ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿ 15 ವರ್ಷ ಪೂರೈಸಿದ ಧೋನಿ

Update: 2019-12-23 18:45 GMT

ಹೊಸದಿಲ್ಲಿ, ಡಿ.23: ಭಾರತದ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್. ಧೋನಿ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿ 15 ವರ್ಷಗಳನ್ನು ಪೂರೈಸಿದರು. 2004ರ ಡಿ.23ರಂದು ಧೋನಿ ಬಾಂಗ್ಲಾದೇಶ ವಿರುದ್ಧ ಕ್ರಿಕೆಟ್‌ಗೆ ಕಾಲಿಟ್ಟಿದ್ದರು. ಆ ಬಳಿಕ ಹಿಂತಿರುಗಿ ನೋಡದ ಅವರು ಭಾರತೀಯ ಕ್ರಿಕೆಟ್‌ನಲ್ಲಿ ಯಶಸ್ಸಿನ ಶಿಖರ ಏರಿದ್ದರು.

ಭಾರತದ ಅತ್ಯಂತ ಯಶಸ್ವಿ ನಾಯಕನಾಗಿ ಹೊರಹೊಮ್ಮಿರುವ 38ರ ಹರೆಯದ ಧೋನಿ ಕಳೆದ 15 ವರ್ಷಗಳಿಂದ ಭಾರತೀಯ ಕ್ರಿಕೆಟ್‌ನ ಪ್ರಮುಖ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ. ಚಾಣಾಕ್ಷತನದ ವಿಕೆಟ್‌ಕೀಪಿಂಗ್ ಹಾಗೂ ಕೌಶಲ್ಯಭರಿತ ಬ್ಯಾಟಿಂಗ್‌ನ ಮೂಲಕ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಧೋನಿ ಭಾರತ ಕ್ರಿಕೆಟ್ ತಂಡವನ್ನು ಹೊಸ ಎತ್ತರಕ್ಕೆ ಏರಿಸಿದ್ದಾರೆ.

ಧೋನಿಯ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನ ವೃತ್ತಿಜೀವನದ ಆರಂಭ ಉತ್ತಮವಾಗಿರಲಿಲ್ಲ.ಡಿ.23,2004ರಲ್ಲಿ ಬಾಂಗ್ಲಾದೇಶ ವಿರುದ್ಧ ಪಂದ್ಯದಲ್ಲಿ ತಾನೆದುರಿಸಿದ್ದ ಮೊದಲ ಎಸೆತದಲ್ಲೇ ರನೌಟ್ ಆಗಿದ್ದರು. ಆ ಬಳಿಕ ಕಠಿಣ ಶ್ರಮದಿಂದ ನಿಧಾನವಾಗಿ ಭಾರತದ ಕ್ರಿಕೆಟ್‌ನ ಅವಿಭಾಜ್ಯ ಅಂಗವಾಗಿ ರೂಪುಗೊಂಡರು. ಧೋನಿ 2011ರಲ್ಲಿ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದಿದ್ದ ವಿಶ್ವಕಪ್ ಫೈನಲ್‌ನಲ್ಲಿ ಶ್ರೀಲಂಕಾದ ವೇಗದ ಬೌಲರ್ ನುವಾನ್ ಕುಲಸೇಕರ ಬೌಲಿಂಗ್‌ನಲ್ಲಿ ಸಿಕ್ಸರ್ ಎತ್ತಿ ಭಾರತಕ್ಕೆ ದೀರ್ಘಕಾಲದ ಬಳಿಕ ಏಕದಿನ ವಿಶ್ವಕಪ್ ಗೆದ್ದುಕೊಟ್ಟಿದ್ದರು.ಈ ಮೂಲಕ ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ಹೃದಯ ಗೆದ್ದಿದ್ದರು.

ಭಾರತದ ಮಾಜಿ ನಾಯಕ ಹೆಚ್ಚಿನ ಎಲ್ಲ ದಾಖಲೆಗಳನ್ನು ನಿರ್ಮಿಸಿದ್ದಾರೆ. ಏಕದಿನ ವಿಶ್ವಕಪ್, ಟ್ವೆಂಟಿ-20 ವಿಶ್ವಕಪ್ ಹಾಗೂ ಚಾಂಪಿಯನ್ಸ್ ಟ್ರೋಫಿ ಜಯಿಸಿರುವ ಭಾರತದ ಏಕೈಕ ಅಂತರ್‌ರಾಷ್ಟ್ರೀಯ ನಾಯಕನಾಗಿದ್ದಾರೆ. ಟೀಮ್ ಇಂಡಿಯಾವು ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್‌ನಲ್ಲಿ ಐಸಿಸಿ ರ್ಯಾಂಕಿಂಗ್‌ನಲ್ಲಿ ನಂ.1 ಸ್ಥಾನಕ್ಕೇರಲು ನೇತೃತ್ವವಹಿಸಿದ್ದರು. ಧೋನಿ ಭಾರತವನ್ನು 90 ಟೆಸ್ಟ್, 350 ಏಕದಿನ ಹಾಗೂ 98 ಟ್ವೆಂಟಿ-20 ಪಂದ್ಯಗಳಲ್ಲಿ ಪ್ರತಿನಿಧಿಸಿದ್ದು, ಕ್ರಮವಾಗಿ 4,876, 10,773 ಹಾಗೂ 1,617 ರನ್ ಗಳಿಸಿದ್ದಾರೆ. 2019ರ ವಿಶ್ವಕಪ್‌ನ ಸೆಮಿ ಫೈನಲ್‌ನಲ್ಲಿ ಸೋತು ಭಾರತ ನಿರ್ಗಮಿಸಿದ ಬಳಿಕ ಧೋನಿ ಕ್ರಿಕೆಟ್ ಮೈದಾನಕ್ಕೆ ವಾಪಸಾಗಿಲ್ಲ. ತನ್ನ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನ ಭವಿಷ್ಯದ ಯೋಜನೆಯ ಬಗ್ಗೆ ಇನ್ನೂ ಗುಟ್ಟು ಬಿಟ್ಟುಕೊಟ್ಟಿಲ್ಲ. ಕ್ರಿಕೆಟ್‌ಗೆ ವಿದಾಯ ಹೇಳುವ ನಿರ್ಧಾರ ಧೋನಿಗೆ ಬಿಟ್ಟ ವಿಚಾರವಾಗಿರುವ ಕಾರಣ ಮುಂದಿನ ವರ್ಷ ನಡೆಯಲಿರುವ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಭಾರತದ ಪರ ಅಡುವ ಸಾಧ್ಯತೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News