×
Ad

'ಮಂಗಳೂರು ಗೋಲಿಬಾರ್' ನ್ಯಾಯಾಂಗ ತನಿಖೆಗೆ ಆದೇಶಿಸದಿದ್ದರೆ ಹೋರಾಟ: ಸಿ.ಎಂ.ಇಬ್ರಾಹಿಂ

Update: 2019-12-24 20:52 IST

ಬೆಂಗಳೂರು, ಡಿ. 24: ಮಂಗಳೂರು ಗೋಲಿಬಾರ್ ಪ್ರಕರಣದ ಕುರಿತು ನ್ಯಾಯಾಂಗ ತನಿಖೆಗೆ ಆದೇಶಿಸದಿದ್ದರೆ ಡಿ.28ರಿಂದ ಕಾಂಗ್ರೆಸ್ ಪಕ್ಷ ಹೋರಾಟ ನಡೆಸಲಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ ಇಂದಿಲ್ಲಿ ಎಚ್ಚರಿಕೆ ನೀಡಿದ್ದಾರೆ.

ಮಂಗಳವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಮುಸ್ಲಿಮ್ ಸಮುದಾಯದವರಿಗೆ ಯಾವುದೇ ಚಿಂತೆ ಇಲ್ಲ. ಸ್ವಾತಂತ್ರ ಹೋರಾಟ ಮೊದಲು ಆರಂಭಿಸಿದ್ದು ಮುಸ್ಲಿಮರೇ. ಇದೀಗ ಅಂಬೇಡ್ಕರ್ ರೂಪಿಸಿರುವ ಸಂವಿಧಾನ ರಕ್ಷಣೆಗಾಗಿ ಸಿಎಎ ವಿರುದ್ಧವೂ ಮುಸ್ಲಿಮರೇ ಹೋರಾಟ ಆರಂಭ ಮಾಡಿದ್ದಾರೆಂದು ಹೇಳಿದರು.

ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಗೃಹ ಸಚಿವ ಬಸವರಾಜ ಬೊಮ್ಮಾಯಿ ಗೋಲಿಬಾರ್ ಬಗ್ಗೆ ಸುಖಾಸುಮ್ಮನೆ ಹೇಳಿಕೆ ನೀಡುವುದು ಸರಿಯಲ್ಲ. ಸತ್ಯಾಂಶ ಹೊರ ಬರಬೇಕು. ಇಲ್ಲವಾದರೆ ಸರಕಾರಕ್ಕೆ ಭವಿಷ್ಯದಲ್ಲಿ ಸಂಕಷ್ಟ ಎದುರಾಗಲಿದೆ ಎಂದು ಇಬ್ರಾಹಿಂ ಎಚ್ಚರಿಕೆ ನೀಡಿದರು.

ಈ ಹಿಂದೆ ಸಂಸದ ಅನಂತಕುಮಾರ್ ಹೆಗಡೆ ‘ನಾವು ಅಧಿಕಾರಕ್ಕೆ ಬಂದಿರುವುದೇ ಸಂವಿಧಾನ ಬದಲಿಸಲು’ ಎಂದು ಹೇಳಿಕೆ ನೀಡಿದ್ದರು. ಸಿಎಎ ವಿರುದ್ಧದ ಹೋರಾಟ ಯಾವುದೇ ಒಂದು ಜಾತಿ ಮತ್ತು ಧರ್ಮದವರ ಹೋರಾಟ ಅಲ್ಲ. ಬದಲಿಗೆ ಇದು ಸಂವಿಧಾನದ ಉಳಿಸಲು ನಡೆಯುತ್ತಿರುವ ಚಳವಳಿ ಎಂದು ಇಬ್ರಾಹಿಂ ಹೇಳಿದರು.

ಸಿಎಎ ವಿರುದ್ಧದ ಹೋರಾಟ ಯಡಿಯೂರಪ್ಪ ವಿರುದ್ಧ ಅಲ್ಲ. ಬದಲಿಗೆ ಮೋದಿ ಮತ್ತು ಅಮಿತ್ ಶಾ ವಿರುದ್ಧ. ಈಗಾಗಲೇ ಆಂಧ್ರ, ಪಶ್ಚಿಮ ಬಂಗಾಳ, ಬಿಹಾರ ಮುಖ್ಯಮಂತ್ರಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಯಡಿಯೂರಪ್ಪನವರು ಸಿಎಎ ಜಾರಿಯಿಂದ ಹಿಂದೆ ಸರಿಯಬೇಕೆಂದು ಇಬ್ರಾಹಿಂ ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News