ಬಿಬಿಎಂಪಿ ಸೊತ್ತನ್ನು ಖಾಸಗಿ ಸಂಸ್ಥೆಗಳು ಕಬಳಿಸಲು ಅಧಿಕಾರಿಗಳ ನೆರವು: ಆರೋಪ

Update: 2019-12-26 17:07 GMT

ಬೆಂಗಳೂರು, ಡಿ.26: ನಗರದ 1600 ಕೋಟಿ ರೂ. ಮೌಲ್ಯದ ನಗರಪಾಲಿಕೆಯ ಸೊತ್ತನ್ನು ಖಾಸಗಿ ಸಂಸ್ಥೆಗಳು ಕಬಳಿಸಲು ಬಿಬಿಎಂಪಿ ಅಧಿಕಾರಿಗಳು ನೆರವಾಗಿರುವ ಬೃಹತ್ ಹಗರಣ ನ್ಯಾಯಾಂಗ ತನಿಖೆಗೆ ವಹಿಸಬೇಕು ಎಂದು ಬಿಜೆಪಿ ವಕ್ತಾರ ಎನ್.ಆರ್.ರಮೇಶ್ ಆಗ್ರಹಿಸಿದ್ದಾರೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಠ್ಠಲ್ ಮಲ್ಯ ರಸ್ತೆ ಹಿಂಭಾಗದಲ್ಲಿ ಕಂಠೀರವ ಕ್ರೀಡಾಂಗಣಕ್ಕೆ ಹೊಂದಿಕೊಂಡಂತಿರುವ 23ನೇ ನಂಬರಿನ 12.17 ಎಕರೆ ವಿಸ್ತೀರ್ಣದ ಜಾಗವನ್ನು 1921-22ರಲ್ಲಿ ಆಗಿನ ಈಸ್ಟ್ ಇಂಡಿಯಾ ಕಂಪೆನಿ ಸರಕಾರ ಸೆಂಟ್ ಜೋಸ್ ಕ್ರಿಕೆಟ್ ಮೈದಾನ ನಿರ್ಮಿಸುವ ಉದ್ದೇಶಕ್ಕಾಗಿ ದ ಕರ್ನಾಟಕ ಜಿಸ್ಯೂಟ್ ಎಜುಕೇಷನ್ ಸೊಸೈಟಿಗೆ 99 ವರ್ಷಗಳಿಗೆ ಗುತ್ತಿಗೆ ಆಧಾರದ ಮೇಲೆ ನೀಡಿತ್ತು. 1982ರಲ್ಲಿ ರಿಚ್‌ಮಂಡ್ ವೃತ್ತ ಬಳಿ ಸೆಂಟ್ ಜೋಸ್ ಕಾಲೇಜನ್ನು ಆರಂಭಿಸಲಾಗಿದೆ. ನಂತರ ದಿನಗಳಲ್ಲಿ ಕ್ರಿಕೆಟ್ ಮೈದಾನಕ್ಕಾಗಿ ನೀಡಿದ್ದ ಜಾಗವನ್ನು ಕರ್ನಾಟಕ ಜಿಸ್ಯೂಟ್ ಎಜುಕೇಷನ್ ಸೊಸೈಟಿ ಖಾಸಗಿ ಕಂಪೆನಿಗಳಿಗೆ ಪರಭಾರೆ ಮಾಡಿದೆ. ಒಟ್ಟು 5,29,966 ಚದರ ಅಡಿ ವಿಸ್ತೀರ್ಣದ ಸೊತ್ತಿನಲ್ಲಿ 50,825 ಚದರ ಅಡಿ ವಿಸ್ತೀರ್ಣದ ಉತ್ತರ ಭಾಗದ ಸೊತ್ತನ್ನು 2004ರ ಸೆ.21ರಂದು ರಮೇಶ್ ಬಿ.ಗೌಡ ಮಾಲಕತ್ವದ ಮೆಸೆರ್ಸ್ ಅಮಾಲಗಮೇಟೆಡ್ ಬೀನ್ ಕಾಫಿ ಟ್ರೇಡಿಂಗ್ ಕೋ.ಲಿ. ಸಂಸ್ಥೆಗೆ 30 ವರ್ಷಗಳ ಉಪ ಗುತ್ತಿಗೆಯನ್ನು ಕರ್ನಾಟಕ ಜಿಸ್ಯೂಟ್ ಎಜುಕೇಷನ್ ಸಂಸ್ಥೆ ನೀಡಿದೆ ಎಂದು ತಿಳಿಸಿದರು.

ಅದರಲ್ಲಿ 15,495 ಚದರ ಅಡಿ ವಿಸ್ತೀರ್ಣದಲ್ಲಿ 14 ಅಂತಸ್ತುಗಳ ಕಟ್ಟಡವನ್ನು ಖಾಸಗಿ ಕಂಪೆನಿ ನಿರ್ಮಿಸಿಕೊಂಡಿದೆ. ಕರ್ನಾಟಕ ಜಿಸ್ಯೂಟ್ ಎಜುಕೇಷನ್ ಸಂಸ್ಥೆ ಖಾಸಗಿ ಕಂಪೆನಿಯಿಂದ ವರ್ಷಕ್ಕೆ 50 ಲಕ್ಷದಿಂದ 1 ಕೋಟಿ ರೂ.ವರೆಗೂ ವಾರ್ಷಿಕ ಬಾಡಿಗೆ ಪಡೆಯುತ್ತಿದೆ. ಈ ಸ್ವತ್ತನ್ನು ಈಗ ಈ ಕಂಪೆನಿ 250 ಕೋಟಿ ರೂ.ಗಳ ಪಾಲಿಕೆ ಆಸ್ತಿಯನ್ನು ಬೇರೆಯವರಿಗೆ ಮಾರಾಟ ಮಾಡಲು ಮುಂದಾಗಿದೆ. ಇದೇ ಸೊತ್ತಿನಲ್ಲಿ 41,334 ಚದರ ಅಡಿ ವಿಸ್ತೀರ್ಣದ ಸೊತ್ತನ್ನು ಅರುಣ್ ಟವರ್ಸ್ ಪ್ರೈ.ಲಿ. ಎಂಬ ಸಂಸ್ಥೆಗೆ 33 ವರ್ಷಗಳ ಗುತ್ತಿಗೆಗೆ ನೀಡಲಾಗಿದೆ. ಈ ಕಂಪೆನಿಯ ಮಾಲಕರು ಮಲ್ಯ ಆಸ್ಪತ್ರೆಯ ನಿರ್ದೇಶಕರಲ್ಲಿ ಒಬ್ಬರು ಎಂದು ಆರೋಪಿಸಿದರು.

ಕರ್ನಾಟಕ ಜಿಸ್ಯೂಟ್ ಎಜುಕೇಷನ್ ಸೊಸೈಟಿಗೆ ಗುತ್ತಿಗೆ ಆಧಾರದ ಮೇಲೆ ನೀಡಲಾಗಿದ್ದ ಭೂಮಿಯನ್ನು ಉಪ ಗುತ್ತಿಗೆ ನೀಡಿರುವುದು ಸಂಪೂರ್ಣ ಕಾನೂನು ಬಾಹಿರ. ಮುಂದೊಂದು ದಿನ ಕಾನೂನು ತೊಡಕು ಎದುರಾಗಬಹುದು ಎಂಬ ಆತಂಕದಲ್ಲಿ ಈ ಸ್ವತ್ತಿಗೆ ಸಂಬಂಧಪಟ್ಟಂತೆ ಬಿಬಿಎಂಪಿಯಲ್ಲಿದ್ದ ಎಲ್ಲಾ ದಾಖಲಾತಿಗಳನ್ನು ಖಾಸಗಿ ಕಂಪೆನಿಯವರು ಅಧಿಕಾರಿಗಳ ಜತೆ ಕೈಜೋಡಿಸಿ ನಾಶ ಮಾಡಿದ್ದಾರೆ ಎಂದು ಆರೋಪಿಸಿದ ಅವರು, ಬಿಬಿಎಂಪಿ ಆಯುಕ್ತರು ಕಾಳಜಿ ವಹಿಸಿ ಉಪ ನೋಂದಣಾಧಿಕಾರಿಗಳ ಕಚೇರಿ, ಭೂ ಮಾಪನಾ ಕಚೇರಿಗಳಲ್ಲಿ ಹಳೆಯ ಕಡತಗಳ ಪರಿಶೀಲಿಸಿದರೆ ಮೂಲ ದಾಖಲೆಗಳ ಪತ್ತೆಯಾಗುತ್ತದೆ. ಅವುಗಳ ಪತ್ತೆ ಹಚ್ಚಿ ಸರಕಾರಿ ಸೊತ್ತನ್ನು ಉಳಿಸುವ ಪ್ರಯತ್ನ ಮಾಡಬೇಕು ಎಂದು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News