ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳನ್ನು ಜಾಗತಿಕ ನಾಗರಿಕರನ್ನಾಗಿ ರೂಪಿಸಲಿ: ಮಾಜಿ ಸಿಎಂ ವೀರಪ್ಪ ಮೊಯ್ಲಿ

Update: 2019-12-27 18:05 GMT

ಬೆಂಗಳೂರು, ಡಿ.27: ದೇಶದ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳನ್ನು ಜಾಗತಿಕ ನಾಗರಿಕರನ್ನಾಗಿ ತಯಾರು ಮಾಡಬೇಕಿದ್ದು, ಕೌಶಲ್ಯಾಭಿವೃದ್ಧಿಯ ಕಡೆಗೆ ಹೆಚ್ಚು ಒತ್ತು ಕೊಡಬೇಕಾಗಿದೆ ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ತಿಳಿಸಿದ್ದಾರೆ.

ಶುಕ್ರವಾರ ನಗರದ ದಿ ಕಮ್ಯುನಿಟಿ ಸೆಂಟರ್ ಗ್ರೂಪ್ ಆಫ್ ಎಜುಕೇಶನಲ್ ಇನ್‌ಸ್ಟಿಟ್ಯೂಟ್‌ನ ವಜ್ರ ಮಹೋತ್ಸವದಲ್ಲಿ ವಜ್ರಶ್ರೀ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಭವಿಷ್ಯವನ್ನು ಉನ್ನತಗೊಳಿಸುವುದೇ ಶಿಕ್ಷಣ ಸಂಸ್ಥೆಗಳ ಪ್ರಧಾನ ಆದ್ಯತೆಯಾಗಿರಲಿ ಎಂದು ಆಶಿಸಿದರು.

ದೇಶದಲ್ಲಿ ಗುಣಮಟ್ಟದ ಶಿಕ್ಷಣದ ಅವಶ್ಯಕತೆ ಇದೆ. ಪ್ರತಿ ವಿದ್ಯಾರ್ಥಿಯು ತಾನು ಭವಿಷ್ಯದಲ್ಲಿ ಏನಾಗಬೇಕೆಂಬ ಗಟ್ಟಿ ಆಲೋಚನೆಗಳು ಇದ್ದಲ್ಲಿ ಮಾತ್ರವೇ ಉತ್ತಮ ವ್ಯಕ್ತಿಯಾಗಿ ರೂಪಗೊಳ್ಳಲು ಸಾಧ್ಯ. ಜಾಗತಿಕ ಉದ್ಯಮ ಕ್ಷೇತ್ರದಲ್ಲಿ ಭಾರತೀಯರು ಸಿಇಒನಂತಹ ಉನ್ನತ ಹುದ್ದೆಗಳನ್ನು ನಿರ್ವಹಿಸುತ್ತಿರುವುದು ಹೆಮ್ಮೆಯ ವಿಷಯವೆಂದು ಅವರು ಸಂತಸ ವ್ಯಕ್ತಪಡಿಸಿದರು.

ಶಿಕ್ಷಣದಿಂದ ಮಾತ್ರ ಸಮಾಜದಲ್ಲಿ ಸಮಾನತೆ ತರಲು ಸಾಧ್ಯ. ವಿದ್ಯಾರ್ಥಿಗಳು ಕೇವಲ ಪಠ್ಯಕ್ಕೆ ಸೀಮಿತಗೊಳ್ಳದೆ, ಸಾಮಾಜಿಕ, ರಾಜಕೀಯವಾಗಿ ಜಾಗೃತಿಗೊಳ್ಳುವ ಮೂಲಕ ದೇಶವನ್ನು ಸರ್ವತೋಮುಖವಾಗಿ ಅಭಿವೃದ್ದಿ ಪಡಿಸುವಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲಿ ಎಂದು ಅವರು ಹೇಳಿದರು.

ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾ.ಎಂ.ಎನ್. ವೆಂಕಟಾಚಲಯ್ಯ ಮಾತನಾಡಿ, ಇಂದು ಗಣಿತ ಶಾಸ್ತ್ರಕ್ಕೆ ಹೆಚ್ಚು ಒತ್ತು ನೀಡಬೇಕಿದೆ. ಇಲ್ಲದಿದ್ದಲ್ಲಿ ಶಿಕ್ಷಣದ ಗುಣಮಟ್ಟ ಉತ್ತಮವಾಗದು. ಹೀಗಾಗಿ ದೇಶದ ಶಿಕ್ಷಣ ವ್ಯವಸ್ಥೆ ಆಮೂಲಾಗ್ರವಾಗಿ ಬದಲಾಗಬೇಕಿದೆ. ಶಿಕ್ಷಣದ ಪಠ್ಯಕ್ರಮಗಳನ್ನು ಬದಲಿಸುವ ಬಗ್ಗೆ ಶಿಕ್ಷಣ ತಜ್ಞರು ಆಲೋಚಿಸಬೇಕಿದೆ ಎಂದು ಹೇಳಿದರು.

ದಿ ಕಮ್ಯುನಿಟಿ ಸೆಂಟರ್ ಗ್ರೂಪ್ ಆಫ್ ಎಜುಕೇಷನ್ ಇನ್‌ಸ್ಟಿಟ್ಯೂಟ್‌ನ ಅಧ್ಯಕ್ಷ ಕೆ.ಎನ್. ನಾಗರಾಜ್ ಮಾತನಾಡಿ, ಸ್ಥಳೀಯ ವಿದ್ಯಾರ್ಥಿಗಳಿಗೆ ಶಿಕ್ಷಣ ಸಂಸ್ಥೆಯಲ್ಲಿ ಹೆಚ್ಚು ಆದ್ಯತೆ ನೀಡಲಾಗುವುದು. ಬಡವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವುದೇ ಸಂಸ್ಥೆಯ ಮೊದಲ ಆದ್ಯತೆ ಎಂದು ಹೇಳಿದರು.

ಸಮಾರಂಭದಲ್ಲಿ ಶಾಸಕ ಉದಯ ಗರುಡಾಚಾರ್, ಮಾಜಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್, ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಜಯನಗರ ಕೋ- ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಬಿ.ಆರ್. ವಾಸುದೇವ್, ಬಿಬಿಎಂಪಿ ಜಂಟಿ ಆಯುಕ್ತ ಸರ್ಫರಾಝ್ ಖಾನ್, ಸಂಸ್ಥೆಯ ಕಾರ್ಯದರ್ಶಿ ಚಿಕ್ಕಯ್ಯ ಉಪಸ್ಥಿತರಿದ್ದರು.

ನಾನು ಸಣ್ಣ ಕೈಗಾರಿಕಾ ಸಚಿವನಾಗಿದ್ದ ವೇಳೆ ನಗರವನ್ನು ಸಿಲಿಕಾನ್ ಸಿಟಿ ಮಾಡುವ ಪ್ರಯತ್ನಕ್ಕೆ ಮುಂದಾದಾಗ ನನಗೆ ಯಾರಿಂದಲೂ ಸಹಕಾರ ಸಿಗಲಿಲ್ಲ. ಒಂದು ಸಾವಿರ ಎಕರೆ ಜಮೀನನ್ನು ಸ್ವಾಧೀನ ಪಡಿಸಿಕೊಂಡು ಐಟಿಪಿಎಲ್ ಮಾಡಲು ಮುಂದಾದಾಗಲೂ ಸಹಕಾರ ಸಿಗಲಿಲ್ಲ. ಆದರೆ, ನಾನು ನಿರಾಶನಾಗಲಿಲ್ಲ. ನನ್ನ ಪ್ರಯತ್ನಗಳನ್ನು ಬಿಡಲಿಲ್ಲ. ಹಾಗಾಗಿಯೇ ಇಂದು ಬೆಂಗಳೂರು ನಗರ ಸಿಲಿಕಾನ್ ಸಿಟಿಯಾಗಿದೆ.

-ವೀರಪ್ಪ ಮೊಯ್ಲಿ, ಮಾಜಿ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News