ಭಾರತದ ಕ್ರಮ ಸಂಪೂರ್ಣ ಅನುಚಿತ: ಜೈಶಂಕರ್‌ರಿಂದ ಭೇಟಿಗೆ ಅವಕಾಶ ನಿರಾಕರಿಸಲ್ಪಟ್ಟಿದ್ದ ಅಮೆರಿಕದ ಸಂಸದೆ

Update: 2019-12-24 15:57 GMT
ಫೋಟೊ ಕೃಪೆ: twitter.com/PramilaJayapal

ಹೊಸದಿಲ್ಲಿ,ಡಿ.24: ಕಾರ್ಯಕ್ರಮಕ್ಕೆ ತನ್ನನ್ನು ಆಹ್ವಾನಿಸಿದ್ದಕ್ಕಾಗಿ ಅಮೆರಿಕದ ಸಂಸದರೊಂದಿಗೆ ಪೂರ್ವ ನಿಗದಿತ ಭೇಟಿಯನ್ನು ನಿರಾಕರಿಸಿದ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರ ನಿರ್ಧಾರವು ಅಚ್ಚರಿಯನ್ನು ಮೂಡಿಸಿದೆ ಎಂದು ಅಮೆರಿಕದ ಕಾಂಗ್ರೆಸ್ ಸದಸ್ಯೆ,ಭಾರತೀಯ-ಅಮೆರಿಕನ್ ಪ್ರಮೀಳಾ ಜಯಪಾಲ್ ಅವರು ವಾಷಿಂಗ್ಟನ್ ಪೋಸ್ಟ್‌ನಲ್ಲಿಯ ಲೇಖನವೊಂದರಲ್ಲಿ ಹೇಳಿದ್ದಾರೆ.

ಪೌರತ್ವ (ತಿದ್ದುಪಡಿ) ಕಾಯ್ದೆ ಮತ್ತು ಉದ್ದೇಶಿತ ರಾಷ್ಟ್ರವ್ಯಾಪಿ ಎನ್‌ಆರ್‌ಸಿ ಬಗ್ಗೆಯೂ ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್‌ನ ಯಾವ ಸದಸ್ಯರು ಸಭೆಯಲ್ಲಿ ಭಾಗವಹಿಸಬಹುದು ಎನ್ನುವುದನ್ನು ಆದೇಶಿಸಲು ವಿದೇಶಿ ಸರಕಾರವು ಪ್ರಯತ್ನಿಸುವುದು ಸಂಪೂರ್ಣವಾಗಿ ಅನುಚಿತವಾಗಿದೆ ಎಂದು ಕಳೆದ ತಿಂಗಳು ಜಮ್ಮು-ಕಾಶ್ಮೀರದಲ್ಲಿ ಮಾನವ ಹಕ್ಕುಗಳನ್ನು ಎತ್ತಿಹಿಡಿಯುವಂತೆ ಭಾರತಕ್ಕೆ ಸೂಚಿಸಿ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ ಉಭಯಪಕ್ಷೀಯ ನಿರ್ಣಯವನ್ನು ಮಂಡಿಸಿದ್ದ ಜಯಪಾಲ ಹೇಳಿದ್ದಾರೆ. ತನ್ನ ಟೀಕಾಕಾರರನ್ನು ಸಭೆಯಲ್ಲಿ ಪಾಲ್ಗೊಳ್ಳಲು ಅವಕಾಶ ನಿರಾಕರಿಸುವುದು ಯಾವುದೇ ಮಹಾನ್ ಪ್ರಜ್ರಾಭುತ್ವದ ಪಾಲಿಗೆ ದೌರ್ಬಲ್ಯದ ಸಂಕೇತವಾಗಿದೆ. ಇದರಿಂದಾಗಿ ಉಭಯ ದೇಶಗಳು ವೌಲಿಕ ಸಂವಾದ ಮತ್ತು ಭಿನ್ನಾಭಿಪ್ರಾಯ ಅಭಿವ್ಯಕ್ತಿಯ ಉತ್ತಮ ಅವಕಾಶವನ್ನು ಕಳೆದುಕೊಂಡಿವೆ ಎಂದೂ ಅವರು ಬರೆದಿದ್ದಾರೆ.

2017ರಲ್ಲಿ ಕಾಂಗ್ರೆಸ್ ನಿಯೋಗದ ಭೇಟಿಯ ಸಂದರ್ಭದಲ್ಲಿ ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಕುರಿತು ತಾನು ವಿಷಯಗಳನ್ನು ಪ್ರಸ್ತಾಪಿಸಿದ್ದೆ ಮತ್ತು ಜೈಶಂಕರ್ ಕೂಡ ಆ ಸಭೆಯಲ್ಲಿ ಉಪಸ್ಥಿತರಿದ್ದರು. ದುರದೃಷ್ಟವಶಾತ್ ಅಲ್ಲಿಂದೀಚೆಗೆ ಭಾರತದಲ್ಲಿ ಪರಿಸ್ಥಿತಿ ತೀವ್ರ ಹದಗೆಟ್ಟಿದೆ. ದೇಶಾದ್ಯಂತ ಅಲ್ಪಸಂಖ್ಯಾತ ಸಮುದಾಯಗಳ ವಿರುದ್ಧ ದಾಳಿಗಳು ಹೆಚ್ಚುತ್ತಿವೆ. ಭಾರತ ಸರಕಾರದಿಂದ ಕಾಶ್ಮೀರದಲ್ಲಿ ಮಾಧ್ಯಮ ನಿರ್ಬಂಧ ಹೇರಿಕೆಯು ಈಗ ಯಾವುದೇ ಪ್ರಜಾಪ್ರಭುತ್ವದಲ್ಲಿ ಅತ್ಯಂತ ಸುದೀರ್ಘ ಕಾಲದ ಅಂತರ್ಜಾಲ ಕಡಿತವಾಗಿದೆ.

ಕೆಲವು ಸ್ಥಿರ ದೂರವಾಣಿಗಳು ಪುನರಾರಂಭಗೊಂಡಿವೆಯಾದರೂ ,ಮಿಲಿಯಾಂತರ ಜನರು ಈಗಲೂ ಮೊಬೈಲ್ ಮತ್ತು ಅಂತರ್ಜಾಲ ಸೇವೆಗಳಿಂದ ವಂಚಿತರಾಗಿದ್ದಾರೆ ಎಂದು ಡೆಮಾಕ್ರಟಿಕ್ ಪಕ್ಷದ ನಾಯಕಿ ಜಯಪಾಲ್ ಬರೆದಿದ್ದಾರೆ.

ಕಾಶ್ಮೀರ ನಿರ್ಣಯ ಮಂಡನೆಗೆ ಮೊದಲು ಅಮೆರಿಕದಲ್ಲಿ ಭಾರತದ ರಾಯಭಾರಿಯಾಗಿರುವ ಹರ್ಷವರ್ಧನ ಶ್ರಿಂಗ್ಲಾ ಅವರೊಂದಿಗೆ ತನ್ನ ಎರಡು ಭೇಟಿಗಳು ಪೂರ್ವನಿಗದಿಯಾಗಿದ್ದವು. ಆದರೆ ರಾಯಭಾರಿ ಕಚೇರಿಯು ಅವುಗಳನ್ನು ರದ್ದುಗೊಳಿಸಿತ್ತು ಎಂದೂ ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News