ಕಾನೂನು ವಿದ್ಯಾರ್ಥಿನಿ ಅತ್ಯಾಚಾರ, ಹತ್ಯೆ ಪ್ರಕರಣ: ಸಿಬಿಐ ತನಿಖೆಗೆ ಒತ್ತಾಯ

Update: 2019-12-24 17:00 GMT

ಬೆಂಗಳೂರು, ಡಿ.24: ದಲಿತ ಸಮುದಾಯಕ್ಕೆ ಸೇರಿದ ಕಾನೂನು ವಿದ್ಯಾರ್ಥಿನಿ ವಿನುತಾಳ ಹತ್ಯೆಯಲ್ಲಿ ಪೊಲೀಸರು ಭಾಗಿಯಾಗಿದ್ದಾರೆ. ಆಕೆಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ. ಈ ಬಗ್ಗೆ ಸಿಬಿಐ ತನಿಖೆಯಾಗಬೇಕು ಎಂದು ಆರ್‌ಪಿಐ- ಡಿಎಸ್‌ಎಸ್ ಸಂಘಟನೆಯ ರಾಜ್ಯಾಧ್ಯಕ್ಷ ಡಾ. ಮೋಹನ್‌ರಾಜ್ ಆಗ್ರಹಿಸಿದ್ದಾರೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿನುತಾ ಎಂಬ ಕಾನೂನು ವಿದ್ಯಾರ್ಥಿನಿಯನ್ನು ಅತ್ಯಾಚಾರಗೈದು ಹತ್ಯೆ ಮಾಡಲಾಗಿದೆ. ತನಗೆ ಕೊಲೆ ಬೆದರಿಕೆ ಇದೆ ಎಂದು ಆಕೆ ಸಾಕಷ್ಟು ಬಾರಿ ವೈಯಾಲಿ ಕಾವಲ್ ಪೊಲೀಸರಿಗೆ ದೂರು ನೀಡಿದರೂ ಅದನ್ನು ನಿರ್ಲಕ್ಷಿಸಲಾಗಿದೆ. ಕಳೆದ ಎರಡು ತಿಂಗಳ ಹಿಂದೆ ವಿನುತಾ ತನಗೆ ಅನ್ಯಾಯವಾಗಿರುವ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದರು. ಆದರೆ ಪೊಲೀಸರಾದಿಯಾಗಿ ಯಾರ ರಕ್ಷಣೆ ದೊರೆತಿಲ್ಲ. ವಿನುತಾಳನ್ನು ಹತ್ಯೆ ಮಾಡಿದ ಸುಪಾರಿ ಹಂತಕರು ರಾಜಾರೋಷವಾಗಿ ಓಡಾಡುತ್ತಿದ್ದಾರೆ. ಅಮಾಯಕರನ್ನು ಹತ್ಯೆಯ ಸಂಬಂಧ ಬಂಧಿಸಲಾಗಿದೆ. ನಿಜವಾದ ಅಪರಾಧಿಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.

ಪ್ರಕರಣವನ್ನು ವೈಯಾಲಿಕಾವಲ್ ಪೊಲೀಸ್ ಠಾಣೆಯಿಂದ ಇತರ ಪೊಲೀಸ್ ಠಾಣೆಗೆ ವರ್ಗಾಯಿಸಿ ತನಿಖೆಗೆ ಸೂಕ್ತವಾದ ಅಧಿಕಾರಿ ನೇಮಿಸಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಅವರಲ್ಲಿ ಮನವಿ ಮಾಡುತ್ತೇವೆ. ಪ್ರಕರಣದ ಇತ್ಯರ್ಥಕ್ಕೆ ವಿಶೇಷ ನ್ಯಾಯಾಲಯವನ್ನು ಸ್ಥಾಪಿಸಿ ಒಂದು ತಿಂಗಳಲ್ಲಿ ಅಪರಾಧಿಗಳನ್ನು ಗಲ್ಲಿಗೇರಿಸಬೇಕು ಎಂದು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News