ರಾಮಲೀಲಾ ಮೈದಾನದಲ್ಲಿ ಪ್ರಧಾನಿಯ ಸುಳ್ಳುಗಳ ಲೀಲೆ

Update: 2019-12-24 06:36 GMT

ಸತ್ಯವೇ ರಾಮನ ಆದರ್ಶ. ಆದರೆ ರವಿವಾರ ಪ್ರಧಾನಿ ನರೇಂದ್ರ ಮೋದಿಯವರು ರಾಮಲೀಲಾ ಮೈದಾನವನ್ನು ‘ಸುಳ್ಳುಗಳ ಮೈದಾನವಾಗಿ’ ಬದಲಾಯಿಸಿದರು. ದೇಶಾದ್ಯಂತ ಎರಡನೇ ಸ್ವಾತಂತ್ರ ಸಮರದ ರೂಪದಲ್ಲಿ ಎದ್ದಿರುವ ಸಿಎಎ ವಿರುದ್ಧದ ಪ್ರತಿಭಟನೆಯಿಂದ ಹತಾಶಗೊಂಡವರಂತಿದ್ದ ನರೇಂದ್ರ ಮೋದಿ, ಅವೆಲ್ಲವನ್ನೂ ತಮ್ಮ ಎಂದಿನ ಗಿಲೀಟು ಮಾತುಗಳ ಮೂಲಕ ಮರುಳು ಮಾಡಬಹುದು ಎಂದು ನಂಬಿದಂತಿತ್ತು. ಆದರೆ ಸತ್ಯದ ತೀಕ್ಷ್ಮತೆಯ ಮುಂದೆ ಸುಳ್ಳು ಕಳಾಹೀನವಾಗುತ್ತಿದೆ. ರವಿವಾರ ಅವರು ತಮ್ಮ ಮಾತುಗಳಲ್ಲಿ ಒಂದು ಧರ್ಮವನ್ನು ದೇಶದ ವಿರುದ್ಧ ಎತ್ತಿಕಟ್ಟುವ ಗರಿಷ್ಠ ಪ್ರಯತ್ನ ಮಾಡಿದರು. ಸಿಎಎ ವಿರುದ್ಧ ಪ್ರತಿಭಟನೆ ಮಾಡುತ್ತಿರುವವರು ಒಂದು ನಿರ್ದಿಷ್ಟ ಸಮುದಾಯ ಮಾತ್ರ ಎನ್ನುವುದನ್ನು ದೇಶಕ್ಕೆ ನಂಬಿಸುವ ಪ್ರಯತ್ನ ಅದರಲ್ಲಿತ್ತು. ಜೊತೆಗೆ ಆ ಧರ್ಮದ ಕುರಿತಂತೆ ಅಸಹನೆ, ವ್ಯಂಗ್ಯಗಳೂ ಇಣುಕುತ್ತಿತ್ತು. ಈ ಹಿಂದೆ ‘ಪ್ರತಿಭಟನೆ ಮಾಡುತ್ತಿರುವವರು ಯಾರು ಎನ್ನುವುದು ಅವರ ಬಟ್ಟೆಗಳಿಂದ ಗುರುತಿಸಬಹುದು’ ಎಂದಿದ್ದರು ಮೋದಿ. ಇಲ್ಲಿಯೂ ತಮ್ಮ ಮಾತುಗಳಲ್ಲಿ ‘‘ಅವರು’’ ಎನ್ನುವ ಪದವನ್ನು ಪ್ರಜ್ಞಾಪೂರ್ವಕವಾಗಿ ಹಲವೆಡೆ ಬಳಸಿದ್ದಾರೆ.

‘‘ಅವರ ಕೈಯಲ್ಲಿ ಯಾವತ್ತಾದರೂ ಭಯೋತ್ಪಾದನೆ ವಿರುದ್ಧವೂ ತ್ರಿವರ್ಣ ಧ್ವಜ ಹಾರಾಡಲಿ’’ ಎಂದು ಮೋದಿ ಆಶಿಸಿದ್ದಾರೆ. ಈ ದೇಶದ ಸ್ವಾತಂತ್ರಕ್ಕಾಗಿ ಪ್ರಾಣಾರ್ಪಣೆ ಮಾಡಿದ ಲಕ್ಷಾಂತರ ಜನರು ‘‘ಅವರ’’ಲ್ಲಿದ್ದಾರೆ ಎನ್ನುವ ಪ್ರಾಥಮಿಕ ಅರಿವೂ ಪ್ರಧಾನಿಯವರಿಗಿದ್ದಂತಿಲ್ಲ. ಈ ದೇಶಕ್ಕಾಗಿ ತ್ರಿವರ್ಣ ಧ್ವಜವನ್ನು ಹಿಡಿದು ಲಕ್ಷಾಂತರ ‘‘ಅವರು’’ಗಳು ಪ್ರಾಣಾರ್ಪಣೆ ಮಾಡಿದ್ದಾರೆ. ಆದರೆ ಹಾಗೆ ಹುತಾತ್ಮರಾದವರಲ್ಲಿ ನರೇಂದ್ರ ಮೋದಿಯವರ ಮೆಚ್ಚಿನ ‘ಸಾವರ್ಕರ್ ತಂಡದ ಸದಸ್ಯರ ಸಂಖ್ಯೆ ‘‘ಶೂನ್ಯ’’ ಎನ್ನುವುದು ದೇಶಕ್ಕೆ ಸ್ಪಷ್ಟವಾಗಿ ಗೊತ್ತಿದೆ. ನಾಗಪುರದ ಆರೆಸ್ಸೆಸ್ ಕಚೇರಿಯಲ್ಲಿ ಇತ್ತೀಚಿನವರೆಗೂ ರಾಷ್ಟ್ರಧ್ವಜ ಹಾರಿಸಲಾಗುತ್ತಿರಲಿಲ್ಲ. ಜನಸಾಮಾನ್ಯರು ಬಲವಂತವಾಗಿ ನಾಗಪುರ ಆರೆಸ್ಸೆಸ್ ಕೇಂದ್ರಕ್ಕೆ ನುಗ್ಗಿ ದೇಶದ ರಾಷ್ಟ್ರಧ್ವಜನವನ್ನು ಹಾರಿಸಿದ ಘಟನೆ ಮೋದಿಯವರಿಗೆ ಯಾರಾದರೂ ನೆನಪಿಸಬೇಕಾಗಿದೆ. ದೇಶದಲ್ಲಿ ಮಾತ್ರವಲ್ಲಿ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಭಯೋತ್ಪಾದನೆ ಸದ್ದು ಮಾಡಿದಾಗ 2008ರಲ್ಲಿ ದಾರುಲ್ ಉಲೂಮ್ ನೇತೃತ್ವದಲ್ಲಿ 6,000 ಮುಸ್ಲಿಮ್ ಧರ್ಮಗುರುಗಳು ಭಯೋತ್ಪಾದನೆಯ ವಿರುದ್ಧ ಫತ್ವಾ ಜಾರಿ ಮಾಡಿದ್ದರು.

ನರೇಂದ್ರ ಮೋದಿ ನಿಂತು ಭಾಷಣ ಮಾಡುತ್ತಿದ್ದ ಇದೇ ರಾಮಲೀಲಾ ಮೈದಾನದಲ್ಲಿ ಭಯೋತ್ಪಾದನೆಯ ವಿರುದ್ಧ ಮುಸ್ಲಿಮ್ ಧರ್ಮೀಯರು ಮತ್ತು ಧಾರ್ಮಿಕ ಮುಖಂಡರ ನೇತೃತ್ವದಲ್ಲೇ ಬೃಹತ್ ಸಮಾವೇಶ ನಡೆದಿದ್ದವು. ಇದೇ ಸಂದರ್ಭದಲ್ಲಿ ಕೇಸರಿ ಭಯೋತ್ಪಾದಕರು ಈ ದೇಶದಲ್ಲಿ ಹಲವೆಡೆ ಸ್ಫೋಟಗಳನ್ನು ನಡೆಸಿದರು. ಹಲವು ವಿಚಾರವಾದಿಗಳನ್ನು ಕೊಂದು ಹಾಕಿದರು. ಮಾಲೆಗಾಂವ್ ಸ್ಫೋಟದಲ್ಲಿ ಸನ್ಯಾಸಿ ವೇಷದಲ್ಲಿರುವ ಉಗ್ರರು ಭಾಗವಹಿಸಿರುವುದು ಬೆಳಕಿಗೆ ಬಂತು. ಆದರೆ ನರೇಂದ್ರ ಮೋದಿಯವರ ಪಕ್ಷವಾಗಲಿ, ಯಾವುದೇ ಸ್ವಾಮೀಜಿಗಳಾಗಲಿ ಇದರ ವಿರುದ್ಧ ರಾಷ್ಟ್ರಧ್ವಜವನ್ನು ಹಿಡಿದು ಖಂಡಿಸಿದ, ಮೆರವಣಿಗೆ ಮಾಡಿದ ಒಂದೇ ಒಂದು ಉದಾಹರಣೆಗಳಿಲ್ಲ. ವಿಪರ್ಯಾಸವೆಂದರೆ, ಮಾಲೆಗಾಂವ್ ಸ್ಫೋಟ ಆರೋಪಿಗೆ ಟಿಕೆಟ್ ನೀಡಿ ಆಕೆಯನ್ನು ಸಂಸದಳಾಗಿ ಆಯ್ಕೆ ಮಾಡಿಸಿ ಮೋದಿಯವರು ಸಂಸತ್‌ನಲ್ಲಿ ಕುಳ್ಳಿರಿಸಿದ್ದಾರೆ. ಹೀಗಿರುವಾಗ ನರೇಂದ್ರ ಮೋದಿ ಭಯೋತ್ಪಾದನೆಯ ವಿರುದ್ಧ ಯಾವ ನೈತಿಕತೆಯನ್ನು ಇಟ್ಟುಕೊಂಡು ಮಾತನಾಡುತ್ತಾರೆ.

ಸಿಎಎ ಮತ್ತು ಎನ್‌ಆರ್‌ಸಿ ಕುರಿತಂತೆ ‘ಅರ್ಬನ್ ನಕ್ಸಲರು’ ಸುಳ್ಳುಗಳನ್ನು ಹರಡುತ್ತಿದ್ದಾರೆ ಎಂದು ಹೇಳುವ ಮೂಲಕ, ಮಗದೊಂದೆಡೆ ದೇಶಾದ್ಯಂತ ಎದ್ದಿರುವ ಪ್ರತಿಭಟನಾಕಾರರನ್ನು ನಕ್ಸಲೀಯರನ್ನಾಗಿಸಲು ಪ್ರಯತ್ನಿಸುತ್ತಾರೆ. ‘‘ದೇಶಾದ್ಯಂತ ಎನ್‌ಆರ್‌ಸಿಯನ್ನು ಜಾರಿಗೊಳಿಸುತ್ತೇನೆಂದು ನಾನು ಎಂದೂ, ಎಲ್ಲಿಯೂ ಹೇಳಿಲ್ಲ’’ ಎಂದು ರಾಮಲೀಲಾ ಮೈದಾನದಲ್ಲಿ ನಿಂತು ಸತ್ಯದ ತಲೆಗೇ ಹೊಡೆದಿದ್ದಾರೆ. ಸಂಸತ್‌ನಲ್ಲಿ ಸ್ವತಃ ಗೃಹ ಸಚಿವ ಅಮಿತ್ ಶಾ ಅವರು ‘‘ಅಸ್ಸಾಮಿನ ಬಳಿಕ ದೇಶಾದ್ಯಂತ ಹಂತಹಂತವಾಗಿ ಎನ್‌ಆರ್‌ಸಿಯನ್ನು ಜಾರಿಗೊಳಿಸಲಾಗುತ್ತದೆ’’ ಎಂದಿದ್ದಾರೆ. ಇದು ಅಧಿಕೃತ ದಾಖಲೆಯಲ್ಲಿದೆ. ಹಾಗಾದರೆ ಅಮಿತ್ ಶಾರಿಗೂ ಮೋದಿ ಸರಕಾರಕ್ಕೂ ಯಾವುದೇ ಸಂಬಂಧವಿಲ್ಲವೇ? ಚುನಾವಣಾ ಭಾಷಣವೊಂದರಲ್ಲಿ ಅಮಿತ್ ಶಾ ಅವರು ಸ್ಪಷ್ಟವಾಗಿ ‘‘ಮೊದಲು ನಾವು ಸಿಎಎಯನ್ನು ಜಾರಿಗೊಳಿಸುತ್ತೇವೆ. ಬಳಿಕ ಇಡೀ ದೇಶದಲ್ಲಿ ಎನ್‌ಆರ್‌ಸಿಯನ್ನು ಅಳವಡಿಸುತ್ತೇವೆ.

ಆಮೇಲೆ ಎನ್‌ಆರ್‌ಸಿಯಲ್ಲಿ ಒಳಗೊಳ್ಳದವರನ್ನು ಹುಡುಕಿ ಹುಡುಕಿ ಹೊರ ಹಾಕುತ್ತೇವೆ’’ ಎಂಬ ಪ್ರಚೋದನಾಕಾರಿ ಮಾತುಗಳನ್ನಾಡಿರುವ ವೀಡಿಯೊಗಳು ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿವೆ. ‘‘ಗೃಹ ಸಚಿವ ಅಮಿತ್ ಶಾ ಆಡಿದ ಮಾತುಗಳಿಗೆ’’ ಈವರೆಗೆ ಯಾವುದೇ ಸ್ಪಷ್ಟೀಕರಣ ನೀಡಿರದ ನರೇಂದ್ರ ಮೋದಿ, ದೇಶಾದ್ಯಂತ ಎದ್ದಿರುವ ಪ್ರತಿಭಟನೆಯ ಅಲೆಗೆ ಬೆದರಿ ‘‘ಎನ್‌ಆರ್‌ಸಿ ಜಾರಿಗೊಳಿಸುತ್ತೇನೆಂದು ಎಲ್ಲೂ ಹೇಳಿಲ್ಲ’’ ಎಂದು ಸಾರ್ವಜನಿಕರ ಮುಂದೆ ಆಣೆ ಮಾಡುತ್ತಿದ್ದಾರೆ. ಉಳಿದಂತೆ ಅವರ ಎಂದಿನ ಕಪಟ ನಾಟಕಗಳಿಗೆ ರಾಮಲೀಲಾ ಮೈದಾನ ಸಾಕ್ಷಿಯಾಯಿತು. ಪ್ರತಿಭಟನಾಕಾರರು ದೇಶದ ಸೊತ್ತುಗಳಿಗೆ ಬೆಂಕಿ ಹಚ್ಚುತ್ತಿದ್ದಾರೆ ಎಂದು ಮೊಸಳೆ ಕಣ್ಣೀರು ಸುರಿಸುತ್ತಾ ‘‘ಬೇಕಾದರೆ ನನ್ನ ಪ್ರತಿಕೃತಿಗೆ ಬೆಂಕಿ ಹಚ್ಚಿ. ಆದರೆ ದೇಶದ ಸೊತ್ತುಗಳಿಗೆ ಬೆಂಕಿ ಹಚ್ಚಬೇಡಿ’’ ಎಂದು ಕರೆ ನೀಡಿದ್ದಾರೆ. ಇಂದು ದೇಶಾದ್ಯಂತ ಬೆಂಕಿ ಹಚ್ಚುವ ವಾತಾವರಣ ನಿರ್ಮಾಣವಾಗಿರುವುದಕ್ಕೆ ಯಾರು ಕಾರಣ ಎನ್ನುವುದರ ಬಗ್ಗೆ ಮೋದಿಯವರು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ‘ಪ್ರತಿಭಟನಾಕಾರರು ಬೆಂಕಿ ಹಚ್ಚುತ್ತಿದ್ದಾರೆ’ ಎಂದು ಮೋದಿ ಆರೋಪಿಸಿದ್ದಾರೆ. ಆದರೆ ದಿಲ್ಲಿಯ ಪ್ರತಿಭಟನೆಯ ಸಂದರ್ಭದಲ್ಲಿ ಪೊಲೀಸರೇ ಬಸ್‌ಗಳಿಗೆ ಬೆಂಕಿ ಹಚ್ಚಿದ ವೀಡಿಯೊಗಳು ಹೊರಬಿದ್ದಿದ್ದವು. ಈ ಬಗ್ಗೆ ಮೋದಿ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.

‘ಸಾರ್ವಜನಿಕ ಬಸ್‌ಗಳಿಗೆ ಬೆಂಕಿ ಹಚ್ಚಬೇಡಿ, ನನ್ನ ಪ್ರತಿಕೃತಿಗಳಿಗೆ ಬೆಂಕಿ ಹಚ್ಚಿ’ ಎಂದು ಮೋದಿಯವರು ಮೊದಲು ದಿಲ್ಲಿಯ ಪೊಲೀಸರಿಗೆ ಕರೆ ನೀಡಬೇಕಾಗಿದೆ. ‘‘ನನ್ನನ್ನು ನಂಬಿ, ಎನ್‌ಆರ್‌ಸಿ ಜಾರಿಗೊಳಿಸುವುದಿಲ್ಲ’’ ಎಂದು ಮೋದಿ ಅಂಗಲಾಚುತ್ತಿದ್ದಾರೆ. ಆದರೆ, ಸುಪ್ರೀಂಕೋರ್ಟ್‌ಗೆ ಮಾತುಕೊಟ್ಟು ಅದನ್ನು ಉಲ್ಲಂಘಿಸಿದ ಇತಿಹಾಸ ಬಿಜೆಪಿಗಿದೆ. ‘ಈ ದೇಶದಲ್ಲಿ ಒಂದೇ ಒಂದು ಡಿಟೆನ್ಶನ್ ಸೆಂಟರ್ ಇಲ್ಲ. ಅವೆಲ್ಲ ವಿರೋಧಿಗಳ ಅಪ ಪ್ರಚಾರ’ ಎಂದು ಹೇಳಿದ್ದಾರೆ. ಆದರೆ ಈ ದೇಶದಲ್ಲಿ ಡಿಟೆನ್ಶನ್ ಸೆಂಟರ್‌ಗಳು ಸಿದ್ಧವಾಗುತ್ತಿರುವ ಕುರಿತಂತೆ ಸಂಸತ್‌ನಲ್ಲಿ ಮೋದಿ ಸರಕಾರದ ಸಚಿವರೇ ಹೇಳಿಕೆ ನೀಡಿದ್ದಾರೆ. ನ. 29ರಂದು ರಾಜ್ಯಸಭೆಯಲ್ಲಿ ಕೇಳಿದ ಪ್ರಶ್ನೆಯೊಂದಕ್ಕೆ ಸಚಿವರು ಉತ್ತರಿಸುತ್ತಾ, ಅಸ್ಸಾಂನಲ್ಲಿ 6 ಡಿಟೆನ್ಶನ್ ಸೆಂಟರ್‌ಗಳಿರುವುದನ್ನು ಬಹಿರಂಗಪಡಿಸಿದ್ದಾರೆ. ಕರ್ನಾಟಕದಲ್ಲಿರುವ ಡಿಟೆನ್ಶನ್ ಸೆಂಟರ್ ಕುರಿತಂತೆ ಇಲ್ಲಿನ ಸರಕಾರ ಹೈಕೋರ್ಟ್‌ಗೆ ಮಾಹಿತಿ ನೀಡಿದೆ. ತನ್ನ ಸುಳ್ಳುಗಳ ಮೂಲಕವೇ ಮೋದಿ ರಾಮಲೀಲಾ ಮೈದಾನದಲ್ಲಿ ಬೆತ್ತಲೆಯಾಗಿದ್ದಾರೆ. ಅವರು ಭಾಷಣಗಳ ತಳಹದಿಯ ಮೇಲೆ ಕಟ್ಟಿ ನಿಲ್ಲಿಸಲು ಹೊರಟ ‘ವಿಶ್ವಗುರು’ವಿನ ಸೌಧ ಅರ್ಧದಲ್ಲೇ ಕುಸಿಯುತ್ತಿದೆ. ಅದಕ್ಕೆ ಸಾಕ್ಷಿಯಾಗಿ ಜಾರ್ಖಂಡ್‌ನ ಫಲಿತಾಂಶ ಹೊರಬಿದ್ದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News