×
Ad

ಪ್ಲಾಸ್ಟಿಕ್ ಮರುಬಳಕೆ ಸಂಶೋಧನೆಗೆ ಹೆಚ್ಚಿನ ಸಹಕಾರ: ಸಿಎಂ ಯಡಿಯೂರಪ್ಪ

Update: 2019-12-27 18:19 IST

ಬೆಂಗಳೂರು, ಡಿ.27: ರಾಜ್ಯದಲ್ಲಿ ಪ್ಲಾಸ್ಟಿಕ್, ಪಾಲಿಮರ್ ತ್ಯಾಜ್ಯ ಮರುಬಳಕೆ ಹಾಗೂ ನಿರ್ವಹಣೆ ಮಾಡಲು ಅಗತ್ಯವಿರುವ ಸಂಶೋಧನೆ ಹಾಗೂ ವಿಸ್ತರಣೆಗೆ ಸರಕಾರದ ವತಿಯಿಂದ ಹೆಚ್ಚಿನ ಸಹಕಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದ್ದಾರೆ.

ಶುಕ್ರವಾರ ನಗರದ ಕೆಂಪೇಗೌಡ ವಿಮಾನ ನಿಲ್ದಾಣದ ಬಳಿ ಕೇಂದ್ರ ಹಾಗೂ ರಾಜ್ಯ ಸರಕಾರದ ಸಹಭಾಗಿತ್ವದಲ್ಲಿ ನೂತನವಾಗಿ ನಿರ್ಮಿಸಿರುವ ಕೇಂದ್ರ ಪ್ಲಾಸ್ಟಿಕ್ ಮತ್ತು ಎಂಜಿನಿಯರಿಂಗ್ ತಾಂತ್ರಿಕ ಸಂಸ್ಥೆ ಸಿಐಪಿಇಟಿ ಎಸ್‌ಆರ್‌ಪಿ ಎಪಿಡಿಡಿಆರ್‌ಎಲ್ ಬೆಂಗಳೂರು ಸಂಸ್ಥೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕೇಂದ್ರ ಹಾಗೂ ರಾಜ್ಯ ಸರಕಾರಗಳ ಸಹಯೋಗದಲ್ಲಿ ಸಿಪೆಟ್‌ನಂತಹ ಉಪಯುಕ್ತ ಸಂಸ್ಥೆಯನ್ನು ಸ್ಥಾಪಿಸಿರುವುದು ಹೆಮ್ಮೆಯ ಸಂಗತಿ. ಇದರಿಂದಾಗಿ ಪರಿಸರಕ್ಕೆ ಉಂಟಾಗುವ ಹಾನಿಯನ್ನು ಗಣನೀಯವಾಗಿ ತಗ್ಗಿಸಬಹುದಾಗಿದ್ದು, ಈ ಸಂಸ್ಥೆಯ ಬೆಳವಣಿಗೆ ಹಾಗೂ ವಿಸ್ತರಣೆಗೆ ರಾಜ್ಯ ಸರಕಾರ ಅಗತ್ಯ ಸಹಕಾರ ನೀಡಲು ಬದ್ಧವಾಗಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಪ್ಲಾಸ್ಟಿಕ್ ಪಾಲಿಮರ್ ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಮಹತ್ತರ ಪಾತ್ರ ವಹಿಸುತ್ತವೆ. ಬೆಂಗಳೂರು ಸಂಶೋಧನೆ ಹಾಗೂ ಅನುಷ್ಠಾನದಲ್ಲಿ ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುತ್ತಿರುವುದು ಹೆಮ್ಮೆಯ ವಿಷಯ. ಪ್ಲಾಸ್ಟಿಕ್ ಪಾಲಿಮರ್ ಗೃಹ ಬಳಕೆಯಿಂದ ಹಿಡಿದು ಕೈಗಾರಿಕಾ ಕ್ಷೇತ್ರಗಳವರೆಗೆ ಅತಿಹೆಚ್ಚು ಬಳಕೆಯಾಗುತ್ತಿದೆ. ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಿಸಿ ಸಂಶೋಧನೆ ಮೂಲಕ ಮರುಬಳಕೆ ಮಾಡುವ ಮೂಲಕ ಪರಿಸರ ಹಾನಿ ತಗ್ಗಿಸಲು ಮುಂದಾಗಿರುವುದು ಶ್ಲಾಘನೀಯ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಕೇಂದ್ರ ಸಚಿವ ಸದಾನಂದಗೌಡ ಮಾತನಾಡಿ, ಸಿಪೆಟ್ ಸಂಸ್ಥೆ ದೇಶದಲ್ಲಿ 37 ಕೇಂದ್ರಗಳಿವೆ. ನಗರದಲ್ಲಿ ಉದ್ಘಾಟನೆಗೊಂಡ ಕೇಂದ್ರವು ತ್ಯಾಜ್ಯ ವಿಲೇವಾರಿ ಇ-ವೇಸ್ಟ್ ಮ್ಯಾನೇಜ್‌ಮೆಂಟ್ ಹೊಸ ವ್ಯವಸ್ಥೆ ಮಾಡುವ ಮೂಲಕ ತ್ಯಾಜ್ಯ ವಿಲೇವಾರಿ ಹಾಗೂ ಮರುಬಳಕೆಯಲ್ಲಿ ಹೊಸ ಭಾಷ್ಯ ಬರೆಯಲಿದೆ ಎಂದರು.

ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ ನಾರಾಯಣ್ ಮಾತನಾಡಿ, ಬೆಂಗಳೂರು ಎಲ್ಲ ಕ್ಷೇತ್ರದಲ್ಲೂ ಸಾಕಷ್ಟು ಅಭಿವೃದ್ಧಿ ಆಗುವ ಮೂಲಕ ವಿಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ. ಸಂಶೋಧನೆ ಲ್ಯಾಬ್‌ಗೆ ಸೀಮಿತವಾಗಿರದೆ ಎಲ್ಲರಿಗೂ ತಲುಪುವಂತಾಗಬೇಕು. ಸಿಪೆಟ್ ಸಂಸ್ಥೆ ಎಲ್ಲ ಕೈಗಾರಿಕಾ ಕ್ಷೇತ್ರಗಳಿಗೂ ಅಗತ್ಯವಿದೆ. ಇದರ ಆಶ್ರಯದಲ್ಲಿ ವಿಜ್ಞಾನಿಗಳಿಗೆ, ಶಿಕ್ಷಣ ಕ್ಷೇತ್ರಕ್ಕೆ ಸಹಕಾರಿಯಾಗಲಿದೆ ಎಂದರು.

ಮಾಜಿ ಸಚಿವ ಹಾಗೂ ಶಾಸಕ ಕೃಷ್ಣಭೈರೇಗೌಡ ಮಾತನಾಡಿ, ಮನುಷ್ಯನ ದುರಾಸೆಯಿಂದ ಹವಾಮಾನ ಬದಲಾವಣೆಯಾಗುತ್ತಿದ್ದು, ಪರಿಸರ ಸಮತೋಲನ ಕಳೆದುಕೊಳ್ಳುತ್ತಿದೆ. ಪರಿಸರದಲ್ಲಿ ಸಮತೋಲನ ಕಾಪಾಡಿಕೊಳ್ಳಲು ಈ ರೀತಿಯ ಸಂಶೋಧನೆ ಅಗತ್ಯವಾಗಿದೆ ಎಂದರು.

ಸಿಪೆಟ್ ಸಂಸ್ಥೆಯನ್ನು ಕೇಂದ್ರ ಹಾಗೂ ರಾಜ್ಯ ಸರಕಾರಗಳ ಸಹಯೋಗದಲ್ಲಿ ಸುಮಾರು 106ಕೋಟಿ ರೂ. ಅಂದಾಜು ವೆಚ್ಚದಲ್ಲಿ ನಿರ್ಮಿಸಲಾಗಿದೆ. ಕೈಗಾರಿಕೆ ಪ್ರಾರಂಭಿಸುವವರಿಗೆ ಅಗತ್ಯ ತರಬೇತಿ ಜೊತೆಗೆ ಅಂತರ್‌ರಾಷ್ಟ್ರೀಯ ಸಂಸ್ಥೆಗಳ ಸಹಭಾಗಿತ್ವದಲ್ಲಿ ಪಿಎಚ್‌ಡಿ ಹಾಗೂ ಸ್ನಾತಕೋತ್ತರ ಪದವಿ ನೀಡಲಾಗುತ್ತದೆ. ಈ ಸಂಸ್ಥೆಯಲ್ಲಿ ಪಾಲಿಮರ್ ಸಂಶೋಧನೆ, ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ, ಪಾಲಿಮರ್ ಶಕ್ತಿ ಉತ್ಪಾದನೆ, ವೈದ್ಯಕೀಯ ಹಾಗೂ ಕಟ್ಟಡ ನಿರ್ಮಾಣಕ್ಕೆ ಅಗತ್ಯವಿರುವ ಪರಿಸರ ಸ್ನೇಹಿ ಪರಿಕರಗಳ ಸೇರಿದಂತೆ ವೈಮಾನಿಕ ಹಾಗೂ ವಾಹನಗಳ ಬಿಡಿ ಭಾಗಗಳ ವಿನ್ಯಾಸ ಹಾಗೂ ಉನ್ನತೀಕರಣ ಮಾಡಲಾಗುತ್ತದೆ.

ಪ್ಲಾಸ್ಟಿಕ್ ಪಾಲಿಮರ್ ಮರುಬಳಕೆ ಅನುಷ್ಠಾನಕ್ಕೆ 500 ಎಕರೆ ಭೂಮಿ ಅಗತ್ಯವಿದ್ದು, ರಾಜ್ಯ ಸರಕಾರ ಜಾಗ ನೀಡಿದರೆ ಸಂಶೋಧನೆ ವಿಸ್ತರಣೆಯನ್ನು ಶೀಘ್ರದಲ್ಲಿ ಕೈಗೊಳ್ಳಲಾಗುವುದು.

-ಡಿ.ವಿ.ಸದಾನಂದ ಗೌಡ, ರಾಸಾಯನಿಕ ಹಾಗೂ ರಸಗೊಬ್ಬರ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News