×
Ad

ರಾಜ್ಯದಲ್ಲಿ ದಲಿತ ಚಳವಳಿಗಳು ಬೆಳೆಯಲು ಬಿ.ಬಸವಲಿಂಗಪ್ಪ ಕಾರಣ: ಹಿರಿಯ ಕವಿ ಸಿದ್ದಲಿಂಗಯ್ಯ

Update: 2019-12-27 23:32 IST

ಬೆಂಗಳೂರು, ಡಿ.27: ರಾಜ್ಯದಲ್ಲಿ ದಲಿತ ಚಳವಳಿಗಳು, ದಲಿತ ಸಂಘಟನೆಗಳು ಬೆಳೆಯಲು ಮಾಜಿ ಸಚಿವ ಬಿ.ಬಸವಲಿಂಗಪ್ಪ ಅವರೆ ಕಾರಣ ಎಂದು ಹಿರಿಯ ಕವಿ ಸಿದ್ದಲಿಂಗಯ್ಯ ಹೇಳಿದ್ದಾರೆ.

ಶುಕ್ರವಾರ ರಮಾಬಾಯಿ ಅಂಬೇಡ್ಕರ್ ಭವನದಲ್ಲಿ ಬೆಂವಿವಿ ಆಯೋಜಿಸಿದ್ದ ಬಸವಲಿಂಗಪ್ಪ ಅಭಿವೃದ್ಧಿ ಅಧ್ಯಯನ ಸಂಸ್ಥೆಯ ನೂತನ ಕಚೇರಿ ಉದ್ಘಾಟನೆ ಸಮಾರಂಭ, ಬಿ.ಬಸವಲಿಂಗಪ್ಪನವರ 27ನೆ ಮಹಾಪರಿನಿಬ್ಬಾಣದ ಸ್ಮರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಹೋರಾಟ ಮತ್ತು ಅಂಬೇಡ್ಕರ್ ಅವರ ಕುರಿತು ನಮಗೆ ತಿಳಿವಳಿಕೆ ನೀಡುತ್ತಿದ್ದ ಬಿ.ಬಸವಲಿಂಗಪ್ಪ ಅವರು ರಾಜ್ಯದಲ್ಲಿ ದಲಿತ ಚಳವಳಿಗಳು ಹಾಗೂ ದಲಿತ ಸಂಘಟನೆಗಳು ಬೆಳೆಯಲು ಕಾರಣರಾದರು ಎಂದು ಹೇಳಿದರು.

ನಾನು 8ನೆ ತರಗತಿಯಲ್ಲಿದ್ದಾಗಲೇ ಬಿ.ಬಸವಲಿಂಗಪ್ಪ ಅವರ ಹೋರಾಟವನ್ನು ನೋಡಿ ಬೆಳೆದವನು. ಅವರು ಒಂದು ಬಾರಿ ಪುರಭವನದ ಮುಂದೆ ದಲಿತ ಚಳವಳಿಯನ್ನು ನಡೆಸಿದಾಗ ನಮ್ಮ ಹಾಸ್ಟೆಲ್‌ನಿಂದ 300 ಜನರನ್ನು ಕರೆದುಕೊಂಡು ಹೋಗಿ ಬೆಂಬಲ ವ್ಯಕ್ತಪಡಿಸಿದ್ದೆ. ಆವಾಗಿನಿಂದಲೇ ಅವರ ಹೋರಾಟದ ಶಕ್ತಿಯನ್ನು ಬಲ್ಲವನಾಗಿದ್ದೇನೆ ಎಂದು ಹೇಳಿದರು.

ಬಿ.ಬಸವಲಿಂಗಪ್ಪ ಅವರ ನಿಕಟವರ್ತಿಯಾದ ಬಸವರಾಜು ಮಾತನಾಡಿ, ಈ ರಾಜ್ಯದಲ್ಲಿ ದಲಿತದ ಪರ ಧ್ವನಿ ಮೊಳಗಿಸಿದ ರಾಜಕೀಯ ನಾಯಕ ಯಾರಾದರೂ ಇದ್ದರೆ ಅದು ಬಿ.ಬಸವಲಿಂಗಪ್ಪ ಅವರು. ನಾವು ವಿಚಾರಶೀಲರಾಗದಿದ್ದರೆ, ನಮ್ಮ ವಿದ್ಯೆ ಮತ್ತು ಬುದ್ಧಿ ಗುಲಾಮ ಪದ್ಧತಿಗೆ ಒಳಗಾಗುತ್ತದೆ ಎಂದು ತಿಳಿಸಿಕೊಟ್ಟವರು ಎಂದು ಹೇಳಿದರು.

ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ.ಟಿ.ಎಚ್.ಮೂರ್ತಿ ಮಾತನಾಡಿ, ಹೋರಾಟಗಳಿಗೆ ಕಾನೂನಿನ ರೂಪಕೊಟ್ಟ ಮಹಾನ್ ಚೇತನ ಬಿ.ಬಸವಲಿಂಗಪ್ಪ ಹಾಗೂ ನಗರಗಳ ಅಭಿವೃದ್ಧಿ ವಿಷಯಕ್ಕೆ ಸಂಬಂಧಿಸಿದಂತೆ ಉಪನಗರಗಳ ನಿರ್ಮಾಣದ ಕುರಿತು ದೂರದರ್ಶಿತ್ವ ಹೊಂದಿದ್ದಂತಹ ರಾಜಕಾರಣಿ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಮಾಜಿ ಕುಲಸಚಿವ ಡಾ.ರಂಗಸ್ವಾಮಿ, ರೆವೆನ್ಯೂ ಅಧಿಕಾರಿ ಹನುಮಂತಪ್ಪ, ಡಿಎಸ್‌ಎಸ್ ಸಂಚಾಲಕ ಮೋಹನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News