ಯಕ್ಷಗಾನಕ್ಕೆ ಡಿಜಿಟಲೀಕರಣದ ನೆರವು: ಸಚಿವ ಸಿ.ಟಿ.ರವಿ

Update: 2019-12-27 12:53 GMT

ಬೆಂಗಳೂರು, ಡಿ.27: ಸಾಂಪ್ರದಾಯಿಕ ಕಲಾ ಪ್ರಕಾರಗಳಲ್ಲೇ ಅತ್ಯಂತ ಪ್ರಮುಖವಾದ ಯಕ್ಷಗಾನ ಉಳಿಸಿ, ಬೆಳಸಲು ಡಿಜಿಟಲೀಕರಣ ನೆರವು ನೀಡಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ಹೇಳಿದರು.

ಶುಕ್ರವಾರ ನಗರದ ಕನ್ನಡ ಭವನದಲ್ಲಿರುವ ನಯನ ಸಭಾಂಗಣದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಹಾಗೂ ಯಕ್ಷವಾಹಿನಿ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ‘ಯಕ್ಷಗಾನ ಪ್ರಸಂಗಗಳ ಡಿಜಿಟಲೀಕರಣ’ಗಳನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಬದಲಾದ ಕಾಲಘಟ್ಟದಲ್ಲಿ ಆಧುನಿಕ ಉಪಕರಣಗಳು ಬೇಜಾರಾದಾಗ, ಡಾಲರ್ ಜೀವನ ಸಾಕೆನಿಸಿದಾಗ ಹಾಗೂ ಮತ್ತೆ ಎಂದಾದರು ಒಂದು ದಿನ ತಂತಮ್ಮ ಊರುಗಳಿಗೆ ಹೋಗಬೇಕು ಎಂಬ ಮನಸ್ಸಾದಾಗ ಡಿಜಿಟಲೀಕರಣಗೊಂಡಿರುವ ಪ್ರಸಂಗಗಳು ಉಪಯೋಗಕ್ಕೆ ಬರಲಿವೆ ಎಂದು ನುಡಿದರು.

ನಮ್ಮ ಪೂರ್ವಿಕರು ಹೇಗೆಲ್ಲಾ ಪ್ರಸಂಗಗಳನ್ನು ಕಟ್ಟುತ್ತಿದ್ದರು ಎಂದು ಆಶ್ಚರ್ಯಪಡುವಷ್ಟರ ಮಟ್ಟಿಗೆ ಯಕ್ಷಗಾನ ಪ್ರಸಂಗಗಳಿವೆ. ಮುಂದಿನ ತಲೆಮಾರಿಗೆ ತಲುಪಿಸುವ ಉದ್ದೇಶದಿಂದ ಡಿಜಿಟಲೀಕರಣ ಮಾಡಲಾಗಿದೆ ಎಂದು ಹೇಳಿದರು. ಅವಿಭಕ್ತ ಕುಟುಂಬಗಳು ವಿಭಕ್ತ ಕುಟುಂಬಗಳಾಗಿ ಉದ್ಯೋಗ ಅರಸಿ ಊರು ಬಿಡುವ ಅನಿವಾರ್ಯತೆಯಲ್ಲಿ ಹಾಗೂ ಧಾವಂತದ ಬದುಕಿನಲ್ಲಿ ಕಲೆ-ಸಂಸ್ಕೃತಿ ಉಳಿಸಲು ಹೊರಟಿರುವ ಯಕ್ಷಗಾನ ಅಕಾಡೆಮಿ ಕಾರ್ಯ ಶ್ಲಾಘನೀಯ ಎಂದರು.

ಯಕ್ಷವಾಹಿನಿ ಸಂಸ್ಥೆ ಅಧ್ಯಕ್ಷ ಡಾ.ಆನಂದರಾಮ ಉಪಾಧ್ಯ ಮಾತನಾಡಿ, ಯಕ್ಷಗಾನದಲ್ಲಿ ಐದು ಸಾವಿರಕ್ಕೂ ಹೆಚ್ಚಿನ ಪ್ರಸಂಗಗಳಿವೆ. ಆದರೆ, ಆರಂಭದಲ್ಲಿ ಸದ್ಯ 200ರಿಂದ 300 ಪ್ರಸಂಗಗಳನ್ನಷ್ಟೇ ಡಿಜಿಟಲೀಕರಣ ಮಾಡಲಾಗುತ್ತಿದೆ. ಅವನತಿ ಹಾದಿಯಲ್ಲಿರುವ ಹಾಗೂ ಕೈ ಬರಹದಲ್ಲಿರುವ ಪ್ರಸಂಗಗಳನ್ನು ಯಕ್ಷಗಾನ ಅಕಾಡೆಮಿಗೆ ಸಾರ್ವಜನಿಕರು ತಲುಪಿಸಿದರೆ ಸ್ಕಾನ್ ಮಾಡಿ ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಲಾಗುತ್ತದೆ. ಈ ಮೂಲಕ ತುಂಬಾ ಹಳೆಯ ಪ್ರಸಂಗಗಳನ್ನು ಉಳಿಸಿದಂತಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ಇ-ಆಡಳಿತ ಸಲಹೆಗಾರ ಬೇಳೂರು ಸುದರ್ಶನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ರಂಗಪ್ಪ, ಅಕಾಡೆಮಿ ಅಧ್ಯಕ್ಷ ಎಂ.ಎ.ಹೆಗಡೆ, ಕುಲಸಚಿವ ಶಿವರುದ್ರಪ್ಪ, ಹಿರಿಯ ಪತ್ರಕರ್ತ ರವೀಂದ್ರ ಭಟ್ಟ ಐನಕೈ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News