×
Ad

ಪಿಎಫ್‌ಐ, ಎಸ್‌ಡಿಪಿಐ ಸಂಘಟನೆಗಳನ್ನು ನಿಷೇಧಿಸಬೇಕು: ಸಚಿವ ಸುರೇಶ್ ಕುಮಾರ್

Update: 2019-12-27 18:12 IST

ಬೆಂಗಳೂರು, ಡಿ. 27: ಶಾಲಾ ಪಠ್ಯ ಕ್ರಮದಲ್ಲಿರುವ ಟಿಪ್ಪು ಸುಲ್ತಾನ್ ಕುರಿತ ಮಾಹಿತಿಗಳ ಸಂಬಂಧ ತಜ್ಞರ ಸಮಿತಿ ವರದಿ ನೀಡಿದೆ. ಸಿಎಂ ಯಡಿಯೂರಪ್ಪನವರ ಜತೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಸ್ಪಷ್ಟಣೆ ನೀಡಿದ್ದಾರೆ.

ಶುಕ್ರವಾರ ವಿಧಾನಸೌಧದಲ್ಲಿನ ತನ್ನ ಕಚೇರಿಯಲ್ಲಿ ಮುದ್ರಣ, ಲೇಖನ ಸಾಮಗ್ರಿ ಮತ್ತು ಪ್ರಕರಣಗಳ ಇಲಾಖೆ ಹೊರತಂದಿರುವ 2020ರ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿದ ಅವರು, ಟಿಪ್ಪು ಸುಲ್ತಾನ್ ಪಠ್ಯದ ಬಗ್ಗೆ ಸಿಎಂ ಜತೆ ಚರ್ಚಿಸಿದ ಬಳಿಕ ಸರಕಾರದ ನಿಲುವು ಏನೆಂದು ಹೇಳುತ್ತೇನೆ ಎಂದರು.

ಎಸ್‌ಡಿಪಿಐ ನಿಷೇಧ ಕುರಿತು ಚರ್ಚೆ: ಹಿಂಸಾಚಾರಕ್ಕೆ ಪ್ರಚೋದನೆ ನೀಡುತ್ತಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್‌ಐ), ಸೋಶಿಯಲ್ ಡೆಮಾಕ್ರೆಟಿಕ್ ಫಾರ್ಟಿ ಆಫ್ ಇಂಡಿಯಾ(ಎಸ್‌ಡಿಪಿಐ) ಸಂಘಟನೆಗಳನ್ನು ನಿಷೇಧಿಸುವ ಸಂಬಂಧ ಸಿಎಂ ಜತೆ ಚರ್ಚಿಸಲಾಗುವುದು ಎಂದರು.

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆಗೆ ಬೇಡ ಎನ್ನುವುದಿಲ್ಲ. ಆದರೆ, ಪ್ರತಿರೋಧದ ನೆಪದಲ್ಲಿ ಹಿಂಸಾಚಾರ ಮತ್ತು ಸಾರ್ವಜನಿಕ ಆಸ್ತಿಗೆ ಹಾನಿ ಸರಿಯಲ್ಲ ಎಂದು ಆಕ್ಷೇಪಿಸಿದ ಅವರು, ಮೇಲ್ಕಂಡ ಎರಡೂ ಸಂಘಟನೆಗಳ ನಿಷೇಧಿಸಬೇಕಿದೆ ಎಂದರು.

ಉತ್ತರ ಪ್ರದೇಶ ಮಾದರಿಯಲ್ಲೆ ರಾಜ್ಯದಲ್ಲಿಯೂ ಸಿಎಎ ವಿರುದ್ಧ ಪ್ರತಿಭಟನೆ ವೇಳೆ ಮಂಗಳೂರಿನಲ್ಲಿ ಸಾರ್ವಜನಿಕ ಆಸ್ತಿ ಹಾನಿ ಮಾಡಿದವರಿಂದಲೇ ನಷ್ಟ ವಸೂಲಿ ಮಾಡಬೇಕೆಂಬ ಕಂದಾಯ ಸಚಿವ ಅಶೋಕ್ ಚಿಂತನೆಗೆ ನನ್ನ ಬೆಂಬಲವಿದೆ ಎಂದು ಸುರೇಶ್‌ ಕುಮಾರ್ ತಿಳಿಸಿದರು.

ಯಾರಿಗೆ ಸಂದೇಶ: ಕನಕಪುರದಲ್ಲಿ ಏಸು ಕ್ರಿಸ್ತ ಪ್ರತಿಮೆ ನಿರ್ಮಿಸಲು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ನೆರವು ನೀಡುವ ಮೂಲಕ ಅವರು ಯಾರನ್ನು ಮೆಚ್ಚಿಸಲು ಹೊರಟ್ಟಿದ್ದಾರೋ ಗೊತ್ತಿಲ್ಲ. ಅವರು ನೀಡಲು ಮುಂದಾಗಿರುವ ಭೂಮಿ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News