ವಿಸ್ಡನ್ ಕ್ರಿಕೆಟಿಗರ ದಶಕದ ಪಟ್ಟಿಯಲ್ಲಿ ಕೊಹ್ಲಿಗೆ ಸ್ಥಾನ

Update: 2019-12-27 03:53 GMT

ಲಂಡನ್, ಡಿ.26: ಭಾರತದ ನಾಯಕ ವಿರಾಟ್ ಕೊಹ್ಲಿ, ಇತರ ನಾಲ್ವರು ಕ್ರಿಕೆಟಿಗರ ಜೊತೆ ವಿಸ್ಡನ್ ಕ್ರಿಕೆಟಿಗರ ದಶಕದ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಕೊಹ್ಲಿ ಅವರಲ್ಲದೆ ದಕ್ಷಿಣ ಆಫ್ರಿಕಾದ ಡೇಲ್ ಸ್ಟೇಯ್ನಿ ಹಾಗೂ ಎಬಿಡಿ ವಿಲಿಯರ್ಸ್, ಆಸ್ಟ್ರೇಲಿಯದ ಸ್ಟೀವ್ ಸ್ಮಿತ್ ಹಾಗೂ ಮಹಿಳಾ ಆಲ್‌ರೌಂಡರ್ ಎಲ್ಲಿಸ್ ಪೆರ್ರಿ ದಶಕದ ಐವರು ಕ್ರಿಕೆಟಿಗರ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಕೊಹ್ಲಿ ಕಳೆದ 10 ವರ್ಷಗಳ ಅವಧಿಯಲ್ಲಿ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿ 5,775ಕ್ಕೂ ಅಧಿಕ ರನ್ ಕಲೆಹಾಕಿದ್ದಾರೆ.ಕಳೆದ 10 ವರ್ಷಗಳಲ್ಲಿ ಓರ್ವ ಶ್ರೇಷ್ಟ ಬ್ಯಾಟ್ಸ್ ಮನ್ ಆಗಿ ಗುರುತಿಸಿಕೊಂಡಿದ್ದಾರೆ. 31ರ ಹರೆಯದ ಕೊಹ್ಲಿ ದಶಕದ ವಿಸ್ಡನ್ ಟೆಸ್ಟ್ ತಂಡ ಹಾಗೂ ಏಕದಿನ ಇಲೆವೆನ್ ತಂಡದ ನಾಯಕನಾಗಿಯೂ ಆಯ್ಕೆಯಾಗಿದ್ದಾರೆ. ಕಳೆದ ಒಂದು ದಶಕದ ಅವಧಿಯಲ್ಲಿ ಕೊಹ್ಲಿ ಟೆಸ್ಟ್‌ನಲ್ಲಿ 27 ಶತಕಗಳ ಸಹಿತ 7,202 ರನ್ ಗಳಿಸಿದರೆ, ಏಕದಿನ ಕ್ರಿಕೆಟ್‌ನಲ್ಲಿ 11,125 ರನ್ ಹಾಗೂ ಟ್ವೆಂಟಿ-20ಯಲ್ಲಿ 2,633 ರನ್ ಗಳಿಸಿದ್ದಾರೆ. ಎಲ್ಲ ಮಾದರಿಯ ಕ್ರಿಕೆಟ್‌ನಲ್ಲಿ 50ಕ್ಕೂ ಅಧಿಕ ಸರಾಸರಿ ಕಾಯ್ದುಕೊಂಡಿರುವ ಕೊಹ್ಲಿ ಈಗಾಗಲೇ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿ 70 ಶತಕಗಳನ್ನು ಗಳಿಸಿದ್ದಾರೆ. ರಿಕಿ ಪಾಂಟಿಂಗ್(71)ಹಾಗೂ ಸಚಿನ್ ತೆಂಡುಲ್ಕರ್‌ಗೆ(100)ತೀವ್ರ ಪೈಪೋಟಿ ನೀಡುತ್ತಿದ್ದಾರೆ. ಸಾರ್ವಕಾಲಿಕ ಶ್ರೇಷ್ಠ ರನ್ ಸ್ಕೋರರ್‌ಗಳ ಪಟ್ಟಿಯಲ್ಲಿ ಕೊಹ್ಲಿ(21,444 ರನ್)ಮೂರನೇ ಸ್ಥಾನದಲ್ಲಿದ್ದಾರೆ. ಪಾಂಟಿಂಗ್(27,483 ರನ್)ಹಾಗೂ ತೆಂಡುಲ್ಕರ್(34,357 ರನ್)ಮೊದಲೆರಡು ಸ್ಥಾನದಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News