ಬಿಎಸ್‌ವೈಗೆ ದಿಲ್ಲಿ ನಾಯಕರಿಂದ ಕರೆ ಬಂದಿದ್ದರಿಂದ ಪರಿಹಾರದ ಚೆಕ್ ಗೆ ತಡೆ: ಡಿ.ಕೆ.ಶಿವಕುಮಾರ್

Update: 2019-12-26 16:04 GMT

ಬೆಂಗಳೂರು, ಡಿ.26: ಕಾಂಗ್ರೆಸ್ ಪಕ್ಷದಲ್ಲಿ ಐದು ನಿಮಿಷಕ್ಕೆ ಟೋಪಿ ಬದಲಾಗುತ್ತದೆ. ಇಲ್ಲಿ ಬ್ಲ್ಯಾಕ್‌ಮೇಲ್, ಕಂಡಿಷನ್ ರಾಜಕಾರಣ ನಡೆಯಲ್ಲ. ಯಾರಾದರೂ ಬ್ಲ್ಯಾಕ್‌ಮೇಲ್ ಮಾಡುತ್ತೇವೆ ಎಂದರೆ ಅದು ಸಾಧ್ಯವಿಲ್ಲ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಗುರುವಾರ ಸದಾಶಿವನಗರದಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬ್ಲ್ಯಾಕ್‌ಮೇಲ್ ಮಾಡುವ ಮೂರ್ಖರು ಕಾಂಗ್ರೆಸ್ ಪಕ್ಷದಲ್ಲಿ ಸಿಗುವುದಿಲ್ಲ. ನಾನು ಹೇಳಿದಂತೆಯೇ ನಡೆಯಬೇಕು ಅಂದರೆ ಅದು ಆಗಲ್ಲ, ಶಿಸ್ತಿನ ಸಿಪಾಯಿ ಆಗಿದ್ದರೆ ಮಾತ್ರ ಗೌರವ ಸಿಗುತ್ತದೆ ಎಂದರು.

ರಾಜ್ಯದಲ್ಲಿ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಸಂಬಂಧ ಪಕ್ಷದ ಹೈಕಮಾಂಡ್ ಮಟ್ಟದಲ್ಲಿ ಯಾವ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ ಎಂಬುದು ನನಗೆ ಗೊತ್ತಿಲ್ಲ. ಏನಾಗುತ್ತದೆಯೋ ಅದನ್ನು ಕಾದು ನೋಡೋಣ ಎಂದು ಶಿವಕುಮಾರ್ ಹೇಳಿದರು.

ಕೆಪಿಸಿಸಿಗೆ ಏನು ಆಗಿಲ್ಲ. ಡಿ.28ರಂದು ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಕೇಂದ್ರ ಸರಕಾರದ ಜನ ವಿರೋಧಿ ನೀತಿಗಳ ವಿರುದ್ಧ ಬೃಹತ್ ಪ್ರತಿಭಟನಾ ಮೆರವಣಿಗೆ ಆಯೋಜಿಸಲಾಗಿದೆ. ಎಲ್ಲ ಮುಖಂಡರು ಕಾಂಗ್ರೆಸ್ ಧ್ವಜ ಹಿಡಿದು ಸಾಗುತ್ತಾರೆ. ಕೆಪಿಸಿಸಿಗೆ ಹೊಸಬರು ಅಧ್ಯಕ್ಷರಾಗುತ್ತಾರಾ ಅಥವಾ ಹಳಬರು ಅಧ್ಯಕ್ಷರಾಗುತ್ತಾರಾ? ಗೊತ್ತಿಲ್ಲ ಎಂದು ಅವರು ಹೇಳಿದರು.

ಮಂಗಳೂರಿನಲ್ಲಿ ಸಿಎಎ ಹಾಗೂ ಎನ್‌ಆರ್‌ಸಿ ವಿರೋಧಿಸಿ ನಡೆಯುತ್ತಿದ್ದ ಪ್ರತಿಭಟನೆ ವೇಳೆ ಗೋಲಿಬಾರ್‌ಗೆ ಬಲಿಯಾದವರಿಗೆ ರಾಜ್ಯ ಸರಕಾರ ಪರಿಹಾರ ಘೋಷಿಸಿತ್ತು. ಆದರೆ, ದಿಲ್ಲಿ ನಾಯಕರಿಂದ ಮುಖ್ಯಮಂತ್ರಿ ಯಡಿಯೂರಪ್ಪಗೆ ಫೋನ್ ಕರೆ ಬರುತ್ತಿದ್ದಂತೆ ಪರಿಹಾರದ ಚೆಕ್ ಅನ್ನು ತಡೆ ಹಿಡಿದಿದ್ದಾರೆ ಎಂದು ಶಿವಕುಮಾರ್ ಟೀಕಿಸಿದರು.

ಗಲಭೆ ಪ್ರಕರಣ ಕುರಿತು ನ್ಯಾಯಾಲಯ ವಿಚಾರಣೆ ನಡೆಸಿ ತೀರ್ಪು ನೀಡುವ ಮುನ್ನವೇ ಬಿಜೆಪಿ ನಾಯಕರು ತೀರ್ಪು ನೀಡಿದ್ದಾರೆ. ಈ ಬಿಜೆಪಿ ಸರಕಾರದ ನೀತಿಯನ್ನು ರಾಜ್ಯದ ಜನ ಗಮನಿಸಿದ್ದಾರೆ. ನಾವು ಕೂಡ ಈ ಬಗ್ಗೆ ಜನತೆಗೆ ಮನವರಿಕೆ ಮಾಡಿಕೊಡುವ ಕೆಲಸ ಮಾಡುತ್ತೇವೆ ಎಂದು ಅವರು ಹೇಳಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News