ ಸಮುದಾಯದ ಶ್ರೇಯೋಭಿವೃದ್ಧಿಗಾಗಿ ಹೋರಾಡಬೇಕು. ಯುವಪೀಳಿಗೆ ಮತ್ತು ಭವಿಷ್ಯ ಗಮನದಲ್ಲಿಟ್ಟುಕೊಂಡು ಜನಾಂಗದ ಎಲ್ಲರೂ ಮತಾಂತರ ವಿರುದ್ಧ ಜನಾಂದೋಲನ ರೂಪಿಸಬೇಕು ಎಂದು ತಿಳಿಸಿದರು.

ಸಮುದಾಯದ ಎಲ್ಲರನ್ನೂ ಸಮಸ್ಯೆಯ ವಿರುದ್ಧ ಜಾಗೃತಿ ಮೂಡಿಸಬೇಕು. ಆಮಿಷಗಳಿಗೆ ಬಲಿಯಾಗಿ ಮತಾಂತರವಾಗದಂತೆ ತಡೆಯಬೇಕು. ಎಲ್ಲರೂ ಸಂಘಟಿತರಾಗಿ, ಒಟ್ಟಾಗಿ ಹೋರಾಟ ಮಾಡಬೇಕು. ಆ ಮೂಲಕ ಸರಕಾರದ ಗಮನ ಸೆಳೆದು, ಸಮಸ್ಯೆಗಳನ್ನು ಈಡೇರಿಸಿಕೊಳ್ಳಲು ಮುಂದಾಗಬೇಕು. ಸರಕಾರ ಉದ್ಯೋಗ ಸೇರಿದಂತೆ ಮೂಲ ಸೌಕರ್ಯ ಕಲ್ಪಿಸುವ ಮೂಲಕ ಗುಳೆ ಹೋಗುವುದನ್ನು ತಡೆಯಬೇಕು ಎಂದು ಒತ್ತಾಯಿಸಿದರು.

ಬಂಜಾರ ಜನಾಂಗದ ಮತಾಂತರದಿಂದ ಸಂಸ್ಕೃತಿ, ಪರಂಪರೆ ನಾಶವಾಗುತ್ತಿದೆ. ಈ ಬಗ್ಗೆ 2005ರಿಂದಲೂ ಸರಕಾರದ ಗಮನಕ್ಕೆ ತರಲಾಗುತ್ತಿದ್ದರೂ ಪ್ರಯೋಜನವಾಗಿಲ್ಲ. ಈ ಮತಾಂತರದ ವಿರುದ್ಧ ಕಠಿಣ ಕಾನೂನು ರೂಪಿಸಲು ಹಾಗೂ ವಿವಿಧ ವಲಯಗಳಲ್ಲಿ ಜನಾಂಗಕ್ಕೆ ಪ್ರಾತಿನಿಧ್ಯ ಒದಗಿಸುವ ನಿಟ್ಟಿನಲ್ಲಿ ಅಧಿವೇಶನದಲ್ಲಿ ಪ್ರಶ್ನಿಸಲಾಗುವುದು ಎಂದು ಪುನರುಚ್ಚರಿಸಿದರು.

ಐಎಎಸ್ ಅಧಿಕಾರಿ ಜಯರಾಂ ನಾಯಕ್ ಮಾತನಾಡಿ, ಒಂದು ಜನಾಂಗ, ಸಮಾಜದ ಸಂಸ್ಕೃತಿ ಉಳಿಸುವಲ್ಲಿ ಸಮುದಾಯದ ಒಗ್ಗಟ್ಟಿನ ಜತೆಗೆ ಶ್ರೀಗಳು, ಸ್ವಾಮೀಜಿಗಳ ಪಾತ್ರ ಮಹತ್ವದ್ದು. ಅಂತಹ ಸ್ವಾಮೀಜಿಗಳ ಕಾರ್ಯದಿಂದಲೇ ಬಂಜಾರ ಸಂಸ್ಕೃತಿ ಇನ್ನೂ ಜೀವಂತವಾಗಿದೆ. ಆದರೆ ಆಮಿಷಕ್ಕೆ ಒಳಗಾಗಿ ಜನ ಮತಾಂತರವಾಗುತ್ತಿದ್ದು, ಇದು ನಿಲ್ಲಬೇಕು ಎಂದರು.

ಸಮಾರಂಭದಲ್ಲಿ ಲಿಂಗಸೂರು ವಿಜಯಮಹಾಂತೇಶ್ವರ ಶಾಖಾಮಠದ ಸಿದ್ದಲಿಂಗ ಸ್ವಾಮೀಜಿ, ಗಬ್ಬೂರವಾಡಿ ಸೇವಾಲಾಲ ಬಂಜಾರ ಶಕ್ತಿಪೀಠದ ಬಳಿರಾಮ ಮಹಾರಾಜರು, ರಾಜ್ಯಾಧ್ಯಕ್ಷ ಪುಂಡಲೀಕ ಜ.ಪವಾರ, ಕಲಬುರ್ಗಿ ವಿವಿ ಪ್ರಾಧ್ಯಾಪಕ ಪಿ.ಕೆ.ಖಂಡೋಬಾ ಸೇರಿದಂತೆ ಹಲವರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News