ಹೊಸಕೋಟೆಯಲ್ಲಿ ಅಪ್ಪ-ಮಗನ ಆಟ ತಡೆಯಲು ಸಾಧ್ಯವಿಲ್ಲವೇ?: ಬಿಎಸ್‌ವೈ ಎದುರು ಎಂಟಿಬಿ ನಾಗರಾಜ್ ಬೇಸರ

Update: 2019-12-26 15:51 GMT
ಬಿಎಸ್‌ವೈ ಜೊತೆ ಎಂಟಿಬಿ ನಾಗರಾಜ್ ( ಫೈಲ್ ಚಿತ್ರ) 

ಬೆಂಗಳೂರು, ಡಿ.26: ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಸಂಸದ ಬಿ.ಎನ್.ಬಚ್ಚೇಗೌಡ ಹಾಗೂ ಅವರ ಪುತ್ರ ನೂತನ ಶಾಸಕ ಶರತ್ ಬಚ್ಚೇಗೌಡ ಆಟವನ್ನು ತಡೆಯಲು ನಿಮ್ಮಿಂದ ಸಾಧ್ಯವಿಲ್ಲವೇ? ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಎದುರು ಮಾಜಿ ಸಚಿವ ಎಂಟಿಬಿ ನಾಗರಾಜ್ ಬೇಸರ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

ಗುರುವಾರ ನಗರದ ಡಾಲರ್ಸ್‌ ಕಾಲನಿಯಲ್ಲಿರುವ ಮುಖ್ಯಮಂತ್ರಿ ನಿವಾಸಕ್ಕೆ ಭೇಟಿ ನೀಡಿ, ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಉಪ ಚುನಾವಣೆಯ ಫಲಿತಾಂಶ ಪ್ರಕಟಗೊಂಡ ಬಳಿಕ ನಡೆಯುತ್ತಿರುವ ವಿದ್ಯಾಮಾನಗಳ ಕುರಿತು ಎಂಟಿಬಿ ನಾಗರಾಜ್ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

ಇದೇ ವೇಳೆ ಬಚ್ಚೇಗೌಡ ಹಾಗೂ ಶರತ್ ಬಚ್ಚೇಗೌಡ ವಿರುದ್ಧ ಎಂಟಿಬಿ ನಾಗರಾಜ್ ದೂರು ಸಲ್ಲಿಸಿದ್ದಾರೆ ಎಂದು ಹೇಳಲಾಗುತ್ತಿದೆ. ನನ್ನ ಅಧಿಕಾರಾವಧಿಯಲ್ಲಿ ಹೊಸಕೋಟೆ ವಿಧಾನಸಭಾ ಕ್ಷೇತ್ರಕ್ಕೆ ಮಂಜೂರು ಮಾಡಿಸಿಕೊಂಡಿದ್ದ ಅನುದಾನದ ಕಾಮಗಾರಿಗಳಿಗೆ ಶರತ್ ಬಚ್ಚೇಗೌಡ ಗುದ್ದಲಿ ಪೂಜೆ ನೆರವೇರಿಸುವ ಮೂಲಕ ತಮ್ಮ ಸಾಧನೆ ಎಂಬಂತೆ ಬಿಂಬಿಸಿಕೊಳ್ಳುತ್ತಿದ್ದಾರೆ ಎಂದು ಅವರು ಅಸಮಾಧಾನ ಹೊರಹಾಕಿದ್ದಾರೆ ಎಂದು ತಿಳಿದು ಬಂದಿದೆ.

ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿ ಇನ್ನೂ 15 ದಿನ ಆಗಿಲ್ಲ. ಆಗಲೇ ಕ್ಷೇತ್ರದೆಲ್ಲೆಡೆ ನನ್ನ ಅವಧಿಯಲ್ಲಿ ಮಂಜೂರಾಗಿದ್ದ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸುತ್ತಿದ್ದಾರೆ. ಇದು ಯಾವ ನ್ಯಾಯ? ನನ್ನನ್ನು ಕೇಳದೆ ಹೊಸಕೋಟೆ ಕುರಿತು ಯಾವ ತೀರ್ಮಾನವನ್ನು ಕೈಗೊಳ್ಳುವುದಿಲ್ಲ ಎಂದು ನೀವು ನೀಡಿದ್ದ ಭರವಸೆ ಏನಾಯಿತು ಎಂದು ಎಂಟಿಬಿ ನಾಗರಾಜ್ ಪ್ರಶ್ನಿಸಿದ್ದಾರೆ ಎನ್ನಲಾಗಿದೆ.

ಸಂಸದ ಬಚ್ಚೇಗೌಡರಿಂದಾಗಿ ಹೊಸಕೋಟೆ ಕ್ಷೇತ್ರದಲ್ಲಿ ನನ್ನ ಹಿಡಿತ ಕೈ ತಪ್ಪುತ್ತಿದೆ. ಯಾವುದೇ ಕಾರಣಕ್ಕೂ ಇದಕ್ಕೆ ಅವಕಾಶ ಕೊಡಬಾರದು. ಆದಷ್ಟು ಶೀಘ್ರದಲ್ಲಿ ಸಂಪುಟ ವಿಸ್ತರಣೆ ಮಾಡಿ, ನನಗೆ ಸಚಿವ ಸ್ಥಾನ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ ಎಂದು ತಿಳಿದು ಬಂದಿದೆ.

ಬಚ್ಚೇಗೌಡ ಸಂಸದರಾಗಿ ಆರು ತಿಂಗಳಾಗಿದೆ. ಆದರೆ, ಕ್ಷೇತ್ರಕ್ಕೆ ಈವರೆಗೆ ಒಂದು ರೂಪಾಯಿ ಅನುದಾನ ತರುವಲ್ಲಿಯೂ ವಿಫಲವಾಗಿದ್ದಾರೆ. ಅವರ ಪುತ್ರ ಮಾತ್ರ ನಾನು ತಂದ ಹಣದಲ್ಲಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ಮಾಡುತ್ತಿದ್ದಾರೆ ಎಂದು ಎಂಟಿಬಿ ನಾಗರಾಜ್ ಹೇಳಿದ್ದಾರೆ.

ಹೊಸಕೋಟೆ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಸಂಸದ ಬಚ್ಚೇಗೌಡ, ಪಕ್ಷದ ಅಧಿಕೃತ ಅಭ್ಯರ್ಥಿಯಾಗಿದ್ದ ನನ್ನನ್ನು ಕಡೆಗಣಿಸಿ, ತಮ್ಮ ಪುತ್ರನಿಗೆ ಬೆಂಬಲ ನೀಡಿದರು. ಆದರೆ, ಈವರೆಗೆ ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಮುಖ್ಯಮಂತ್ರಿ ಎದುರು ಅವರು ಬೇಸರ ವ್ಯಕ್ತಪಡಿಸಿ ಹೊರ ನಡೆದರು ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News