ಕಾರು ಚಾಲಕನ ಕೊಲೆ ಪ್ರಕರಣ: ಆರೋಪಿಗೆ ಗುಂಡೇಟು

Update: 2019-12-24 16:19 GMT

ಬೆಂಗಳೂರು, ಡಿ.24: ಕಾರು ಚಾಲಕನ ಕೊಲೆ ಪ್ರಕರಣ ಸಂಬಂಧ ಆರೋಪಿ ಕಾಲಿಗೆ ಪಿಸ್ತೂಲಿನಿಂದ ಗುಂಡು ಹಾರಿಸಿ, ಬಂಧಿಸುವಲ್ಲಿ ಇಲ್ಲಿನ ಮಹಾಲಕ್ಷ್ಮೀ ಲೇಔಟ್ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.

ಪೊಲೀಸರ ಗುಂಡೇಟು ಎರಡು ಕಾಲಿಗೆ ತಗುಲಿ ಗಂಭೀರವಾಗಿ ಗಾಯಗೊಂಡಿರುವ ಲಗ್ಗೆರೆಯ ಬಾಬು (24) ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಡಿ.10 ರಂದು ರಾತ್ರಿ 10:45ರ ವೇಳೆ ಲಗ್ಗೆರೆ ಮುಖ್ಯರಸ್ತೆಯ ಮಾರುತಿ ವೈನ್ಸ್ ಬಳಿ ಚಾಲಕ ಕ್ಯಾಬ್ ರಘು (28) ಎಂಬವರು ಕಾರಿನಿಂದ ಇಳಿದು ನಡೆದುಕೊಂಡು ಹೋಗುತ್ತಿದ್ದಾಗ ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿ, ಕೊಲೆಗೈದು ದುಷ್ಕರ್ಮಿಗಳು ಪರಾರಿಯಾಗಿದ್ದರು. ಈ ಸಂಬಂಧ ನಂದಿನಿ ಲೇಔಟ್ ಪೊಲೀಸರು ತನಿಖೆ ಕೈಗೊಂಡಾಗ ಕೃತ್ಯದಲ್ಲಿ ಮೂವರು ಭಾಗಿಯಾಗಿರುವುದು ಕಂಡುಬಂದಿದೆ.

ಆರೋಪಿಗಳ ಪೈಕಿ ನರಸಿಂಹನ್ ಎಂಬಾತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಬಾಬು ಹಾಗೂ ಪ್ರಭಾಕರನ್ ಜೊತೆ ಸೇರಿ ರಘುನನ್ನು ಕೊಲೆ ಮಾಡಿರುವುದನ್ನು ಬಾಯಿಬಿಟ್ಟಿದ್ದ. ಆತ ನೀಡಿದ ಮಾಹಿತಿ ಮೇರೆಗೆ ಪ್ರಭಾಕರನನ್ನು ಬಂಧಿಸಿ ಕೊಲೆಗಾರ ಬಾಬುಗಾಗಿ ಮಹಾಲಕ್ಷ್ಮೀ ಲೇಔಟ್‌ನ ಸಬ್ ಇನ್ಸ್‌ಪೆಕ್ಟರ್ ವೆಂಕಟರಮಣಪ್ಪ, ಮುಖ್ಯ ಪೇದೆ ಅನಂತ ರಾಜು ಅವರನ್ನೊಳಗೊಂಡ ವಿಶೇಷ ತಂಡ ಕಾರ್ಯಾಚರಣೆ ಕೈಗೊಂಡಿತ್ತು. ಜಾಲಹಳ್ಳಿಯ ಎಚ್‌ಎಂಟಿ ಹಳೇ ಬಸ್ ನಿಲ್ದಾಣದ ಬಳಿ ಬಾಬು ತಲೆಮರೆಸಿ ಕೊಂಡಿರುವ ಖಚಿತ ಮಾಹಿತಿ ಆಧರಿಸಿ ಮಂಗಳವಾರ ಮುಂಜಾನೆ ಅಲ್ಲಿಗೆ ತೆರಳಿದ್ದು, ಆತನನ್ನು ಬಂಧಿಸಲು ಹೋದಾಗ ಚುರಿಯಿಂದ ವೆಂಕಟರಮಣಪ್ಪ ಹಾಗೂ ಅನಂತರಾಜು ಮೇಲೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.

ಆತನಿಂದ ತಪ್ಪಿಸಿಕೊಂಡ ವೆಂಕಟರಮಣಪ್ಪ ಅವರು ಗಾಳಿಯಲ್ಲಿ ಒಂದು ಸುತ್ತು ಗುಂಡುಹಾರಿಸಿ ಶರಣಾಗುವಂತೆ ಸೂಚನೆ ನೀಡಿದ್ದರೂ, ಮತ್ತೆ ಹಲ್ಲೆಗೆ ಮುಂದಾದಾಗ ಆತ್ಮ ರಕ್ಷಣೆಗಾಗಿ ಇನ್ನೂ ಎರಡು ಸುತ್ತು ಗುಂಡು ಹಾರಿಸಿದ ಪರಿಣಾಮ ಬಾಬು ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News