ಮಂಗಳೂರು ಗಲಭೆ ಒಂದು ವ್ಯವಸ್ಥಿತ ಸಂಚು: ಗೃಹ ಸಚಿವ ಬೊಮ್ಮಾಯಿ

Update: 2019-12-24 13:54 GMT

ಬೆಂಗಳೂರು, ಡಿ. 24: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ನಡೆದ ಗಲಭೆ ಒಂದು ವ್ಯವಸ್ಥಿತ ಸಂಚು. ಇದರ ತನಿಖೆ ನಂತರ ತಪ್ಪಿತಸ್ಥರು ಯಾರೇ ಆಗಿದ್ದರೂ ಕಾನೂನಿನ ಅನ್ವಯ ಶಿಕ್ಷೆಯಾಗಲಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಎಚ್ಚರಿಸಿದ್ದಾರೆ.

ಮಂಗಳವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಪೊಲೀಸರ ಮೇಲೆ ದಾಳಿ ಮಾಡಿದವರು ಅಮಾಯಕರಾಗಿರಲು ಸಾಧ್ಯವೇ? ಮೇಲ್ನೋಟಕ್ಕೆ ಇದೊಂದು ವ್ಯವಸ್ಥಿತ ಸಂಚು ಎಂಬುದು ಗೊತ್ತಾಗಿದೆ. ಹೀಗಾಗಿ ಸಿಐಡಿ ಮತ್ತು ನ್ಯಾಯಾಂಗ ತನಿಖೆಗೆ ಆದೇಶ ಮಾಡಿದ್ದೇವೆಂದು ಸ್ಪಷ್ಟಣೆ ನೀಡಿದರು.

ಗಲಭೆ ಸೃಷ್ಟಿಸುವವರಲ್ಲಿ ಎರಡು ರೀತಿ ಇದ್ದಾರೆ. ಒಂದು ತಂಡ ಕೇರಳದಿಂದ ಬಂದಿದ್ದರೆ ಮತ್ತೊಂದು ತಂಡ ಕಾಲೇಜಿಗೆ ಪ್ರವೇಶ ಪಡೆಯಲು ಬಂದವರು ಎಂದ ಅವರು, ಪೊಲೀಸರ ಪ್ರಾಥಮಿಕ ತನಿಖೆಯಿಂದ ಈ ಗಲಭೆಯು ವ್ಯವಸ್ಥಿತ ಸಂಚು ಎಂಬುದು ಬಯಲಾಗಿದೆ ಎಂದರು.

ತನಿಖೆಯಿಂದ ತಪ್ಪಿತಸ್ಥರು ಯಾರು ಎಂಬುದು ಗೊತ್ತಾಗಲಿದೆ. ಕೃತ್ಯದಲ್ಲಿ ಯಾರೇ ಭಾಗಿಯಾಗಿದ್ದರೂ ಕಾನೂನಿನಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂದು ಎಚ್ಚರಿಸಿದ ಅವರು, ಅಮಾಯಕರಾಗಿದ್ದರೆ ಪೊಲೀಸರ ಮೇಲೆ ಕಲ್ಲು ಎಸೆಯುವಂತಹ ದುಷ್ಕೃತ್ಯ ನಡೆಸುತ್ತಿರಲಿಲ್ಲ ಎಂದು ಹೇಳಿದರು.

ಎನ್‌ಎಚ್‌ಆರ್‌ಸಿ ಮಾರ್ಗಸೂಚಿ ಅನ್ವಯ ಉಡುಪಿ ಜಿಲ್ಲಾಧಿಕಾರಿಯವರು ಮ್ಯಾಜಿಸ್ಟ್ರೇಟ್ ತನಿಖೆ ನಡೆಸಲಿದ್ದಾರೆ. ಗಲಭೆ ಏಕೆ ಆಯಿತು? ಯಾರು ಮಾಡಿದರು? ಎಂಬುದರ ಬಗ್ಗೆ ತನಿಖೆ ನಡೆಸಲಿದ್ದು, ಮುಕ್ತವಾಗಿ ತನಿಖೆ ನಡೆಸಲು ಸರಕಾರ ಅಗತ್ಯ ಸಹಕಾರ ನೀಡಲಿದೆ ಎಂದರು.

ಮಾಜಿ ಸಚಿವ ಯು.ಟಿ.ಖಾದರ್ ಮೇಲೆ ಎಫ್‌ಐಆರ್ ದಾಖಲಾಗಿದೆ. ಯಾವ ಸೆಕ್ಷನ್‌ನಡಿ ದೂರು ದಾಖಲಾಗಿದೆಯೋ ಅದರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ. ಮಂಗಳೂರು ಪೊಲೀಸರು ಕಾನೂನಿನ ಪ್ರಕಾರವೇ ಕ್ರಮ ಕೈಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು.

ಸಿಎಂ ಯಡಿಯೂರಪ್ಪ ಘಟನೆ ಕುರಿತಂತೆ ಪೊಲೀಸರಿಗೆ ಕ್ಲೀನ್‌ಚೀಟ್ ನೀಡಿಲ್ಲ. ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತ್ರ ಪ್ರತಿಭಟನೆ ನಡೆಸಿದವರು ಅಮಾಯಕರು ಎಂದಿದ್ದಾರೆ. ತನಿಖೆ ನಂತರ ಸತ್ಯಾಸತ್ಯತೆ ತಿಳಿಯಲಿದೆ. ಪೊಲೀಸರ ಹೇಳಿಕೆಯನ್ನು ಆಧರಿಸಿ ಸಿಎಂ ಪ್ರತಿಕ್ರಿಯೆ ನೀಡಿದ್ದಾರೆ ಎಂದರು.

‘ಎಚ್.ಡಿ.ಕುಮಾರಸ್ವಾಮಿ ನಮ್ಮ ಸಹೋದರ. ಪ್ರೀತಿಯಿಂದ ನನ್ನ ರಾಜೀನಾಮೆಗೆ ಆಗ್ರಹಿಸಿರಬಹುದು. ಇಂತಹ ಸಮಯದಲ್ಲಿ ಅವರು ನಮ್ಮ ಜೊತೆ ಇರಬೇಕೆಂದು ಕೋರುವೆ. ಹಿಂದೆ ರಾಜ್ಯದಲ್ಲಿ ಅನೇಕ ಗಲಭೆಗಳು ನಡೆದಾಗ ಯಾರೊಬ್ಬರೂ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಟ್ಟಿಲ್ಲ. ಕಾಂಗ್ರೆಸ್-ಜೆಡಿಎಸ್ ಅವಧಿಯಲ್ಲೂ ಗೋಲಿಬಾರ್ ಪ್ರಕರಣಗಳು ನಡೆದಿವೆ.’

-ಬಸವರಾಜ ಬೊಮ್ಮಾಯಿ, ಗೃಹ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News