ಬೆಂಗಳೂರು: ಮುತ್ತೂಟ್ ಫೈನಾನ್ಸ್ ಕಚೇರಿಗೆ ಕನ್ನ; 70 ಕೆಜಿ ಚಿನ್ನಾಭರಣ ಕಳವು
ಬೆಂಗಳೂರು, ಡಿ.24: ನಗರದ ವ್ಯಾಪ್ತಿಯ ಮುತ್ತೂಟ್ ಫೈನಾನ್ಸ್ ಕಚೇರಿಯ ಗೋಡೆ ಕೊರೆದ ದುಷ್ಕರ್ಮಿಗಳು, ಸುಮಾರು 70 ಕೆಜಿ ಚಿನ್ನಾಭರಣ ಕಳವು ಮಾಡಿದ್ದಾರೆ ಎಂದು ಇಲ್ಲಿನ ಪುಲಿಕೇಶಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸೋಮವಾರ ರಾತ್ರಿ ಇಲ್ಲಿನ ಪುಲಿಕೇಶಿ ನಗರದ ಮೇಲ್ಸೇತುವೆ ಸಮೀಪದಲ್ಲಿರುವ ಮುತ್ತೂಟ್ ಫೈನಾನ್ಸ್ ಶಾಖೆಯ ಕಚೇರಿ ಗೋಡೆ ಕೊರೆದು ನುಗ್ಗಿರುವ ದುಷ್ಕರ್ಮಿಗಳು, ಕಚೇರಿಯೊಳಗಿದ್ದ 70 ಕೆಜಿ ಚಿನ್ನಾಭರಣ ದೋಚಿ ಪರಾರಿಯಾಗಿದೆ ಎಂದು ಹೇಳಲಾಗುತ್ತಿದೆ.
ಮಂಗಳವಾರ ಬೆಳಗ್ಗೆ ಚಿನ್ನಾಭರಣ ಕಳುವಾಗಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಈ ಸಂಬಂಧ ಮೊಕದ್ದಮೆ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ನಿರ್ಲಕ್ಷ್ಯ ಕಾರಣ: ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಈ ಘಟನೆಗೆ ಮುತ್ತೂಟ್ ಫೈನಾನ್ಸ್ ನಿರ್ಲಕ್ಷವೇ ಕಾರಣವಾಗಿದೆ. ಘಟನೆ ನಡೆದ ವೇಳೆ, ಅಲ್ಲಿನ ಸ್ಥಳೀಯ ಸಿಬ್ಬಂದಿ ಇರಲಿಲ್ಲ. ಜತೆಗೆ, ಸಿಸಿಟಿವಿಗಳು ಕಾರ್ಯ ನಿರ್ವಹಿಸುತ್ತಿರಲಿಲ್ಲ ಎಂದು ಹೇಳಿದರು.
ಕಚೇರಿಯ ಶೌಚಾಲಯವಿದ್ದ ಗೋಡೆ ಕೊರೆದು ಚಿನ್ನಾಭರಣ ದರೋಡೆ ಮಾಡಿದ್ದಾರೆ. ಅಲ್ಲದೆ, 16 ಕೋಟಿ ಮೌಲ್ಯದ ಚಿನ್ನಾಭರಣ ಕಳ್ಳತನವಾಗಿದ್ದು, ಈ ಸಂಬಂಧ ಭದ್ರತಾ ಸಿಬ್ಬಂದಿ ಅನ್ನು ವಶಕ್ಕೆ ಪಡೆದು, ತನಿಖೆ ಮುಂದುವರೆಸಲಾಗಿದೆ ಎಂದರು.